ಗುರುವಾರ , ಏಪ್ರಿಲ್ 15, 2021
24 °C
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿಕೆ

ಬಜೆಟ್‌ನಿಂದ ಆತ್ಮನಿರ್ಭರಕ್ಕೆ ವೇಗ: ನಿರ್ಮಲಾ ಸೀತಾರಾಮನ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಆತ್ಮನಿರ್ಭರ ಭಾರತ ನಿರ್ಮಾಣ ಕಾರ್ಯಕ್ರಮಕ್ಕೆ ‌2021–22ನೇ ಸಾಲಿನ ಕೇಂದ್ರ ಬಜೆಟ್‌ ವೇಗ ನೀಡಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಲೋಕಸಭೆಯಲ್ಲಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ‘ದೇಶದ ದೀರ್ಘಾವಧಿಯ ಗುರಿಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲು ಕೋವಿಡ್‌–19 ಸಾಂಕ್ರಾಮಿಕವು ಅಡ್ಡಿಯಾಗಲಿಲ್ಲ’ ಎಂದು ತಿಳಿಸಿದ್ದಾರೆ.

‘ಸರ್ಕಾರ ತೆಗೆದುಕೊಳ್ಳುತ್ತಿರುವ ಸುಧಾರಣಾ ಕ್ರಮಗಳು ಭಾರತವನ್ನು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಸೇರಿಸಲು ದಾರಿ ಮಾಡಿಕೊಡಲಿವೆ. ಭಾರತವನ್ನು ಸ್ವಾವಲಂಬಿಯನ್ನಾಗಿಸುವ ಪ್ರಕ್ರಿಯೆಗೆ ಕೇಂದ್ರ ಬಜೆಟ್‌ ವೇಗ ನೀಡಿದೆ’ ಎಂದಿದ್ದಾರೆ.

‘ಬಂಡವಾಳ ವೆಚ್ಚ ಹೆಚ್ಚಳ, ಆರೋಗ್ಯಸೇವೆಗಳಿಗೆ ಹೆಚ್ಚಿನ ಅನುದಾನ ಹಂಚಿಕೆ ಹಾಗೂ ಕೃಷಿ ಮೂಲಸೌರ್ಕಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ. ಈ ನಿರ್ಧಾರಗಳು ಆರ್ಥಿಕತೆಯ ಮೇಲೆ ಹಲವು ರೀತಿಯಲ್ಲಿ ಪ್ರಭಾವ ಬೀರುವ ನಿರೀಕ್ಷೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಬಂಡವಾಳಶಾಹಿಗಳ ಪರವಾದ ಬಜೆಟ್‌ ಮಂಡಿಸಿದೆ ಎನ್ನುವ ಪ್ರತಿಪಕ್ಷಗಳ ಟೀಕೆಯನ್ನು ಅವರು ತಳ್ಳಿಹಾಕಿದರು. ‘ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಜನಸಾಮಾನ್ಯರಿಗಾಗಿ ಕೆಲಸ ಮಾಡುತ್ತಿದೆ. ಮುದ್ರಾ ಯೋಜನೆ, ಗ್ರಾಮೀಣ ಪ್ರದೇಶದಲ್ಲಿ ರಸ್ತೆ ನಿರ್ಮಾಣ, ಶೌಚಾಲಯ ಮತ್ತು ವಸತಿ ನಿರ್ಮಾಣ ಯೋಜನೆಗಳು ಬಡವರಿಗಾಗಿ ರೂಪಿಸಲಾಗಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ‘ಸಾಂವಿಧಾನಿಕ ಕಾರ್ಯವೈಖರಿಗಳನ್ನು ನಿರಂತರವಾಗಿ ಅಪಮಾನಿಸುತ್ತಿದ್ದಾರೆ. ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಇವುಗಳಿಗೆ ಸರ್ಕಾರ ನೀಡುತ್ತಿರುವ ಪ್ರತಿಕ್ರಿಯೆಗಳನ್ನು ಕೇಳುವ ಸಂಯಮ ತೋರುತ್ತಿಲ್ಲ. ಹಲವು ವಿಷಯಗಳ ಕುರಿತು ವ್ಯತಿರಿಕ್ತ ನಿಲುವುಗಳನ್ನು ವ್ಯಕ್ತಪಡಿಸುವ ಮೂಲಕ ದೇಶಕ್ಕೆ ಪ್ರಳಯಾಂತಕ ಆಗುತ್ತಿದ್ದಾರೆ’ ಎಂದು ನಿರ್ಮಲಾ ವಾಗ್ದಾಳಿ ನಡೆಸಿದ್ದಾರೆ.

2021–22ನೇ ಸಾಲಿಗೆ ಬಜೆಟ್‌ನಲ್ಲಿ ನರೇಗಾ ಯೋಜನೆಗೆ ₹ 73 ಸಾವಿರ ಕೋಟಿ ಮೀಸಲಿಡಲಾಗಿದೆ. ಭವಿಷ್ಯದಲ್ಲಿ ಅಗತ್ಯ ಎದುರಾದರೆ ಸರ್ಕಾರ ಇನ್ನೂ ಹೆಚ್ಚಿನ ಹಣ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು