ಶನಿವಾರ, ಮೇ 28, 2022
30 °C
‘ಉತ್ತಮ ಆಡಳಿತ ದಿನ’ ಕಾರ್ಯಕ್ರಮ

ದೇಶದಲ್ಲಿ ಮೋದಿಯಿಂದಲೇ ಉತ್ತಮ ಆಡಳಿತ: ಗೃಹ ಸಚಿವ ಅಮಿತ್‌ ಶಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಉತ್ತಮ ಆಡಳಿತಕ್ಕಾಗಿ ಜನರು ಹಲವಾರು ವರ್ಷಗಳಿಂದ ಕಾಯುತ್ತಿದ್ದರು. ಕಳೆದ ಏಳು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಜನರಿಗೆ ಉತ್ತಮ ಆಡಳಿತ ನೀಡುತ್ತಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

‘ಉತ್ತಮ ಆಡಳಿತ ದಿನ’ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿ. 25ರಂದು ‘ಉತ್ತಮ ಆಡಳಿತ ದಿನ’ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ. 

‘ನಮಗೆ ಸ್ವಾತಂತ್ರ್ಯ ದೊರಕಿ ಹಲವು ವರ್ಷಗಳಾದವು. ಆದರೆ ಯಾವಾಗ ಉತ್ತಮ ಆಡಳಿತ ದೊರಕುತ್ತದೆ ಎಂದು ಜನರು ಕೇಳುತ್ತಲೇ ಇದ್ದರು. ಉತ್ತಮ ಆಡಳಿತವನ್ನು ಕಾಣದ ಜನರಿಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ನಂಬಿಕೆಯೇ ಹೊರಟು ಹೊಗಿತ್ತು. ಮೋದಿ ಅವರು ತಳಮಟ್ಟದಿಂದಲೂ ಉತ್ತಮ ಆಡಳಿತ ನೀಡುವ ಮೂಲಕ ಪ್ರಜಾಪ್ರಭುತ್ವದ ಮೇಲೆ ಜನರಿಗೆ ವಿಶ್ವಾಸ ಮರಳುವಂತೆ ಮಾಡಿದ್ದಾರೆ’ ಎಂದರು.

‘2014ಕ್ಕೂ ಮೊದಲು ದೇಶದಲ್ಲಿ ಹಲವು ಸರ್ಕಾರಗಳು ಆಡಳಿತ ನಡೆಸಿ ಹೋಗಿವೆ. ಆದರೆ ಮೋದಿ ಅವರು ಅಧಿಕಾರಕ್ಕೆ ಬಂದಾಗ, ಇವರ ಸರ್ಕಾರ ಕೇವಲ ಅಧಿಕಾರ ನಡೆಸಲು ಬಂದಿಲ್ಲ, ದೇಶವನ್ನು ಬದಲಾಯಿಸಲು ಬಂದಿದೆ ಎಂದು ಜನರು ಅರ್ಥ ಮಾಡಿಕೊಂಡರು‘ ಎಂದು ಶಾ ಹೇಳಿದರು. 

‘ಈ ಮೊದಲು ಬಂದಿದ್ದ ಸರ್ಕಾರಗಳು ಮತ ಬ್ಯಾಂಕ್‌ಗಳನ್ನು ಗಮನದಲ್ಲಿರಿಸಿಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದವು. ಆದರೆ ಮೋದಿ ನೇತೃತ್ವದ ಸರ್ಕಾರವು ಜನರು ಇಷ್ಟವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು, ಜನರಿಗೆ ಒಳ್ಳೆಯದಾಗುವ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಿತು. ಇವೆರಡರ ನಡುವೆ ವ್ಯತ್ಯಾಸವಿದೆ. ಕೆಲ ನಿರ್ಧಾರಗಳಿಂದ ಜನಪ್ರಿಯತೆ ಸಿಗುತ್ತದೆ. ಆದರೆ ಅಂಥ ನಿರ್ಧಾರಗಳು ದೇಶಕ್ಕೆ ಸಮಸ್ಯೆ ತಂದೊಡ್ಡುತ್ತವೆ‘ ಎಂದು ಅವರು ಹೇಳಿದರು. 

ಏಳು ವರ್ಷಗಳಿಂದ ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪವಿಲ್ಲದಿರುವುದೇ ಉತ್ತಮ ಆಡಳಿತಕ್ಕೆ ನಿದರ್ಶನ. ಹಲವಾರು ದಶಕಗಳಿಂದ ಕಲ್ಯಾಣ ಕಾರ್ಯಕ್ರಮಗಳಿಂದ ವಂಚಿತರಾಗಿದ್ದ ಸುಮಾರು 60 ಕೋಟಿ ಜನರಿಗೆ ಅಭಿವೃದ್ಧಿಯ ಲಾಭ ಸಿಗುವಂತೆ ಮಾಡಲಾಯಿತು. ಬಡವರಿಗೆ ಮನೆಗಳು, ಶೌಚಾಲಯಗಳು, ವಿದ್ಯುತ್‌ ಸಂಪರ್ಕ ಮತ್ತು ಅಡುಗೆ ಅನಿಲ ಸೌಲಭ್ಯ ನೀಡಲಾಗಿದೆ ಎಂದು ವಿವರಿಸಿದರು.  

**

ಟಿಎಂಸಿ ತೊರೆದ ಐವರು ನಾಯಕರು
ಮುಂಬರುವ ಗೋವಾ ವಿಧಾನಸಭೆ ಚುನಾವಣೆಗೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷ ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿರುವ ವೇಳೆಯೇ, ಪಕ್ಷದ ಐವರು ಪ್ರಾಥಮಿಕ ಸದಸ್ಯತ್ವ ತೊರೆದಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. 

‘ಟಿಎಂಸಿಗೆ ಗೋವಾ ಅರ್ಥ ಆಗಿಲ್ಲ. ಮತಕ್ಕಾಗಿ ಹಿಂದೂ ಮತ್ತು ಕ್ರಿಶ್ಚಿಯನ್ನರ ನಡುವೆ ಒಡಕು ಮೂಡಿಸಲು ಟಿಎಂಸಿ ಪ್ರಯತ್ನಿಸುತ್ತಿದೆ’ ಎಂದು ಸದಸ್ಯರು  ಆರೋಪಿಸಿದ್ದಾರೆ.

ಮಾಜಿ ಶಾಸಕ ಲಾವೂ ಮಾಮ್ಲತ್ದಾರ್‌ ಸೇರಿ ಹಲವು ನಾಯಕರು ಮೂರು ತಿಂಗಳ ಹಿಂದೆಯಷ್ಟೇ ಟಿಎಂಸಿ ಸೇರಿದ್ದರು. 

‘ಗೋವಾಕ್ಕೆ ಉತ್ತಮ ದಿನಗಳನ್ನು ತರುವ ಭರವಸೆಯಲ್ಲಿ ನಾವು ಟಿಎಂಸಿ ಸೇರಿದ್ದೆವು. ಆದರೆ ಟಿಎಂಸಿ ಕೋಮು ಧ್ರುವೀಕರಣದಲ್ಲಿ ತೊಡಗಿದೆ. ಹಿಂದೂ ಮತಗಳನ್ನು ಮಹಾರಾಷ್ಟ್ರವಾದಿ ಗೋಮಾಂತಕ್‌ ಪಕ್ಷದ  (ಎಂಜಿಪಿ) ಕಡೆಗೆ ಮತ್ತು ಕ್ಯಾಥೋಲಿಕ್‌ ಮತಗಳನ್ನು ಟಿಎಂಸಿ ಕಡೆಗೆ ತಿರುಗಿಸುವ ಪ್ರಯತ್ನದಲ್ಲಿ ಪಕ್ಷ ತೊಡಗಿದೆ.

ನಮ್ಮ ರಾಜ್ಯದ ಜಾತ್ಯತೀತ ಸಂರಚನೆಯನ್ನು ಹಾಳು ಮಾಡಲು ನಾವು ಬಿಡುವುದಿಲ್ಲ’ ಎಂದು  ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಗೋವಾದ ಎಲ್ಲಾ 40 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಟಿಎಂಸಿ ಘೋಷಿಸಿತ್ತು. ಡಿ.5ರಂದು ಎಂಜಿಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು