ಸೋಮವಾರ, ಆಗಸ್ಟ್ 8, 2022
22 °C
ನಿಯಮ ಪಾಲಿಸಲು ವಿಫಲ

ಮಾಹಿತಿ ತಂತ್ರಜ್ಞಾನ ನಿಯಮ ಪಾಲಿಸದೆ ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಾಹಿತಿ ತಂತ್ರಜ್ಞಾನ ಹೊಸ ನಿಯಮಗಳನ್ನು ಪಾಲಿಸದ ಕಾರಣ ಟ್ವಿಟರ್‌ ಸಂಸ್ಥೆಯು ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ. ಪದೇ ಪದೇ ನೆನಪಿಸಿದರೂ, ಹೊಸ ನಿಯಮಗಳ ಅನುಸಾರ ನೇಮಿಸಬೇಕಿದ್ದ ಪ್ರಮುಖ ಅಧಿಕಾರಿಗಳನ್ನು ಟ್ವಿಟರ್‌ ನೇಮಿಸಿಲ್ಲ. ಹಾಗಾಗಿ, ಟ್ವಿಟರ್‌ ಬಳಕೆದಾರರ ಟ್ವೀಟ್‌ಗಳಲ್ಲಿ ಕಾನೂನುಬಾಹಿರ ಅಂಶಗಳಿದ್ದರೆ ಟ್ವಿಟರ್‌ ಸಂಸ್ಥೆಯ ವಿರುದ್ಧವೂ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶ ತೆರೆದುಕೊಂಡಿದೆ.

ಮೇ 26ರಿಂದ ಈ ನಿಯಮಗಳು ಜಾರಿಗೆ ಬಂದಿದ್ದವು. ಈ ನಿಯಮಗಳನ್ನು ಪಾಲಿಸದ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಇರುವ ವಿನಾಯಿತಿಯನ್ನು ಕಳೆದುಕೊಳ್ಳಲಿವೆ ಎಂದು ಸರ್ಕಾರವು ಎಚ್ಚರಿಕೆ ನೀಡಿತ್ತು.

ನಿಯಮಗಳ ಅನುಸಾರ ಮುಖ್ಯ ಕಾನೂನು ಪಾಲನೆ ಅಧಿಕಾರಿಯ ಕುರಿತ ಮಾಹಿತಿಯನ್ನು ಏಕೆ ಸಲ್ಲಿಸಿಲ್ಲ ಎಂದು ಸರ್ಕಾರವು ಟ್ವಿಟರ್‌ ಸಂಸ್ಥೆಯನ್ನು ಪ್ರಶ್ನಿಸಿತ್ತು. ಹಾಗೆಯೇ, ಟ್ವಿಟರ್‌ ನೇಮಿಸಿಕೊಂಡಿರುವ ನಿವಾಸಿ ಕುಂದುಕೊರತೆ ಅಧಿಕಾರಿ ಮತ್ತು ನೋಡಲ್‌ ಅಧಿಕಾರಿಗಳು ಟ್ವಿಟರ್‌ನ ಉದ್ಯೋಗಿಗಳಲ್ಲ ಎಂಬ ಬಗ್ಗೆಯೂ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಟ್ವಿಟರ್‌ನ ಗಮನ ಸೆಳೆದಿತ್ತು.

ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್‌ ಪ್ರಸಾದ್‌ ಅವರು, ನಿಯಮಗಳನ್ನು ಪಾಲಿಸದ ಟ್ವಿಟರ್ ಸಂಸ್ಥೆಯ ವಿರುದ್ಧ ಹರಿಹಾಯ್ದಿದ್ದಾರೆ. ಹಲವು ಅವಕಾಶ ಕೊಟ್ಟರೂ ಸಂಸ್ಥೆಯು ಉದ್ದೇಶಪೂರ್ವಕವಾಗಿ ನಿಯಮ ಪಾಲನೆ ಮಾಡದಿರುವ ದಾರಿಯನ್ನು ಆಯ್ಕೆ ಮಾಡಿಕೊಂಡಿದೆ ಎಂದು ಅವರು ಹೇಳಿದ್ದಾರೆ.

ವಾಕ್‌ ಸ್ವಾತಂತ್ರ್ಯದ ಪ್ರತಿಪಾದಕ ಎಂದು ತನ್ನನ್ನು ಬಿಂಬಿಸಿಕೊಳ್ಳುವ ಟ್ವಿಟರ್‌ ಸಂಸ್ಥೆಯು ಮಾರ್ಗಸೂಚಿಗಳನ್ನು ಪಾಲಿಸುವಲ್ಲಿ ತೋರಿದ ಉದ್ಧಟತನ ದಂಗುಬಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ತನ್ನ ಸತ್ಯ ಶೋಧನೆ ವ್ಯವಸ್ಥೆಯ ಬಗ್ಗೆ ಅತ್ಯುತ್ಸಾಹ ತೋರುವ ಟ್ವಿಟರ್‌ ಹಲವು ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಸುಳ್ಳು ಸುದ್ದಿಯ ವಿರುದ್ಧದ ಹೋರಾಟದಲ್ಲಿ ಹೊಂದಾಣಿಕೆಯೇ ಇಲ್ಲ. ಮಾಹಿತಿ ತಂತ್ರಜ್ಞಾನ ಕಂಪನಿಗಳಾಗಲಿ ಔಷಧ ಕಂಪನಿಗಳಾಗಲಿ ಯಾವ ದೇಶದಲ್ಲಿ ವಹಿವಾಟು ನಡೆಸುತ್ತಿವೆಯೋ ಅಲ್ಲಿನ ನಿಯಮಗಳನ್ನು ಸ್ವಯಂಪ್ರೇರಣೆಯಿಂದಲೇ ಪಾಲಿಸಬೇಕು ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು