ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವೀಂದ್ರನಾಥ ಟ್ಯಾಗೋರರು ಬೆಳ್ಳಗಿರಲಿಲ್ಲ, ತಾಯಿ ಎತ್ತಿ ಆಡಿಸಲಿಲ್ಲ: ಕೇಂದ್ರ ಸಚಿವ

Last Updated 19 ಆಗಸ್ಟ್ 2021, 7:25 IST
ಅಕ್ಷರ ಗಾತ್ರ

ಶಾಂತಿನಿಕೇತನ/ಕೋಲ್ಕತ್ತ: ನೊಬೆಲ್‌ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್‌ ಅವರ ಕುರಿತು ಕೇಂದ್ರ ಶಿಕ್ಷಣ ಇಲಾಖೆ ರಾಜ್ಯ ಖಾತೆ ಸಚಿವ ಸುಭಾಷ್‌ ಸರ್ಕಾರ್ ಬುಧವಾರ ಆಡಿರುವ ಮಾತುಗಳು, ವಿವಾದ ಸೃಷ್ಟಿ ಮಾಡಿವೆ.

‘ರವೀಂದ್ರನಾಥ ಟ್ಯಾಗೋರ್‌ ಅವರು ಬೆಳ್ಳಗಿರಲಿಲ್ಲ. ಹೀಗಾಗಿ ಚಿಕ್ಕಂದಿನಲ್ಲಿ ಟ್ಯಾಗೋರರ ತಾಯಿಯು ಅವರನ್ನು ಎತ್ತಿ ಆಡಿಸಿರಲಿಲ್ಲ’ ಎಂದು ಸುಭಾಷ್‌ ಸರ್ಕಾರ್‌ ಹೇಳಿದ್ದಾರೆ. ಸರ್ಕಾರ್‌ ಅವರ ಈ ಹೇಳಿಕೆಯನ್ನು ಖಂಡಿಸಿರುವ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ, ‘ಇದು ರಾಜ್ಯದ ಆಸ್ಮಿತೆಯಾದ ಟ್ಯಾಗೋರರಿಗೆ ಮಾಡಿದ ಅಪಮಾನ’ ಎಂದಿದೆ. ಆದರೆ, ಸಚಿವರನ್ನು ಪಶ್ಚಿಮ ಬಂಗಾಳ ಬಿಜೆಪಿ ಸಮರ್ಥಿಸಿಕೊಂಡಿದೆ. ‘ಸುಭಾಷ್‌ ಹೇಳಿಕೆ ವರ್ಣಭೇದ ನೀತಿಯ ವಿರುದ್ಧವಾಗಿದೆ’ ಎಂದಿದೆ.

ಟ್ಯಾಗೋರರು ಸ್ಥಾಪಿಸಿದ ವಿಶ್ವ ಭಾರತಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ವೇಳೆ ಬುಧವಾರ ಸುಭಾಷ್‌ ಅವರು ಈ ಹೇಳಿಕೆ ನೀಡಿದ್ದರು. ವೃತ್ತಿಯಿಂದ ವೈದ್ಯರಾಗಿದ್ದ ಸುಭಾಷ್‌, ನಂತರ ಸಂಸದರಾಗಿ, ಈಗ ಕೇಂದ್ರ ಶಿಕ್ಷಣ ಇಲಾಖೆಯ ರಾಜ್ಯ ಖಾತೆ ಸಚಿವರಾಗಿದ್ದಾರೆ.

‘ಟ್ಯಾಗೋರರ ಕುಟುಂಬದ ಇತರ ಸದಸ್ಯರು ಹಳದಿ ಮಿಶ್ರಿತವಾದ ಆಕರ್ಷಕ ಬಿಳುಪಿನ ಮೈಬಣ್ಣ ಹೊಂದಿದ್ದರು. ಆದರೆ, ಟ್ಯಾಗೋರರ ಚರ್ಮದ ಬಣ್ಣ ಎಣ್ಣೆಗೆಂಪಿನಂತಿತ್ತು. ಚರ್ಮದ ಬಣ್ಣದಲ್ಲಿ ಎರಡು ವಿಧಗಳಿವೆ. ಒಂದು ಹಳದಿ ಮಿಶ್ರಿತ ಆಕರ್ಷಕ ಬಿಳುಪಿನ ಬಣ್ಣ. ಎರಡನೇಯದು, ಎಣ್ಣೆಗೆಂಪು. ಗುರುಗಳು (ಟ್ಯಾಗೋರರು) ಎರಡನೇ ವಿಧಾನದ ಚರ್ಮದ ಬಣ್ಣ ಹೊಂದಿದ್ದರು. ಅವರ ಮೈಬಣ್ಣದ ಕಾರಣಕ್ಕಾಗಿ ಅವರ ತಾಯಿಯಾಗಲಿ ಮತ್ತು ಕುಟುಂಬದ ಇತರರಾಗಲಿ ರವೀಂದ್ರನಾಥರನ್ನು ತಮ್ಮ ತೋಳುಗಳಲ್ಲಿ ಎತ್ತಿ ಆಡಿಸಲಿಲ್ಲ. ಮಡಿಲಲ್ಲಿ ಕೂರಿಸಿಕೊಳ್ಳಲಿಲ್ಲ’ ಎಂದು ಸರ್ಕಾರ್‌ ಹೇಳಿದರು.

ಸರ್ಕಾರ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ಶಿಕ್ಷಣ ತಜ್ಞರು ಮತ್ತು ರಾಜಕಾರಣಿಗಳು ಅವರ ಮಾತುಗಳನ್ನು ಖಂಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರವೀಂದ್ರ ಭಾರತಿ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪವಿತ್ರಾ ಸರ್ಕಾರ್ ಅವರು, ‘ಸಚಿವ ಸುಭಾಷ್‌ ಸರ್ಕಾರ್‌ ಅವರು ಯಾವ ಆಧಾರದ ಮೇಲೆ ಇಂತಹ ಮಾತುಗಳನ್ನಾಡಿದ್ದಾರೆ ಎಂಬುದು ಗೊತ್ತಿಲ್ಲ. ಅವರು ಟ್ಯಾಗೋರರ ಜೀವನ ಚರಿತ್ರೆಯನ್ನು ಸಂಪೂರ್ಣವಾಗಿ ಓದಿದ್ದಾರೋ ಅಥವಾ ಅವರ ಬರಹಗಳನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ’ ಎಂದಿದ್ದಾರೆ.

‘ಟ್ಯಾಗೋರರ ಮೈಬಣ್ಣ ಕಪ್ಪಾಗಿರಲಿಲ್ಲ. ಆದರೂ, ಅವರ ಅಕ್ಕ ಸೇರಿದಂತೆ ಕೆಲವರು ‘ಕಪ್ಪನೆ ಹುಡುಗ ರವಿ’ ಎಂದು ಬಣ್ಣಿಸಿದ್ದರು. ಅದು ಕೇವಲ ಉತ್ಪ್ರೇಕ್ಷೆಯಾಗಿತ್ತಷ್ಟೇ. ಆದರೆ, ರವೀಂದ್ರನಾಥ್ ಅವರು ಆಫ್ರಿಕನ್ನರಂತೆ ಗಾಢಕಪ್ಪು ವರ್ಣದವರಾಗಿದ್ದರು ಎನ್ನುವುದು ಸರ್ಕಾರ್‌ ಅವರ ಮಾತಿನ ಅರ್ಥವೇ? ಅಥವಾ ಅವರು ಗೌರವರ್ಣ ಮತ್ತು ಕಪ್ಪಿನ ನಡುವಿನ ಬಣ್ಣವನ್ನು ಹೊಂದಿದ್ದರು ಎಂಬುದು ಅವರ ಮಾತಿನ ಅರ್ಥವೇ’ ಎಂದು ಪ್ರಶ್ನೆ ಮಾಡಿದ್ದಾರೆ.

‘ಸುಭಾಷ್‌ ಸರ್ಕಾರ್ ಅವರಿಗೆ ಇತಿಹಾಸದ ಬಗ್ಗೆ ತಿಳಿದಿಲ್ಲ. ರವೀಂದ್ರನಾಥ ಟ್ಯಾಗೋರರು ಗೌರವರ್ಣ ಹೊಂದಿದ್ದವರಾಗಿದ್ದರು. ಸಚಿವರ ಹೇಳಿಕೆಯು ಜನಾಂಗೀಯ ನಿಂದನೆ. ಅಲ್ಲದೆ, ಬಂಗಾಳದ ಅಸ್ಮಿತೆಗೆ ಮಾಡಿದ ಅಪಮಾನ. ಸುಭಾಷ್‌ ಇನ್ನೊಮ್ಮೆ ವಿಶ್ವಭಾರತಿ ವಿಶ್ವವಿದ್ಯಾಲಯ ಪ್ರವೇಶಿಸಲು ಅನುಮತಿ ನೀಡಬಾರದು,’ ಎಂದು ಹಿರಿಯ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಹೇಳಿದರು.

ವಿವಾದಕ್ಕೆ ಸಿಲುಕಿರುವ ಕೇಂದ್ರ ಸಚಿವ ಸುಭಾಷ್‌ ಸರ್ಕಾರ್‌ ಅವರ ಬೆಂಬಲಕ್ಕೆ ಪಶ್ಚಿಮ ಬಂಗಾಳ ಬಿಜೆಪಿ ಧಾವಿಸಿದೆ. ಕೇಂದ್ರ ಸಚಿವರ ಅಭಿಪ್ರಾಯವು ವರ್ಣಭೇದ ನೀತಿಗೆ ವಿರುದ್ಧವಾಗಿದೆ ಎಂದು ಹೇಳಿದೆ.

ಇದನ್ನೂ ಓದಿ:

’ಸುಭಾಷ್‌ ಸರ್ಕಾರ್ ಅವರು ಟ್ಯಾಗೋರರ ಅಥವಾ ಅವರ ಕುಟುಂಬದ ವಿರುದ್ಧ ಏನನ್ನೂ ಹೇಳಿಲ್ಲ. ಚರ್ಮದ ಬಣ್ಣದ ಆಧಾರದ ಮೇಲೆ ನಡೆದ ತಾರತಮ್ಯದ ವಿರುದ್ಧ ಮಾತನಾಡಿದ್ದಾರೆ. ಅವರ ಮಾತುಗಳು ಯಾರನ್ನೂ ಅವಮಾನಿಸುವ ಉದ್ದೇಶವನ್ನು ಹೊಂದಿಲ್ಲ. ಟಿಎಂಸಿ ಎಲ್ಲದರಲ್ಲೂ ರಾಜಕೀಯ ಮಾಡುವುದನ್ನು ನಿಲ್ಲಿಸಬೇಕು’ ಎಂದು ಬಿಜೆಪಿ ವರಕ್ತಾರ ಶಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT