ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಿರುದ್ಧ ಒಂದಾಗುವ ಸಮಯ ಬಂದಿದೆ: ಬಿಜೆಪಿಯೇತರ ನಾಯಕರಿಗೆ ಮಮತಾ ಪತ್ರ

Last Updated 31 ಮಾರ್ಚ್ 2021, 12:45 IST
ಅಕ್ಷರ ಗಾತ್ರ

ಕೋಲ್ಕತ್ತ: ಸೋನಿಯಾ, ಕೇಜ್ರಿವಾಲ್‌, ಸ್ಟಾಲಿನ್‌ ಸೇರಿದಂತೆ ಬಿಜೆಪಿಯೇತರ ಹಲವು ಪ್ರಮುಖ ನಾಯಕರಿಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಪತ್ರ ಬರೆದಿದ್ದಾರೆ.


ಪತ್ರದಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಮಮತಾ, 'ದೇಶದಲ್ಲಿ ಒಂದು ಪಕ್ಷದ ಸರ್ವಾಧಿಕಾರಿ ಆಡಳಿತವನ್ನು ಸ್ಥಾಪಿಸಲಾಗುತ್ತಿದೆ. ಇದರ ವಿರುದ್ಧ ಕಾರ್ಯಯೋಜನೆ ರೂಪಿಸಲು ನಾವೆಲ್ಲರೂ ಒಂದಾಗಬೇಕಿದೆ' ಎಂದು ಕರೆ ನೀಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ಆರ್‌ಜೆಡಿ ಮುಖ್ಯಸ್ಥ ತೇಜಶ್ವಿ ಯಾದವ್, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಮತ್ತು ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್‌ ಅವರಿಗೆ ಮಮತಾ ಅವರು ಪತ್ರ ಬರೆದಿದ್ದಾರೆ.

ಮಾರ್ಚ್‌ 28ರಂದು ಬರೆದಿರುವ ಪತ್ರದಲ್ಲಿ, 'ಭಾರತದ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಒಕ್ಕೂಟದ ಮೇಲೆ ಬಿಜೆಪಿಯಿಂದ ದಾಳಿ ನಡೆದಿದೆ' ಎಂದು ಮಮತಾ ಆರೋಪಿಸಿದ್ದಾರೆ.

ಇತ್ತೀಚೆಗೆ ಅಂಗೀಕರಿಸಲಾದ ರಾಷ್ಟ್ರೀಯ ರಾಜಧಾನಿ ದೆಹಲಿ (ಜಿಎನ್‌ಸಿಟಿಡಿ) ಮಸೂದೆಯನ್ನು ಉದಾಹರಣೆಯಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 'ಈ ಕಾನೂನಿನ ಮೂಲಕ ಲೆಫ್ಟಿನೆಂಟ್ ಗವರ್ನರ್ ಅವರನ್ನು ದೆಹಲಿಯ ವೈಸ್‌ರಾಯ್‌ ಆಗಿ ಮಾಡಲಾಗಿದೆ. ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಪ್ರಧಾನಿ ಮೋದಿಯವರ ಆದೇಶದಂತೆ ಕಾರ್ಯನಿರ್ವಹಿಸುತ್ತಾರೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರದ ಎಲ್ಲಾ ಅಧಿಕಾರಗಳನ್ನು ಕೇಂದ್ರ ಸರ್ಕಾರವು ಪ್ರಾಯೋಗಿಕವಾಗಿ ಕಸಿದುಕೊಂಡಿದೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

'ರಾಜ್ಯಪಾಲರು ಪದಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ವಿರೋಧ ಪಕ್ಷಗಳ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಳಸಲಾಗುತ್ತಿದೆ. ಬಿಜೆಪಿ ಅಧಿಕಾರ ಹೊಂದಿರದ ರಾಜ್ಯಗಳಿಗೆ ಹಣ ವರ್ಗಾವಣೆ ಮಾಡುವುದನ್ನು ತಡೆಹಿಡಿಯಲಾಗುತ್ತಿದೆ. ಬಿಜೆಪಿಯೇತರ ರಾಜ್ಯ ಸರ್ಕಾರಗಳನ್ನು ಉರುಳಿಸಲು ಅನಿಯಮಿತ ಸಂಪನ್ಮೂಲಗಳನ್ನು ಸಂಗ್ರಹಿಸಲಾಗುತ್ತಿದೆ' ಎಂದು ಮಮತಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

'ಪ್ರಜಾಪ್ರಭುತ್ವದ ಮೇಲೆ ಬಿಜೆಪಿಯಿಂದ ನಡೆದಿರುವ ದಾಳಿಯ ವಿರುದ್ಧ ಬಲವಾದ ಮತ್ತು ಪರಿಣಾಮಕಾರಿಯಾದ ಹೋರಾಟವನ್ನು ರೂಪಿಸುವ ಸಮಯ ಬಂದಿದೆ. ಬಿಜೆಪಿಯ ವಿರುದ್ಧ ಎಲ್ಲಾ ಸಮಾನ ಮನಸ್ಸಿನ ಪಕ್ಷಗಳೊಂದಿಗೆ ಪೂರ್ಣ ಹೃದಯದಿಂದ ಕೆಲಸ ಮಾಡುವ ಭರವಸೆ ನೀಡುತ್ತೇನೆ' ಎಂದು ಮಮತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT