ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ವಿ, ಕಾಲೇಜು ಆರಂಭಕ್ಕೆ ಯುಜಿಸಿ ಮಾರ್ಗಸೂಚಿ

Last Updated 5 ನವೆಂಬರ್ 2020, 15:22 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಪಿಡುಗಿನ ಕಾರಣದಿಂದಾಗಿ ದೇಶದಾದ್ಯಂತ ಕಳೆದ ಮಾರ್ಚ್‌ನಿಂದ ಮುಚ್ಚಿರುವ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಪುನರಾರಂಭಕ್ಕೆ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ಗುರುವಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಕೇಂದ್ರೀಯ ವಿಶ್ವವಿದ್ಯಾಲಯಗಳಿಗೆ ಹಾಗೂ ಕೇಂದ್ರದ ಅನುದಾನದಲ್ಲಿ ಕಾರ್ಯನಿರ್ವಹಿಸುವ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಪುನರಾರಂಭಿಸುವ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಆಯಾ ಕುಲಪತಿಗಳಿಗೆ ಹಾಗೂ ಸಂಸ್ಥೆಯ ಮುಖ್ಯಸ್ಥರುಗಳಿಗೆ ನೀಡಲಾಗಿದೆ. ರಾಜ್ಯ ವಿಶ್ವವಿದ್ಯಾಲಯಗಳು ಹಾಗೂ, ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳನ್ನು ಪ್ರಾರಂಭಿಸಲು ಆಯಾ ರಾಜ್ಯ ಸರ್ಕಾರಗಳೇ ನಿರ್ಧಾರ ಕೈಗೊಳ್ಳಬೇಕು ಎಂದು ಯುಜಿಸಿ ತಿಳಿಸಿದೆ.

‘ಕಂಟೈನ್‌ಮೆಂಟ್‌ ವಲಯದ ಹೊರಗಿರಿರುವ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳನ್ನು ಪುನರಾರಂಭಿಸಲು ಅವಕಾಶ ನೀಡಬೇಕು. ಕಂಟೈನ್‌ಮೆಂಟ್‌ ವಲಯದಲ್ಲಿರುವ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿ ಕಾಲೇಜಿಗೆ ಬರದಂತೆ ಸೂಚಿಸಬೇಕು. ಕಂಟೈನ್‌ಮೆಂಟ್‌ ವಲಯಗಳಿಗೆ ಭೇಟಿ ನೀಡಬೇಡಿ ಎಂದು ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ನಿರ್ದೇಶಿಸಬೇಕು. ಜೊತೆಗೆ ಆರೋಗ್ಯ ಸೇತು ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಬೇಕು’ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಹಂತ ಹಂತವಾಗಿ ತರಗತಿಗಳನ್ನು ಪ್ರಾರಂಭಿಸುವ ಕುರಿತಂತೆ ಯೋಜನೆ ರೂಪಿಸಲು ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಿಗೆ ಯುಜಿಸಿ ಸೂಚಿಸಿದ್ದು, ಈ ಸಂದರ್ಭದಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ, ಮುಖಗವಸು ಧರಿಸುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನೂ ಗಮನದಲ್ಲಿ ಇರಿಸಿಕೊಳ್ಳಲು ಸಲಹೆ ನೀಡಿದೆ.

ಮಾರ್ಗಸೂಚಿಯಲ್ಲಿರುವ ಇತರೆ ಅಂಶಗಳು

*ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವುದರಿಂದ ಅವರು ತರಗತಿಗಳಿಗೆ ಹಾಜರಾಗಬಹುದು

*ಉದ್ಯೋಗದ ಸಂದರ್ಶನ ಅಥವಾ ಶೈಕ್ಷಣಿಕ ದೃಷ್ಟಿಯಿಂದ ಅಂತಿಮ ವರ್ಷ ವಿದ್ಯಾರ್ಥಿಗಳು ಕಾಲೇಜಿಗೆ ಬರಬಹುದು. ಈ ಕುರಿತು ಆಯಾ ಕಾಲೇಜುಗಳ ಮುಖ್ಯಸ್ಥರೇ ನಿರ್ಧಾರ ಕೈಗೊಳ್ಳಬೇಕು

*ವಿದ್ಯಾರ್ಥಿನಿಲಯಗಳಲ್ಲಿ ಕೊಠಡಿಯಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಅವಕಾಶ. ಸೋಂಕಿನ ಲಕ್ಷಣ ಇರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯಗಳಲ್ಲಿ ಉಳಿದುಕೊಳ್ಳಲು ಅವಕಾಶ ನೀಡಬಾರದು.

ವಿದೇಶದಿಂದ ಬರುವವರಿಗೆ ಹೊಸ ಮಾರ್ಗಸೂಚಿ

ವಿದೇಶದಿಂದ ಆಗಮಿಸುವವರಿಗೆ ಪರಿಷ್ಕೃತ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದೆ. ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ ಪಡೆಯಬಯಸುವವರು, ಭಾರತಕ್ಕೆ ಪ್ರಯಾಣಿಸುವ 72 ಗಂಟೆಗಳ ಮುಂಚಿತವಾಗಿ ಸೋಂಕು ಇಲ್ಲ ಎನ್ನುವ ದೃಢೀಕರಣ ಇರುವ ಆರ್‌ಟಿಪಿಸಿಆರ್‌ ಪರೀಕ್ಷೆಯ ವರದಿಯನ್ನು ಸಲ್ಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT