ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಚನೆ ಇಲ್ಲದೇ ಲಸಿಕೆ ಕೊಟ್ಟರೆ ರೂಪಾಂತರ ತಳಿ ಸೃಷ್ಟಿ: ಕೇಂದ್ರಕ್ಕೆ ತಜ್ಞರ ವರದಿ

Last Updated 11 ಜೂನ್ 2021, 8:21 IST
ಅಕ್ಷರ ಗಾತ್ರ

ದೆಹಲಿ: ಸಾಮೂಹಿಕ, ವಿವೇಚನೆಯಿಲ್ಲದ ಮತ್ತು ಅಪೂರ್ಣವಾದ ಲಸಿಕಾ ಅಭಿಯಾನವು ರೂಪಾಂತರ ತಳಿಗಳ ಹೊರಹೊಮ್ಮುವಿಕೆಯನ್ನು ಪ್ರಚೋದಿಸುತ್ತದೆ ಎಂದು ಏಮ್ಸ್‌ನ ವೈದ್ಯರು, ಕೋವಿಡ್-19 ರಾಷ್ಟ್ರೀಯ ಕಾರ್ಯಪಡೆಯ ಸದಸ್ಯರು, ಸಾರ್ವಜನಿಕ ಆರೋಗ್ಯ ತಜ್ಞರ ತಂಡ ಹೇಳಿದೆ. ಕೊರೊನಾ ವೈರಸ್‌ ಸೋಂಕಿಗೆ ಒಳಗಾದವರಿಗೆ ಲಸಿಕೆ ಹಾಕುವ ಅಗತ್ಯವಿಲ್ಲ ಎಂದೂ ತಜ್ಞರು ಸಲಹೆ ನೀಡಿದ್ದಾರೆ.

ಮಕ್ಕಳನ್ನೂ ಒಳಗೊಂಡಂತೆ ದೊಡ್ಡ ಜನಸಮುದಾಯಕ್ಕೆ ಲಸಿಕೆ ನೀಡುವ ಪ್ರಯತ್ನಗಳ ಬದಲಿಗೆ, ದುರ್ಬಲರಿಗೆ ಮತ್ತು ಸೋಂಕಿನ ಅಪಾಯ ಇರುವವರಿಗೆ ಮೊದಲು ಲಸಿಕೆ ನೀಡಬೇಕು. ಇದೇ ಈ ಹೊತ್ತಿನ ಗುರಿಯಾಗಿರಬೇಕು ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ (ಐಪಿಎಚ್‌ಎ), ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಸಂಘ (ಐಎಇ) ಮತ್ತು ‘ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಅಂಡ್ ಸೋಶಿಯಲ್ ಮೆಡಿಸಿನ್’ (ಐಎಪಿಎಸ್ಎಂ)ನ ತಜ್ಞರು ವರದಿ ನೀಡಿದ್ದಾರೆ.

ಎಲ್ಲಾ ವಯೋಮಾನದವರಿಗೆ ಲಸಿಕೆ ಹಾಕುವುದಕ್ಕೆ ಬದಲಾಗಿ ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನಗಳ ವರದಿಗಳು ಮತ್ತು ರೋಗದ ವಿರುದ್ಧ ಸೆಣಸುತ್ತಿರುವವರ ಮಾರ್ಗದರ್ಶನ ಪಡೆದು ಲಸಿಕೆ ಅಭಿಯಾನ ಕೈಗೊಳ್ಳಬೇಕು. ದೇಶದಲ್ಲಿ ಸದ್ಯ ಅಂಥ ಪರಿಸ್ಥಿತಿ ಇದೆ ಎಂದು ತಜ್ಞರು ಹೇಳಿದ್ದಾರೆ.

‘ಎಲ್ಲರಿಗೂ ಒಂದೇ ಬಾರಿಗೆ ಲಸಿಕೆ ಕೊಡುವ ಪ್ರಯತ್ನಗಳಿಂದ ಮಾನವ ಮತ್ತು ಇತರ ಸಂಪನ್ಮೂಲಗಳು ಬರಿದಾಗುತ್ತವೆ,’ ಎಂದು ತಜ್ಞರು ವರದಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಿದ್ದಾರೆ.

‘ಹದಿಹರೆಯದವರಿಗೆ ಮತ್ತು ಮಕ್ಕಳಿಗೆ ಲಸಿಕೆ ನೀಡಬೇಕೆಂಬುದಕ್ಕೆ ಪೂರಕ ವೈಜ್ಞಾನಿಕ ಸಾಕ್ಷ್ಯಗಳಿಲ್ಲ. ಯೋಜಿತವಲ್ಲದ ಲಸಿಕೀಕರಣವು ರೂಪಾಂತರ ತಳಿಗಳ ಸೃಷ್ಟಿಯನ್ನು ಉತ್ತೇಜಿಸುತ್ತವೆ. ಸಾಮೂಹಿಕ, ವಿವೇಚನೆಯಿಲ್ಲದ ಮತ್ತು ಅಪೂರ್ಣ ಲಸಿಕಾ ಅಭಿಯಾನವೂ ರೂಪಾಂತರ ತಳಿಗಳ ಹೊರಹೊಮ್ಮುವಿಕೆಯನ್ನು ಪ್ರಚೋದಿಸುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಸದ್ಯ ತ್ವರಿತವಾಗಿ ಹರಡುತ್ತಿರುವ ಸೋಂಕನ್ನು ಸಾಮೂಹಿಕ ಲಸಿಕಾ ಅಭಿಯಾನವು ತಡೆಯುವುದಿಲ್ಲ,’ ಎಂದು ವರದಿಯಲ್ಲಿ ಹೇಳಲಾಗಿದೆ.

‘ಕೊರೊನಾ ವೈರಸ್‌ನ ಸೋಂಕಿಗೆ ಒಳಗಾದವರಿಗೆ ಲಸಿಕೆ ನೀಡುವ ಅಗತ್ಯವಿಲ್ಲ. ನೈಸರ್ಗಿಕವಾಗಿ ಸೋಂಕುಗೊಂಡ ನಂತರ ಲಸಿಕೆ ಪ್ರಯೋಜನಕಾರಿ ಎಂಬುದಕ್ಕೆ ಪುರಾವೆಗಳು ಲಭ್ಯವಾದ ನಂತರ ಈ ಜನರಿಗೆ ಲಸಿಕೆ ನೀಡಬಹುದು,’ ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT