ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ | ವಿಧಾನಸಭಾ ಮುತ್ತಿಗೆಗೆ ಯತ್ನ: ಪೊಲೀಸರಿಂದ ಲಾಠಿ

ಬಿಹಾರ ವಿಶೇಷ ಸಶಸ್ತ್ರ ಪೊಲೀಸ್‌ ಮಸೂದೆ: ಸದನದೊಳಗೆ, ಹೊರಗೆ ಆರ್‌ಜೆಡಿ ಧರಣಿ
Last Updated 23 ಮಾರ್ಚ್ 2021, 12:34 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದಲ್ಲಿ ವಿಶೇಷ ಸಶಸ್ತ್ರ ಪೊಲೀಸ್‌ ಮಸೂದೆಯನ್ನು ವಿರೋಧಿಸಿ ಆರ್‌ಜೆಡಿ ಸದಸ್ಯರು ಮಂಗಳವಾರ ವಿಧಾನಸಭೆಯ ಒಳಗೆ ಮತ್ತು ಹೊರಗೆ ಧರಣಿ, ಪ್ರತಿಭಟನೆ ನಡೆಸಿದರು. ವಿಧಾನಸಭೆ ಮುತ್ತಿಗೆಗೆ ಮುಂದಾಗಿದ್ದ ಆರ್‌ಜೆಡಿ ಕಾರ್ಯಕರ್ತರು ಮತ್ತು ನಾಯಕರನ್ನು ಭದ್ರತಾ ಸಿಬ್ಬಂದಿ ತಡೆಯುವಲ್ಲಿ ಯಶಸ್ವಿಯಾದರು. ಈ ವೇಳೆ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು.

ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿದರು. ಬಳಿಕ ಲಾಠಿ ಬೀಸಿದರು. ಇದೇ ವೇಳೆ ತೇಜಸ್ವಿ ಯಾದವ್‌ ಸೇರಿದಂತೆ ಕೆಲ ನಾಯಕರನ್ನು ಬಂಧಿಸಲಾಯಿತು.

ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ , ವಿಧಾನಸೌಧ ಮುತ್ತಿಗೆ ಹೋರಾಟದ ನೇತೃತ್ವವಹಿಸುವುದಾಗಿ ಘೋಷಿಸಿದ್ದರು. ಇದರಿಂದ ದೊಡ್ಡ ಸಂಖ್ಯೆಯ ಕಾರ್ಯಕರ್ತರು ಪಟ್ನಾದಲ್ಲಿ ಜಮಾವಣೆಗೊಂಡು, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ವಿಧಾನಸಭೆಯತ್ತ ಮುನ್ನುಗ್ಗಿದರು.

ಇದೇ ವೇಳೆ ಸದನದೊಳಗೆ ಆರ್‌ಜೆಡಿ ಶಾಸಕರು ಮಸೂದೆಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದರು. ಸ್ಪೀಕರ್‌ ವಿಜಯ್‌ ಕುಮಾರ್‌ ಸಿನ್ಹಾಸ್‌ ಅವರ ಮನವಿಗೆ ಕಿವಿಗೊಡದ ವಿರೋಧ ಪಕ್ಷಗಳ ಶಾಸಕರು ಧರಣಿ ಮುಂದುವರಿಸಿದರು. ಇದರಿಂದ ಸ್ಪೀಕರ್‌ ಸದನವನ್ನು ಮುಂದೂಡಿದರು.

ಇನ್ನೊಂದೆಡೆ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌, ಅವರ ಸಹೋದರ ತೇಜ್‌ ಪ್ರತಾಪ್‌ ಯಾದವ್‌ ಮತ್ತು ಕೆಲ ಶಾಸಕರು ಮೆರವಣಿಗೆಯಲ್ಲಿ ಪಾಲ್ಗೊಂಡು, ಕಾರ್ಯಕರ್ತರ ಜತೆ ವಿಧಾನಸಭಾ ಮುತ್ತಿಗೆಗೆ ಮುಂದಾದರು.

ಯಾವುದೇ ಅನುಮತಿ ಪಡೆಯದೆ, ಕೋವಿಡ್‌ ನಿಯಮಗಳನ್ನೂ ಪಾಲಿಸದೆ ಸಹಸ್ರಾರು ಜನರು ಪ್ರತಿಭಟನೆಗೆ ಮುಂದಾಗಿದ್ದರಿಂದ ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್‌ ಅನ್ನು ಕಲ್ಪಿಸಲಾಗಿತ್ತು. ಮಾಸ್ಕ್‌ಗಳನ್ನೂ ಧರಿಸದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಳೆದ ವಾರ ಮಂಡಿಸಲಾದ ಈ ಮಸೂದೆಯು ಬಿಹಾರದ ಪೊಲೀಸರಿಗೆ ವಾರಂಟ್‌ ಇಲ್ಲದೆ ಜನರನ್ನು ಬಂಧಿಸುವುದರ ಜತೆಗೆ ಹೆಚ್ಚಿನ ಅಧಿಕಾರವನ್ನು ನೀಡುವ ಪ್ರಸ್ತಾಪ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT