ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ‘ಅಘಾಡಿ’ ಸರ್ಕಾರ ಅತಂತ್ರ

ಪಟ್ಟು ಬಿಡದ ಶಿಂಧೆ, ಅಧಿಕೃತ ನಿವಾಸ ತೊರೆದ ಮುಖ್ಯಮಂತ್ರಿ ಠಾಕ್ರೆ
Last Updated 23 ಜೂನ್ 2022, 3:59 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರದ ಭವಿಷ್ಯ ಇನ್ನೂ ಅತಂತ್ರವಾಗಿಯೇ ಇದೆ. ಅಘಾಡಿ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಶಿವಸೇನಾ ಭಿನ್ನಮತೀಯ ಶಾಸಕ ಏಕನಾಥ ಶಿಂಧೆ ಅವರು ಹೇಳಿದ್ದಾರೆ.

ಪಕ್ಷದ ಶಾಸಕರು ಬಯಸಿದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಉದ್ಧವ್ ಠಾಕ್ರೆ ಅವರು ಬುಧವಾರ ಸಂಜೆ ಪ್ರತಿಕ್ರಿಯಿಸಿದ್ದಾರೆ.ಜತೆಗೆ, ‘ಶಿವಸೇನಾ ಶಾಸಕರೇ ಮುಖ್ಯಮಂತ್ರಿಯಾಗಬೇಕು’ ಎಂದು ಅವರು ಷರತ್ತು ಹಾಕಿದ್ದಾರೆ.

ಆದರೆ, ಉದ್ಧವ್ ಅವರು ರಾಜೀ ನಾಮೆ ನೀಡದೆ ಇದ್ದರೂ ಮುಖ್ಯಮಂತ್ರಿ ಗಳ ಅಧಿಕೃತ ನಿವಾಸವನ್ನು ತೊರೆದು ತಮ್ಮ ನಿವಾಸ ಮಾತೋಶ್ರೀಗೆ ಹೋಗಿದ್ದಾರೆ.

ಠಾಕ್ರೆ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿಂಧೆ, ‘ಶಿವಸೇನಾ ಉಳಿಯ ಬೇಕು ಎಂದಿದ್ದರೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜತೆಗಿನ ಅಸಹಜ ಮೈತ್ರಿಯನ್ನು ತೊರೆಯಿರಿ’ ಎಂದು ಪಟ್ಟು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿಂಧೆ ಅವರ ಜತೆಗೆ ಬಿಜೆಪಿಯ ಹಿರಿಯ ನಾಯಕರು ಸಂಪರ್ಕದಲ್ಲಿ ಇದ್ದಾರೆ. ಶಿವಸೇನಾ ಭಿನ್ನಮತೀಯ ಶಾಸಕರ ನಾಯಕ ಏಕನಾಥ ಶಿಂಧೆ ಅವರಿಗೇ ಮುಖ್ಯಮಂತ್ರಿ ಸ್ಥಾನ ನೀಡುವ ಪ್ರಸ್ತಾಪವನ್ನು ಎನ್‌ಸಿಪಿ ಮತ್ತು ಕಾಂಗ್ರೆಸ್‌ ಇರಿಸಿವೆ ಎಂದು ಮೂಲಗಳು ಹೇಳಿವೆ.

ಆದರೆ, ಈ ಪ್ರಸ್ತಾಪವನ್ನು ಶಿಂಧೆ ನಿರಾಕರಿಸಿದ್ದಾರೆ. ‘ಸೈದ್ಧಾಂತಿಕ ವಿರೋಧಿಗಳ ಜತೆಗೆ ಅಸಹಜ ಮೈತ್ರಿ ಸಾಧ್ಯವೇ ಇಲ್ಲ’ ಎಂದು ಅವರು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಇಂತಹ ಯಾವುದೇ ಪ್ರಸ್ತಾಪ ಬಂದಿಲ್ಲ’ ಎಂದು ಶಿವಸೇನಾ
ಹೇಳಿದೆ.

ಪಕ್ಷದ ಶಾಸಕರನ್ನು ಉದ್ದೇಶಿಸಿ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಠಾಕ್ರೆ ಅವರು, ‘ನಾನು ರಾಜೀನಾಮೆ ನೀಡಬೇಕು ಎಂದು ಹೇಳುತ್ತಿರುವ ಶಾಸಕರು ನನ್ನ ಎದುರಿಗೆ ಬರಲಿ. ರಾಜೀನಾಮೆ ನೀಡಿ ಎಂದು ನನ್ನ ಎದುರಿಗೇ ಅವರು ಹೇಳಲಿ. ಎನ್‌ಸಿಪಿ, ಕಾಂಗ್ರೆಸ್‌ ಬೆಂಬಲ ನೀಡಿದ್ದರೂ, ನಮ್ಮದೇ ಶಾಸಕರು ಬೇಡ ಎಂದಮೇಲೆ ನಾನು ಈ ಹುದ್ದೆಯಲ್ಲಿ ಹೇಗೆ ಮುಂದುವರಿಯಲಿ. ಮುಖ್ಯಮಂತ್ರಿ ಸ್ಥಾನ ಮಾತ್ರವಲ್ಲ, ಪಕ್ಷದ ಅಧ್ಯಕ್ಷನ ಸ್ಥಾನವನ್ನೂ ತೊರೆಯುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇದರ ಮಧ್ಯೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಕಾಂಗ್ರೆಸ್‌ ನಾಯಕರು ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ವಿವರಗಳು ಲಭ್ಯವಾಗಿಲ್ಲ.ಎಂವಿಎ ಸರ್ಕಾರದ ಭವಿಷ್ಯದ ಬಗ್ಗೆ ಮುಖ್ಯಮಂತ್ರಿ ಠಾಕ್ರೆ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಮಾತುಕತೆ ನಡೆಸಲಿದ್ದಾರೆ. ಇಬ್ಬರಿಗೂ ಕೋವಿಡ್‌ ಇರುವ ಕಾರಣ ಸಭೆಯು ಆನ್‌ಲೈನ್‌ನಲ್ಲಿ ನಡೆಯಲಿದೆ.

‘ವಿಸರ್ಜನೆಯತ್ತ ವಿಧಾನಸಭೆ...’

‘ಮಹಾರಾಷ್ಟ್ರ ವಿಧಾನಸಭೆಯು ವಿಸರ್ಜನೆಯತ್ತ ಜಾರುತ್ತಿದೆ’ ಎಂದು ಶಿವಸೇನಾ ವಕ್ತಾರ ಮತ್ತು ಸಂಸದ ಸಂಜಯ್ ರಾವುತ್ ಬುಧವಾರ ಬೆಳಿಗ್ಗೆ ಟ್ವೀಟ್ ಮಾಡಿದ್ದರು. ವಿಧಾನಸಭೆಯನ್ನು ವಿಸರ್ಜನೆ ಮಾಡುವ ಯೋಚನೆಯನ್ನು ಎಂವಿಎ ಮಿತ್ರ‍ಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್‌ ವಿರೋಧಿಸಿವೆ. ಅದರ ಬೆನ್ನಲ್ಲೇ ರಾವುತ್ ಸ್ಪಷ್ಟನೆ ನೀಡಿದ್ದು, ‘ನಾನು ಹಲವು ದಶಕಗಳಿಂದ ರಾಜಕೀಯದಲ್ಲಿದ್ದೇನೆ. ಅದರ ಅನುಭವದಲ್ಲಿ ಈ ಮಾತು ಹೇಳಿದ್ದೇನೆ’ ಎಂದು ಹೇಳಿದ್ದಾರೆ.

ಕಾದು ನೋಡುವ ತಂತ್ರ:ಮಹಾರಾಷ್ಟ್ರ ಸರ್ಕಾರದ ಸದ್ಯದ ಸ್ಥಿತಿಯ ಬಗ್ಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡಣವೀಸ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ‘ಸರ್ಕಾರದಲ್ಲಿ ಏನಾಗಲಿದೆ ಎಂಬುದನ್ನು ಬಿಜೆಪಿ ಕಾದು ನೋಡಲಿದೆ’ ಎಂದಷ್ಟೇ ಅವರು ಹೇಳಿದ್ದಾರೆ.

ರಾಜ್ಯಪಾಲರಿಗೆ ಪತ್ರ

‘ಏಕನಾಥ ಶಿಂಧೆ ಅವರೇ ನಮ್ಮ ನಾಯಕ’ ಎಂದು 34 ಶಾಸಕರು ಸಹಿ ಮಾಡಿರುವ ಪತ್ರವನ್ನು ಶಿಂಧೆ ಅವರು ಬುಧವಾರ ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. 34ರಲ್ಲಿ, 30 ಶಿವಸೇನಾ ಮತ್ತು ನಾಲ್ವರು ಪಕ್ಷೇತರ ಶಾಸಕರಿದ್ದಾರೆ.

ಬಿಜೆಪಿಗೆ 106 ಶಾಸಕರ ಬಲವಿದೆ. ಈಗಿನ ಸರ್ಕಾರವನ್ನು ಉರುಳಿಸಿ, ತಮ್ಮ ಸರ್ಕಾರವನ್ನು ರಚಿಸಲು ಬಿಜೆಪಿಗೆ ಇನ್ನೂ 37 ಶಾಸಕರ ಅಗತ್ಯವಿದೆ. ಆದರೆ, ಮೂಲಗಳ ಪ್ರಕಾರ ಶಿಂಧೆ ಅವರ ಬಣದಲ್ಲಿ ಅಷ್ಟು ಶಾಸಕರಿಲ್ಲ. ಹೀಗಾಗಿ ಮತ್ತಷ್ಟು ಶಾಸಕರನ್ನು ಸೆಳೆಯುವ ಯತ್ನ ನಡೆಯುತ್ತಿದೆ. ಇದರ ಮಧ್ಯೆ, ‘ಗುವಾಹಟಿಯಲ್ಲಿರುವ ಶಾಸಕರಲ್ಲಿ 17 ಮಂದಿ ಮುಂಬೈಗೆ ವಾಪಸಾಗಲು ಸಿದ್ಧರಿದ್ದಾರೆ. ಆದರೆ, ಅವರನ್ನು ಬಲವಂತವಾಗಿ ಇರಿಸಿಕೊಳ್ಳಲಾಗಿದೆ’ ಎಂದು ಕಾಂಗ್ರೆಸ್‌ ಆರೋಪಿಸಿದೆ.

***

ಶಿವಸೇನಾ ಬಿಜೆಪಿ ಜತೆ ಸೇರಲಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ಜತೆಗಿದ್ದು, ನೋವು ಅನುಭವಿಸಿದ್ದೇವೆ. ಮತ್ತೆ ಅವರೊಟ್ಟಿಗೆ ಹೋಗಲು ಹೇಗೆ ಸಾಧ್ಯ?

- ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT