ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಾತಕಪೂರ್ವ ಪದವಿ ಶಿಕ್ಷಣದ ಅವಧಿ 4 ವರ್ಷ: ಯುಜಿಸಿ ಹೊಸ ನಿಯಮ

Last Updated 10 ಡಿಸೆಂಬರ್ 2022, 13:14 IST
ಅಕ್ಷರ ಗಾತ್ರ

ನವದೆಹಲಿ: ವಿದ್ಯಾರ್ಥಿಗಳಿಗೆ4 ವರ್ಷಗಳ ಶಿಕ್ಷಣ ಪೂರೈಸಿದ ನಂತರ ‘ಪದವೀಧರ ಗೌರವ’ ನೀಡುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕರಡು ನಿಯಮಾವಳಿ ರೂಪಿಸಿದೆ. ಈವರೆಗೆ ಪದವಿ ಶಿಕ್ಷಣದ ಅವಧಿ 3 ವರ್ಷವಾಗಿತ್ತು.

ರಾಷ್ಟ್ರೀಯ ಶಿಕ್ಷಣ ನೀತಿಯನುಸಾರ ರೂಪಿಸಿರುವ, ನಾಲ್ಕು ವರ್ಷದ ಪದವಿ ಶಿಕ್ಷಣದ ಪಠ್ಯಕ್ರಮ ಮತ್ತು ಶಿಕ್ಷಣದ ರೂಪುರೇಷೆ ಕುರಿತ ಕರಡು ನಿಯಮಾವಳಿಯ ಅಧಿಸೂಚನೆಯನ್ನು ಸೋಮವಾರ ಯುಜಿಸಿ ಹೊರಡಿಸುವ ಸಂಭವವಿದೆ.

ಮೂರು ವರ್ಷದ ಕಲಿಕೆ ಮತ್ತು 120 ಶ್ರೇಯಾಂಕದ (ಶೈಕ್ಷಣಿಕ ಅವಧಿ ಸಂಖ್ಯೆ ಆಧರಿಸಿ ನೀಡಲಾಗುತ್ತದೆ) ಬಳಿಕ ಪದವಿ ಶಿಕ್ಷಣ ಮುಗಿಯಲಿದೆ. ಪದವೀಧರ ಗೌರವ ನಾಲ್ಕು ವರ್ಷದ ಕಲಿಕೆ (160 ಶ್ರೇಯಾಂಕ) ಬಳಿಕ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ವಿದ್ಯಾರ್ಥಿಗಳು ಸಂಶೋಧನೆ ಮಾಡ ಬಯಸಿದಲ್ಲಿ, ಅದನ್ನೂ ನಾಲ್ಕು ವರ್ಷದ ಅವಧಿಯಲ್ಲೇ ಮಾಡಬೇಕು. ಇದರ ನಂತರ ನಿರ್ದಿಷ್ಟ ವಿಷಯದಲ್ಲಿ ಸಂಶೋಧನೆಗೆ ಸಂಬಂಧಿಸಿದಂತೆ ಪದವೀಧರ ಗೌರವ ದೊರೆಯಲಿದೆ ಎಂದು ಕರಡು ನಿಯಮದಲ್ಲಿ ವಿವರಿಸಲಾಗಿದೆ.

ಹಾಲಿ ನಿಯಮಗಳ ಪ್ರಕಾರ ಮೂರು ವರ್ಷದ ಪದವಿ ಶಿಕ್ಷಣಕ್ಕೆ ಹೆಸರು ನೋಂದಾಯಿಸಿರುವ ವಿದ್ಯಾರ್ಥಿಗಳೂ ನಾಲ್ಕು ವರ್ಷದ ಸ್ನಾತಕಪೂರ್ವ ಪದವಿ ಶಿಕ್ಷಣ ಪಡೆಯಲು ಅರ್ಹರು. ಇದಕ್ಕೆ ಪೂರಕವಾಗಿ ವಿಶ್ವವಿದ್ಯಾಲಯಗಳು ಆನ್‌ಲೈನ್ ಶಿಕ್ಷಣ ಸೇರಿದಂತೆ ಸೇತುಬಂಧ ಕಾರ್ಯಕ್ರಮಗಳನ್ನು ನಡೆಸಬಹುದು ಎಂದು ಯುಜಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT