ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ ಚುನಾವಣೆ: ನೌಕರಿಯಲ್ಲಿ ಮಹಿಳೆಯರಿಗೆ ಶೇ 40ರಷ್ಟು ಹುದ್ದೆ

ಉತ್ತರಾಖಂಡ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಣೆ
Last Updated 2 ಫೆಬ್ರುವರಿ 2022, 18:27 IST
ಅಕ್ಷರ ಗಾತ್ರ

ಡೆಹ್ರಾಡೂನ್‌ (ಪಿಟಿಐ): ‘ಉತ್ತರಾಖಂಡದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಪೊಲೀಸ್ ಇಲಾಖೆಯೂ ಸೇರಿ ಎಲ್ಲಾ ಸರ್ಕಾರಿ ನೌಕರಿಯಲ್ಲಿ ಶೇ 40ರಷ್ಟು ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡುತ್ತೇವೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ವರ್ಚ್ಯುವಲ್ ರ‍್ಯಾಲಿಯ ಮೂಲಕ ಅವರು ಬುಧವಾರ ಬಿಡುಗಡೆ ಮಾಡಿದರು. ‘ರಾಜ್ಯದಲ್ಲಿ ಹೊಸದಾಗಿ ನಾಲ್ಕು ಲಕ್ಷ ಉದ್ಯೋಗವನ್ನು ಸೃಷ್ಟಿಸುತ್ತೇವೆ. ರಾಜ್ಯದಲ್ಲಿ ಪ್ರವಾಸಿ ಪೊಲೀಸ್ ಪಡೆಯನ್ನು ಆರಂಭಿಸುತ್ತೇವೆ. ಎಲ್‌ಪಿಜಿ ಸಿಲಿಂಡರ್‌ ಬೆಲೆಗೆ ₹500ರ ಗರಿಷ್ಠ ಮಿತಿ ಹೇರಲಾಗುತ್ತದೆ’ ಎಂದು ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.

ಕಾಂಗ್ರೆಸ್‌ ಪಕ್ಷವು ಈ ಚುನಾವಣೆಯಲ್ಲಿ ಮಹಿಳಾ ಸಬಲೀಕರಣದ ವಿಚಾರವನ್ನು ಇಟ್ಟುಕೊಂಡು ಎದುರಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ 40ರಷ್ಟು ಟಿಕೆಟ್‌ಗಳನ್ನು ಮೀಸಲಿರಿಸಿದೆ. ಪಕ್ಷವು ಅಧಿಕಾರಕ್ಕೆ ಬಂದರೆ ಮಹಿಳೆಯರು, ಯುವತಿಯರು ಮತ್ತು ವಿದ್ಯಾರ್ಥಿನಿಯರಿಗೆ ಹಲವು ಸವಲತ್ತುಗಳನ್ನು ಕೊಡುವುದಾಗಿ ಘೋಷಿಸಿದೆ. ಅದೇ ಮಾದರಿಯನ್ನು ಉತ್ತರಾಖಂಡದಲ್ಲೂ ಅನುಸರಿಸಲು ಮುಂದಾಗಿದೆ.

‘ಐದು ವರ್ಷದ ಅಧಿಕಾರದ ಅವಧಿಯಲ್ಲಿ ಉತ್ತರಾಖಂಡ ಬಿಜೆಪಿ ಸರ್ಕಾರವು ಏನನ್ನೂ ಮಾಡಿಲ್ಲ. ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಮಾಡಲಾಗಿದ್ದ ಕೆಲಸಗಳಷ್ಟೇ ಈಗಲೂ ಕಾಣಿಸುತ್ತಿವೆ. ಬಿಜೆಪಿ ಏನನ್ನೂ ಮಾಡಿಲ್ಲ, ಏಕೆಂದರೆ ಏನನ್ನಾದರೂ ಮಾಡುವ ಉದ್ದೇಶ ಅವರಿಗೆ ಇರಲಿಲ್ಲ. ಹೀಗಾಗಿ ನೀವು ನಿಮ್ಮ ಮತದಾನದ ಹಕ್ಕನ್ನು ಒಂದು ಪ್ರಬಲ ಅಸ್ತ್ರ ಎಂಬಂತೆ ಬಳಸಬೇಕು. ಮತದಾನದ ಬಗ್ಗೆ ಗಂಭೀರವಾಗಿರಬೇಕು’ ಎಂದು ಪ್ರಿಯಾಂಕಾ ಹೇಳಿದ್ದಾರೆ.

‘ಇಲ್ಲಿ ಡಬಲ್ ಎಂಜಿನ್ ಸರ್ಕಾರವಿದೆ ಎಂದು ಬಿಜೆಪಿ ಹೇಳುತ್ತಲೇ ಇರುತ್ತದೆ. ಆದರೆ ಈ ಎಂಜಿನ್‌ಗಳು ಕೆಲಸವೇ ಮಾಡುವುದಿಲ್ಲ. ದೇಶದಾದ್ಯಂತ ಈ ಡಬಲ್ ಎಂಜಿನ್ ಸರ್ಕಾರಗಳು ಕಬ್ಬು ಬೆಳೆಗಾರರಿಗೆ ಒಟ್ಟು ₹14,000 ಕೋಟಿ ಬಾಕಿ ಹಣ ನೀಡಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಓಡಾಡಲು ₹16,000 ಕೋಟಿ ಮೊತ್ತದಲ್ಲಿ ಎರಡು ವಿಮಾನಗಳನ್ನು ಖರೀದಿಸಲಾಗಿದೆ. ಅದರ ಬದಲಿಗೆ ಕಬ್ಬು ಬೆಳೆಗಾರರ ಬಾಕಿ ಪಾವತಿ ಮಾಡಬಹುದಿತ್ತು’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT