ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಪಡೆದ ಮೇಲೂ ವೈದ್ಯರಿಗೆ ಕೋವಿಡ್ ಪಾಸಿಟಿವ್‌; ಏಕೆ ಹೀಗಾಯ್ತು?

Last Updated 31 ಜನವರಿ 2021, 4:12 IST
ಅಕ್ಷರ ಗಾತ್ರ

ಕೊರೊನಾ ವೈರಸ್ ಸೋಂಕಿಗೆ ಕಡಿವಾಣ ಹಾಕುವಲ್ಲಿ ಲಸಿಕೆಗಳೇನೋ ಅಭಿವೃದ್ಧಿಯಾಗಿವೆ. ದೇಶದಾದ್ಯಂತ ಲಸಿಕೆ ಅಭಿಯಾನದಡಿ ಕಳೆದ 13 ದಿನಗಳಲ್ಲಿ 30 ಲಕ್ಷಕ್ಕೂ ಅಧಿಕ ಮಂದಿಗೆ ಕೋವಿಡ್‌ ಲಸಿಕೆಯನ್ನು ನೀಡಲಾಗಿದೆ. ಆ ಮೂಲಕ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಲಸಿಕೆ ನೀಡಿದ ದೇಶವಾಗಿ ಹೊರಹೊಮ್ಮಿದೆ. ಹೀಗಿರುವಾಗ ಲಸಿಕೆ ಪಡೆದ ಐವರಲ್ಲಿ ಸೋಂಕು ಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

'ನಾವು ಇದೀಗ ಕೋವಿಡ್ ಲಸಿಕೆಯನ್ನು ಪಡೆದಿದ್ದೇವೆ. ಲಸಿಕೆಯ ಎರಡನೇ ಡೋಸ್ ಪಡೆದ ಬಳಿಕವಷ್ಟೇ ಅದು ಪರಿಣಾಮ ಬೀರುತ್ತದೆ. ಹಾಗಾಗಿ ಒಂದು ಡೋಸ್ ಲಸಿಕೆ ಪಡೆದವರು ತಮಗೆ ಕೋವಿಡ್ ಬರುವುದಿಲ್ಲ ಎಂದು ಮೈರೆಯುವಂತಿಲ್ಲ' ಎನ್ನುತ್ತಾರೆ ತಜ್ಞ ವೈದ್ಯರು.

ಚಾಮರಾಜನಗರ ಜಿಲ್ಲೆಯಲ್ಲಿ ವಾರದ ಅವಧಿಯಲ್ಲಿ ಏಳು ಮಂದಿ ವೈದ್ಯರಿಗೆ ಕೋವಿಡ್ ಇರುವುದು ದೃಢಪಟ್ಟಿದ್ದು, ಇವರಲ್ಲಿ ಐವರು ಇತ್ತೀಚೆಗೆ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದರು. ವಾರದಿಂದೀಚಿಗೆ ಒಬ್ಬೊಬ್ಬರಲ್ಲಿ ಸೋಂಕು ಕಂಡುಬಂದಿದ್ದು, ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ಪತ್ತೆಯಾಗಲು ಆರಂಭವಾದಾಗಿನಿಂದ ಅವರೆಲ್ಲ ಕೋವಿಡ್‌ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದಾರೆ.

‘ಸೋಂಕು ದೃಢಪಟ್ಟ ವೈದ್ಯರು ಸೇರಿದಂತೆ ಲಸಿಕೆ ಹಾಕಿಸಿಕೊಂಡಿರುವ ಎಲ್ಲರೂ ಲಸಿಕೆಯ ಒಂದು ಡೋಸ್‌ ಮಾತ್ರ ಪಡೆದಿದ್ದಾರೆ. ಇನ್ನೊಂದು ಡೋಸ್‌ ಬಾಕಿ ಇದೆ. ನಾಲ್ಕು ವಾರಗಳ ನಂತರ ಎರಡನೇ ಡೋಸ್‌ ಲಸಿಕೆ ಹಾಕಲಾಗುತ್ತದೆ. ಆ ಬಳಿಕವೂ ದೇಹದಲ್ಲಿ ಪ್ರತಿಕಾಯ (ಆ್ಯಂಟಿ ಬಾಡಿ‌) ಸೃಷ್ಟಿಯಾಗಲು ಸಮಯ ಬೇಕಾಗುತ್ತದೆ. ಹಾಗಾಗಿ, ಲಸಿಕೆ ಹಾಕಿದ ತಕ್ಷಣ ಕೋವಿಡ್‌ ಬರುವುದಿಲ್ಲ ಎಂದು ಹೇಳಲು ಆಗುವುದಿಲ್ಲ. ಲಸಿಕೆ ಪಡೆದುಕೊಂಡರೂ ಎಚ್ಚರಿಕೆಯಿಂದ ಇರಬೇಕು’ ಎನ್ನುತ್ತಾರೆ ಚಾಮರಾಜನಗರ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಂ.ಸಿ‌. ರವಿ.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಡಾ.ಕೆ. ಸುಧಾಕರ್, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎರಡೂ ಲಸಿಕೆಗಳು ಸಂಪೂರ್ಣ ಸುರಕ್ಷಿತವಾಗಿದ್ದು, ಈ ಲಸಿಕೆಗಳನ್ನು ಸಾರ್ವಜನಿಕರು ಯಾವುದೇ ಹಿಂಜರಿಕೆ ಇಲ್ಲದೆ ತೆಗೆದುಕೊಳ್ಳಬಹುದು. ಕೊರೊನಾ ಲಸಿಕೆಯ ಬಗ್ಗೆ ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡದೆ, ಕೇವಲ ಸರ್ಕಾರದ ಅಧಿಕೃತ ಮಾಹಿತಿಯನ್ನು ಮಾತ್ರ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ಕೊರೊನಾ ಲಸಿಕೆಯ ಮೊದಲನೇ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ಪಡೆಯಬೇಕಿದ್ದು, ಎರಡನೇ ಡೋಸ್ ಪಡೆದ 14-15 ದಿನಗಳ ನಂತರ; ಅಂದರೆ, ಮೊದಲನೇ ಡೋಸ್ ಪಡೆದ ಸುಮಾರು 45 ದಿನಗಳ ನಂತರವಷ್ಟೇ ರೋಗ ನಿರೋಧಕ ಶಕ್ತಿ ಬರಲಿದೆ. ಈ ನಡುವೆ ಲಸಿಕೆ ಪಡೆದ ವ್ಯಕ್ತಿ ವೈರಾಣುವಿನ ಸಂಪರ್ಕಕ್ಕೆ ಬಂದಿದ್ದರೆ ಸೋಂಕು ತಗುಲುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದ್ದಾರೆ.

ಒಂದಕ್ಕಿಂತ ಹೆಚ್ಚಿನ ಡೋಸ್ ಅಗತ್ಯ

ಅಮೆರಿಕದಲ್ಲಿ ಪ್ರಸ್ತುತ 3 ನೇ ಹಂತದ ಕ್ಲಿನಿಕಲ್ ಪ್ರಯೋಗಗಳಲ್ಲಿರುವ ಕೋವಿಡ್-19 ಲಸಿಕೆಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಲಸಿಕೆಗಳನ್ನು ಎರಡು ಡೋಸ್‌ ಪಡೆಯಬೇಕಾಗುತ್ತದೆ. ಮೊದಲ ಡೋಸ್ ರಕ್ಷಣೆಯನ್ನು ನೀಡಲು ಪ್ರಾರಂಭಿಸುತ್ತದೆಯಾದರೂ ಕೋವಿಡ್‌ನಿಂದ ಹೆಚ್ಚಿನ ರಕ್ಷಣೆಯನ್ನು ಪಡೆಯಲು ಕೆಲವು ವಾರಗಳ ನಂತರ ಎರಡನೇ ಡೋಸ್ ಪಡೆಯುವ ಅಗತ್ಯವಿದೆ.

ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಲಭ್ಯವಿರುವ ಎಲ್ಲಾ ರೀತಿಯ ಸಾಧನಗಳನ್ನು ಬಳಸಬೇಕಾಗುತ್ತದೆ. ಲಸಿಕೆಗಳು ನಿಮ್ಮ ರೋಗ ನಿರೋಧಕ ಶಕ್ತಿಯೊಂದಿಗೆ ಕಾರ್ಯನಿರ್ವಹಿಸುವುದರಿಂದ ನೀವು ಅದಕ್ಕೆ ಒಗ್ಗಿಕೊಂಡರೆ ನಿಮ್ಮ ದೇಹವು ವೈರಸ್ ವಿರುದ್ಧ ಹೋರಾಡಲು ಸಿದ್ಧವಾಗುತ್ತದೆ.

ಲಸಿಕೆ ಹೇಗೆ ಕೆಲಸ ಮಾಡುತ್ತದೆ?

ಸೋಂಕಿಗೆ ಕಾರಣವಾಗುವ ವೈರಸ್‌ ಅಥವಾ ಬ್ಯಾಕ್ಟೀರಿಯಾಗಳ ತದ್ರೂಪನ್ನು ಲಸಿಕೆಯಲ್ಲಿ ಬಳಸಲಾಗುತ್ತದೆ. ವ್ಯಕ್ತಿಯ ದೇಹ ಪ್ರವೇಶಿಸುವ ಈ ತದ್ರೂಪಿ ಸೂಕ್ಷ್ಮಾಣುಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿ ಮಾಡುತ್ತವೆ. ವೈರಸ್‌/ಬ್ಯಾಕ್ಟೀರಿಯಾದ ತದ್ರೂಪನ್ನು ಲಸಿಕೆಯ ಮೂಲಕ ದೇಹಕ್ಕೆ ನೀಡಲಾಗುತ್ತದೆ. ಸೋಂಕಿನ ವಿರುದ್ಧ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸೃಷ್ಟಿ ಮಾಡುತ್ತದೆ.

ಟಿ-ಲಿಂಪೊಸೈಟ್ಸ್ (ರಕ್ಷಣಾತ್ಮಕ ಬಿಳಿ ರಕ್ತ ಕಣಗಳ ಒಂದು ವಿಧ. ಈಗಾಗಲೇ ಸೋಂಕಿಗೆ ಒಳಗಾದ ದೇಹದ ಜೀವಕೋಶಗಳ ಮೇಲೆ ಕಣಗಳು ದಾಳಿ ಮಾಡುತ್ತವೆ) ಮತ್ತು ಬಿ–ಲಿಪೋಸೈಟ್‌ (ರಕ್ಷಣಾತ್ಮಕ ಬಿಳಿ ರಕ್ತ ಕಣಗಳೇ ಆಗಿವೆ. ಪ್ರತಿಜನಕಗಳ ವಿರುದ್ಧ ಹೋರಾಡಲು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ) ಪ್ರತಿಕಾಯಗಳ ಉತ್ಪಾದನೆಗೆ ಕಾರಣವಾಗುತ್ತದೆ.

ಲಸಿಕೆಗಳಲ್ಲಿ ಸೋಂಕಿನ ತದ್ರೂಪು ಇರುವುದರಿಂದಲೇ ಕೆಲವು ಬಾರಿ ಲಸಿಕೆ ಪಡೆದವರಿಗೆ ನಿರ್ದಿಷ್ಟ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರವೂ ಬರುತ್ತದೆ. ಆದರೆ, ಕಾಯಿಲೆಗೆ ದೂಡುವುದಿಲ್ಲ. ಲಸಿಕೆ ನೀಡಿದಾಗ ಕಂಡು ಬರುವ ಜ್ವರ ಮತ್ತಿತರೆ ಸಹಜ ಲಕ್ಷಣಗಳು ನಿರೀಕ್ಷಿತ ಕೂಡ. ಈ ಲಕ್ಷಣಗಳೆಲ್ಲವೂ ಸೋಂಕಿನ ವಿರುದ್ಧ ದೇಹವು ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಟಿ– ಲಿಂಪೋಸೈಟ್‌ಗಳನ್ನ ಸೃಷ್ಟಿಸಿಕೊಳ್ಳುತ್ತಿದೆ ಎಂಬುದರ ಸೂಚಕವಾಗಿವೆ.

ಸಹಜ ಲಕ್ಷಣಗಳು ಮರೆಯಾದ ನಂತರ ದೇಹದಲ್ಲಿ ನಿರ್ದಿಷ್ಟ ಸೋಂಕಿನ ವಿರುದ್ಧ ಹೋರಾಡಿದ ಟಿ–ಲಿಂಪೋಸೈಟ್‌ಗಳ ಜ್ಞಾಪಕ ಕೋಶಗಳು, ಬಿ–ಲಿಂಪೋಸೈಟ್‌ಗಳು ಉಳಿದುಕೊಳ್ಳುತ್ತವೆ. ಭವಿಷ್ಯದಲ್ಲಿ ನಿರ್ದಿಷ್ಟ ಸೋಂಕು ದೇಹವನ್ನೇನಾದರೂ ಪ್ರವೇಶಿಸಿದರೆ ಅದರ ವಿರುದ್ಧ ಹೇಗೆ ಹೋರಾಡಬೇಕು, ಹೇಗೆ ನಿಗ್ರಹಿಸಬೇಕು ಎಂಬುದು ಈ ಟಿ–ಲಿಂಪೋಸೈಟ್‌ ಜ್ಞಾಪಕ ಕೋಶಗಳು ಮತ್ತು ಬಿ–ಲಿಂಪೋಸೈಟ್‌ಗಳಿಗೆ ತಿಳಿದಿರುತ್ತದೆ. ವೈರಸ್‌ ಅಥವಾ ಬ್ಯಾಕ್ಟೀರಿಯ ವಿರುದ್ಧ ಹೋರಾಡಲು ಸಜ್ಜಾಗಿ ನಿಲ್ಲುತ್ತವೆ. ಆ ಮೂಲಕ ಕಾಯಿಲೆ ಉಂಟಾಗದಂತೆ ಇವು ತಡೆಯುತ್ತವೆ.

ಲಸಿಕೆ ಹಾಕಿಸಿಕೊಂಡ ನಂತರ ಟಿ–ಲಿಂಪೋಸೈಟ್‌ಗಳು ಮತ್ತು ಬಿ–ಲಿಂಪೋಸೈಟ್‌ಗಳು ದೇಹದಲ್ಲಿ ಸೃಷ್ಟಿಯಾಗಲು ಕೆಲ ವಾರಗಳು ಬೇಕಾಗುತ್ತವೆ. ಹೀಗಾಗಿ ಲಸಿಕೆ ಪಡೆಯುವ ಮೊದಲು ಮತ್ತು ನಂತರದ ಕೆಲವೇ ದಿನಗಳಲ್ಲೇನಾದರೂ ಸೋಂಕು ತಗುಲಿದರೆ, ನಿರ್ದಿಷ್ಟ ವ್ಯಕ್ತಿಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ಎರಡನೇ ಡೋಸ್ ಪಡೆಯುವವರೆಗೂ ಕೊರೊನಾ ವೈರಸ್ ಸೋಂಕು ತಗುಲುವ ಸಾಧ್ಯತೆಗಳಿರುತ್ತದೆ.

ಮಾಹಿತಿ: ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ), ಅಮೆರಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT