ಮಂಗಳವಾರ, ಜನವರಿ 19, 2021
17 °C

ಸ್ಮಶಾನದಲ್ಲಿ ಚಾವಣಿ ಕುಸಿತ ಪ್ರಕರಣ | ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕ್ರಮ: ಯೋಗಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಗಾಜಿಯಾಬಾದ್‌: ಇಲ್ಲಿನ ಮುರಾದ್‌ನಗರ ಪ್ರದೇಶದಲ್ಲಿ ಶವಸಂಸ್ಕಾರಕ್ಕೆ ತೆರಳಿದ್ದವರ ಮೇಲೆ ಛಾವಣಿ ಕುಸಿದು 25 ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಗರಿಕ ಯೋಜನೆಗಳ ಕಳಪೆ ನಿರ್ವಹಣೆಯ ಫಲವಾಗಿ ಈ ದುರಂತ ನಡೆದಿದ್ದು, ತಪ್ಪಿತಸ್ಥರಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿಭಾಗೀಯ ಪರಿಶೀಲನಾ ಸಭೆ ನಡೆಸಿದ್ದ ಯೋಗಿ, ₹ 50 ಲಕ್ಷಕ್ಕಿಂತ ಹೆಚ್ಚು ಮೊತ್ತದ ಯೋಜನೆಗಳ ಕಾಮಗಾರಿ ಗುಣಮಟ್ಟ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಗುಣಮಟ್ಟ ಪರಿಶೀಲನೆ ಸಲುವಾಗಿ ಎಲ್ಲಾ ಜಿಲ್ಲೆಗಳಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆಯನ್ನು ರಚಿಸಲಾಗಿತ್ತು.

ತಮ್ಮ ನಿವಾಸದಲ್ಲಿ ಸೋಮವಾರ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿ, ಇಂತಹ ಪ್ರಕರಣ ನಡೆದ ಗಾಜಿಯಾಬಾದ್‌ನಲ್ಲಿ ಕಾರ್ಯಪಡೆ ಏನು ಮಾಡುತ್ತಿದೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಕಾಮಗಾರಿ ಗುಣಮುಟ್ಟ ಪರೀಕ್ಷಿಸಲು ವಿಫಲರಾದ ಮೀರತ್‌ ವಿಭಾಗೀಯ ಆಯುಕ್ತ ಮತ್ತು ಗಾಜಿಯಾಬಾದ್‌ ಜಿಲ್ಲಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

‘ಇಂತಹ ಪ್ರಕರಣಗಳನ್ನು ಮುಂದಿನ ದಿನಗಳಲ್ಲಿ ಸಹಿಸಿಕೊಳ್ಳಲಾಗದು. ತಪ್ಪಿತಸ್ಥರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಎಚ್ಚರಿಸಿದ್ದಾರೆ.

ಪ್ರಕರಣದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮೀರತ್‌ ವಿಭಾಗೀಯ ಆಯುಕ್ತ ಹಾಗೂ ಎಡಿಜಿಪಿಗೆ ಸೂಚಿಸಲಾಗಿದೆ. ವರದಿಯನ್ನು ಆಧರಿಸಿ ಅಧಿಕಾರಿಗಳನ್ನು ಪ್ರಕರಣದ ಹೊಣೆಗಾರರನ್ನಾಗಿಸಲಾಗುವುದು ಎಂದೂ ಹೇಳಿದ್ದಾರೆ.

ಸದ್ಯ ಪರಿಹಾರ ಕಾರ್ಯಾಚರಣೆ ನಡೆಸುವಂತೆ ಮತ್ತು ವರದಿ ಸಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಸಾಧ್ಯವಿರುವ ಎಲ್ಲ ರೀತಿಯ ನೆರವನ್ನು ಸಂತ್ರಸ್ತರಿಗೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ನಗರಪಾಲಿಕೆಯ ಕಾರ್ಯನಿರ್ವಾಹಕ ಅಧಿಕಾರಿ ನಿಹಾರಿಕಾ ಸಿಂಗ್‌, ಕಿರಿಯ ಎಂಜಿನಿಯರ್‌ ಚಂದ್ರಪಾಲ್‌ ಮತ್ತು ಮೇಲ್ವಿಚಾರಕ ಆಶಿಶ್‌ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಗುತ್ತಿಗೆದಾರ ಅಜಯ್‌ ತ್ಯಾಗಿಯನ್ನು ಸೋಮವಾರ ಸಂಜೆ ಬಂಧಿಸಲಾಗಿದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು