ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರ ಪುನರ್‌ ವಿಂಗಡಣಾ ಆಯೋಗದ ಕರಡು ಪ್ರಸ್ತಾವಕ್ಕೆ ತೀವ್ರ ವಿರೋಧ

ಕರಡು ವರದಿ ಒಪ್ಪಲು ಸಾಧ್ಯವಿಲ್ಲ: ಒಮರ್‌ ಅಬ್ದುಲ್ಲಾ
Last Updated 20 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಪ್ರಾಂತ್ಯದಲ್ಲಿ ಹೆಚ್ಚುವರಿಯಾಗಿ ಆರು ವಿಧಾನಸಭಾ ಕ್ಷೇತ್ರಗಳನ್ನು ಸೇರ್ಪಡೆ ಮಾಡುವ ಕ್ಷೇತ್ರ ಪುನರ್‌ ವಿಂಗಡಣಾ ಆಯೋಗದ ಕರಡು ಪ್ರಸ್ತಾವವನ್ನು ಜಮ್ಮು ಮತ್ತು ಕಾಶ್ಮೀರದ ಎಲ್ಲ ರಾಜಕೀಯ ಪಕ್ಷಗಳು ಒಕ್ಕೊರಲಿನಿಂದ ತಿರಸ್ಕರಿಸಿವೆ.

ಈ ಸಂಬಂಧ ನವದೆಹಲಿಯಲ್ಲಿ ಸೋಮವಾರ ಆಯೋಗದ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ರಂಜನ್‌ ಪ್ರಕಾಶ್‌ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಫಾರೂಕ್‌ ಅಬ್ದುಲ್ಲಾ, ಅಕ್ಬರ್‌ ಲೋನ್‌ ಹಾಗೂ ಹಸನೈನ್‌ ಮಸೂದಿ, ಬಿಜೆಪಿಯ ಜಿತೇಂದ್ರ ಸಿಂಗ್‌, ಜುಗಲ್‌ ಕಿಶೋರ್‌ ಶರ್ಮಾ ಈ ಐವರು ಸಂಸದರು ಭಾಗವಹಿಸಿದ್ದರು. ಈ ನಾಯಕರಿಗೆ ಡಿಸೆಂಬರ್‌ ಅಂತ್ಯದ ಒಳಗೆ ತಮ್ಮ ಸಲಹೆ–ಸೂಚನೆಗಳನ್ನು ತಿಳಿಸುವಂತೆ ಆಯೋಗವು ಕೇಳಿಕೊಂಡಿದೆ.

37 ಕ್ಷೇತ್ರಗಳಿರುವ ಜಮ್ಮು ಪ್ರಾಂತ್ಯದಲ್ಲಿ ಆರು ವಿಧಾನಸಭಾ ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಹಾಗೂ 46 ಸ್ಥಾನಗಳಿರುವ ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಒಂದು ವಿಧಾನಸಭಾ ಕ್ಷೇತ್ರವನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲು ಆಯೋಗ ಕರಡು ಸಿದ್ಧಪಡಿಸಿದೆ.

ಜಮ್ಮು ಮತ್ತು ಕಾಶ್ಮೀರದ ಒಟ್ಟು ವಿಧಾನಸಭಾ ಕ್ಷೇತ್ರಗಳ ಪೈಕಿ 9 ಸ್ಥಾನಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ)ಕ್ಕೆ, 7 ಸ್ಥಾನಗಳನ್ನು ಪರಿಶಿಷ್ಟ ಜಾತಿ (ಎಸ್ಸಿ) ಗೆ ನಿಗದಿಪಡಿಸಿದೆ. ಜಮ್ಮು ಕಾಶ್ಮೀರದಲ್ಲಿ ಈ ಹಿಂದೆ ಇದ್ದ 107 ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಈಗ 114ಕ್ಕೆ ಏರಿಸಲಾಗಿದೆ. ಇವುಗಳ ಪೈಕಿ 24 ಸ್ಥಾನಗಳನ್ನು ಪಾಕ್‌ ಆಕ್ರಮಿತಿ ಕಾಶ್ಮೀರಕ್ಕೆ ನಿಗದಿಪಡಿಸಲಾಗಿದೆ.

ಆಯೋಗದ ಈ ಪ್ರಸ್ತಾವವನ್ನು ಕಾಶ್ಮೀರ ಮೂಲದ ಎಲ್ಲ ರಾಜಕೀಯ ಪಕ್ಷಗಳು ವಿರೋಧಿಸಿದ್ದು, ಈ ಕುರಿತು ಸೋಮವಾರ ಟ್ವೀಟ್‌ ಮಾಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ, ‘ನನ್ನ ಆತಂಕವನ್ನು ಕ್ಷೇತ್ರ ಪುನರ್‌ ವಿಂಗಡಣಾ ಆಯೋಗ ನಿಜಗೊಳಿಸಿದೆ. ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡಿಲ್ಲ. ಜನರನ್ನು ಪ್ರಾದೇಶಿಕ ಮತ್ತು ಧಾರ್ಮಿಕವಾಗಿ ಒಡೆದು ಆಳುವ ಮೂಲಕ ಬಿಜೆಪಿಯ ರಾಜಕೀಯ ಹಿತಾಸಕ್ತಿಗಾಗಿ ಈ ಆಯೋಗವನ್ನು ರಚಿಸಲಾಗಿದೆ. 2019ರ ಆಗಸ್ಟ್‌ನಲ್ಲಿ ಬಿಜೆಪಿಯು ಜಮ್ಮು ಮತ್ತು ಕಾಶ್ಮೀರದಲ್ಲಿ ತೆಗೆದುಕೊಂಡ ಅಸಂವಿಧಾನಿಕ ಹಾಗೂ ಕಾನೂನುಬಾಹಿರ ನಿರ್ಧಾರವನ್ನು ಸಕ್ರಮಗೊಳಿಸುವುದು ಈ ಕರಡು ಪ್ರಸ್ತಾವದ ಹಿಂದಿನ ನಿಜವಾದ ಉದ್ದೇಶವಾಗಿದೆ’ ಎಂದು ಅವರು ದೂರಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಒಮರ್‌ ಅಬ್ದುಲ್ಲಾ, ‘ಆರು ಕ್ಷೇತ್ರಗಳನ್ನು ಜಮ್ಮು ಪ್ರಾಂತ್ಯಕ್ಕೆ, ಕಾಶ್ಮೀರಕ್ಕೆ ಒಂದು ಕ್ಷೇತ್ರವನ್ನು ಸೇರ್ಪಡೆ ಮಾಡುವ ಆಯೋಗದ ಕ್ರಮವು ಸಮಂಜಸವಾಗಿಲ್ಲ. ಆಯೋಗವು 2011ರ ಜನಗಣತಿಯನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಹಾಗಾಗಿ ಆಯೋಗದ ಕರಡು ಪ್ರಸ್ತಾವದ ಒಪ್ಪಲು ಸಾಧ್ಯವಿಲ್ಲ. ಆಯೋಗವು ಕರಡು ಪ್ರಸ್ತಾವದ ವೇಳೆ ಅಂಕಿ ಅಂಶಗಳನ್ನು ಪರಿಗಣಿಸುವ ಬದಲು ಬಿಜೆಪಿಯ ರಾಜಕೀಯ ಕಾರ್ಯಸೂಚಿಗಳನ್ನು ಪರಿಗಣಿಸಿದೆ’ ಎಂದು ದೂರಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್‌ ಕಾನ್ಫರೆನ್ಸ್‌ನ ಮುಖ್ಯಸ್ಥ ಸಜೀದ್‌ ಲೋನ್‌, ‘ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರಿಗೆ ಈ ಪ್ರಸ್ತಾವ ಆಘಾತ ತಂದಿದೆ. ಆಯೋಗದ ಶಿಫಾರಸ್ಸುಗಳು ಒಟ್ಟಾರೆಯಾಗಿ ಒಪ್ಪಲು ಸಾಧ್ಯವಿಲ್ಲ. ಇದೊಂದು ಪೂರ್ವಾಗ್ರಹ ಪೀಡಿತವಾಗಿದೆ’ ಎಂದು ಟ್ಟಟ್‌ ಮಾಡಿದ್ದಾರೆ.

ಬಿಜೆಪಿಯ ಬೆಂಬಲಿತ ಜಮ್ಮು ಮತ್ತು ಕಾಶ್ಮೀರದ ಆಪ್ನಿ ಪಕ್ಷವು ಕೂಡ ಆಯೋಗದ ಕರಡು ಪ್ರಸ್ತಾವವನ್ನು ತಿರಸ್ಕರಿಸಿದ್ದು, ‘ಕೇಂದ್ರ ಸರ್ಕಾರವು ಮಧ್ಯಪ್ರವೇಶಿಸಿ ಜಿಲ್ಲಾವಾರು ಜನಸಂಖ್ಯೆಯನ್ನು ಪರಿಗಣನೆಗೆ ತೆಗೆದುಕೊಂಡು ಪೂರ್ವಾಗ್ರಹ ಪೀಡಿತವಲ್ಲದ ಕರಡನ್ನು ಸಿದ್ಧಪಡಿಸಬೇಕು’ ಎಂದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT