ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಅಸಮರ್ಪಕ ಪರೀಕ್ಷೆ– ಕೆಲ ರಾಜ್ಯಗಳ ವಿರುದ್ಧ ಅಸಮಾಧಾನ

ಎರಡನೇ ಅಲೆಗೆ ನಿರ್ಲಕ್ಷ್ಯವೇ ಕಾರಣ: ಕೇಂದ್ರ ಆರೋಗ್ಯ ಸಚಿವಾಲಯ
Last Updated 30 ಮಾರ್ಚ್ 2021, 16:08 IST
ಅಕ್ಷರ ಗಾತ್ರ

ನವದೆಹಲಿ:ಮಹಾರಾಷ್ಟ್ರ, ಪಂಜಾಬ್‌ ಸೇರಿದಂತೆ ಹಲವು ರಾಜ್ಯಗಳು ಅಗತ್ಯವಿರುವಷ್ಟು ಪರೀಕ್ಷೆಗಳನ್ನು ಮಾಡದಿರುವುದು ಹಾಗೂ ಕೋವಿಡ್‌–19 ದೃಢಪಟ್ಟವರ ಪ್ರತ್ಯೇಕವಾಸಕ್ಕೆ ಕ್ರಮ ಕೈಗೊಳ್ಳದಿರುವುದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಈ ವಿಷಯದಲ್ಲಿನ ವೈಫಲ್ಯವೇ ಕೋವಿಡ್‌ ಪ್ರಕರಣಗಳು ಹೆಚ್ಚಿ, ಎರಡನೇ ಅಲೆ ಆರಂಭಗೊಳ್ಳಲು ಕಾರಣ ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಛತ್ತೀಸಗಡ, ಮಧ್ಯಪ್ರದೇಶ ರಾಜ್ಯ ಸರ್ಕಾರಗಳು ಸಹ ಈ ವಿಷಯದಲ್ಲಿ ವಿಫಲವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋವಿಡ್‌–19 ದೃಢಪಟ್ಟ ವ್ಯಕ್ತಿಗಳು ಇತರರೊಂದಿಗೆ ಸಂಪರ್ಕಕ್ಕೆ ಬಾರದೇ ತಮ್ಮ ಮನೆಯಲ್ಲಿಯೇ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಅಂಥ ವ್ಯಕ್ತಿಗಳಿಗಾಗಿ ಸಾಂಸ್ಥಿಕ ಕ್ವಾರಂಟೈನ್‌ ವ್ಯವಸ್ಥೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಅಧಿಕಾರಿಗಳು ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ.

ಅಧಿಕ ಸಂಖ್ಯೆಯ ಪ್ರಕರಣಗಳು ವರದಿಯಾಗಿರುವ ಪ್ರದೇಶಗಳನ್ನು ಕಂಟೈನ್ಮೆಂಟ್‌ ವಲಯಗಳೆಂದು ಘೋಷಿಸಿ, ಸೋಂಕಿತರು ಮನೆಯಲ್ಲಿಯೇ ಪ್ರತ್ಯೇಕವಾಗಿ ಇರುವಂತೆ ನೋಡಿಕೊಂಡರೆ ಸಾಲದು. ಕಂಟೈನ್ಮೆಂಟ್‌ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕನಿಷ್ಠ ಎರಡು ವಾರಗಳ ಅವಧಿಗೆಕಟ್ಟುನಿಟ್ಟಾಗಿ ಪಾಲಿಸಬೇಕು ಎಂದೂ ಅಧಿಕಾರಿಗಳು ಸೂಚಿಸಿದ್ದಾರೆ.

ಪೊಲೀಸ್‌ ಕಾಯ್ದೆಯಡಿ ನೀಡಲಾದ ಅಧಿಕಾರ ಚಲಾಯಿಸುವ ಮೂಲಕ ಕೋವಿಡ್‌–19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಹೆಚ್ಚು ಪ್ರಕರಣಗಳು ಕಂಡು ಬಂದ ಜಿಲ್ಲೆಗಳಲ್ಲಿ ಮುಂದಿನ ಎರಡು ವಾರಗಳಲ್ಲಿ ಶೇ 100ರಷ್ಟು ಲಸಿಕೆ ಹಾಕಲು ಕ್ರಮ ಕೈಗೊಳ್ಳುವಂತೆಯೂ ಸಚಿವಾಲಯ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT