ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಪಿ ಮುಖಂಡ ಆಜಂ ಖಾನ್‌ಗೆ ಜಾಮೀನು ನಕಾರ: ನ್ಯಾಯದ ಅಪಹಾಸ್ಯ- 'ಸುಪ್ರೀಂ'

Last Updated 6 ಮೇ 2022, 14:25 IST
ಅಕ್ಷರ ಗಾತ್ರ

ನವದೆಹಲಿ: ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಮಾಜಿ ಸಚಿವ ಹಾಗೂ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರ ಜಾಮೀನು ಅರ್ಜಿ ವಿಚಾರಣೆಗೆ ವಿಳಂಬ ಮಾಡುತ್ತಿರುವ ಅಲಹಾಬಾದ್ ಹೈಕೋರ್ಟ್ ಧೋರಣೆ ಬಗ್ಗೆ ಸುಪ್ರೀಂ ಕೋರ್ಟ್ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದೆ.

ಈ ಸಂಬಂಧ ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಹಾಗೂ ಬಿ.ಆರ್. ಗವಾಯಿ ಅವರಿದ್ದ ಪೀಠವು, 87 ಪ್ರಕರಣಗಳ ಪೈಕಿ 86 ಪ್ರಕರಣಗಳಲ್ಲಿ ಆಜಂ ಖಾನ್ ಅವರಿಗೆ ಜಾಮೀನು ಸಿಕ್ಕಿದೆ. ಜಮೀನು ಒತ್ತುವರಿ ಪ್ರಕರಣ ಹೊರತುಪಡಿಸಿ ಉಳಿದೆಲ್ಲಾ ಪ್ರಕರಣಗಳಲ್ಲಿ ಅವರು ಬಿಡುಗಡೆಯಾಗಿದ್ದಾರೆ.

ಈ ಬಗ್ಗೆ ಕಳೆದ 137 ದಿನಗಳಿಂದ ಯಾವುದೇ ಆದೇಶ ಹೊರಡಿಸಲಾಗಿಲ್ಲ. ಇದು ನ್ಯಾಯದ ಅಪಹಾಸ್ಯವಾಗಿದೆ. ಇದಕ್ಕಿಂತ ಹೆಚ್ಚು ನಾವೇನೂ ಹೇಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದೆ. ಅವರಿಗೆ(ಅಲಹಾಬಾದ್ ಹೈಕೋರ್ಟ್‌ಗೆ) ಇನ್ನೆರಡು ದಿನ ಕಾಲಾವಕಾಶ ನೀಡಲಾಗುವುದು. ಬುಧವಾರ ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.

ಫೆಬ್ರುವರಿ ತಿಂಗಳಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು ಮಧ್ಯಂತರ ಜಾಮೀನು ಕೋರಿ ಆಜಂ ಖಾನ್ ಅವರು ಸುಪ್ರೀಂ ಮೆಟ್ಟಿಲೇರಿದ್ದರು. ಆದರೆ, ಜಾಮೀನು ಅರ್ಜಿ ಇತ್ಯರ್ಥವಾಗಬೇಕಿರುವ ಅಲಹಾಬಾದ್ ಹೈಕೋರ್ಟ್‌ನಲ್ಲೇ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಹೇಳಿತ್ತು. ಖಾನ್‌ ಅವರು ಈಗ ಸೀತಾಪುರ ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT