ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಚುನಾವಣೆ ಫಲಿತಾಂಶ: ಸ್ಥಾನ ಹೆಚ್ಚಿಸಿಕೊಂಡ ಎಸ್‌ಪಿ

Last Updated 10 ಮಾರ್ಚ್ 2022, 20:06 IST
ಅಕ್ಷರ ಗಾತ್ರ

ಲಖನೌ: ಸಮಾಜವಾದಿ ಪಕ್ಷವು (ಎಸ್‌ಪಿ) ಈ ಚುನಾವಣೆಯಲ್ಲಿ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಂಡಿದೆ. 2017ರಲ್ಲಿ 377 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಎಸ್‌ಪಿ, 47 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆ ಚುನಾವಣೆಯಲ್ಲಿ ಎಸ್‌ಪಿ ಪಡೆದ ಮತ ಪ್ರಮಾಣ ಶೇ 7.7 ಮಾತ್ರ. ಆದರೆ ಈ ಚುನಾವಣೆಯಲ್ಲಿ ಎಸ್‌ಪಿ107 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. 5 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.

ಈ ಹಿಂದಿನ ಚುನಾವಣೆಗೆ ಹೋಲಿಸಿದರೆ ಎಸ್‌ಪಿ ತನ್ನ ಸ್ಥಾನವನ್ನು ಉತ್ತಮಪಡಿಸಿಕೊಂಡಿದೆ. ಆದರೆ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಪಡೆದುಕೊಳ್ಳುವಲ್ಲಿ ಎಸ್‌ಪಿ ವಿಫಲವಾಗಿದೆ. ಆದರೆ ಸ್ಥಾನ ಉತ್ತಮಪಡಿಸಿಕೊಳ್ಳುವಲ್ಲಿ ಹಲವು ಅಂಶಗಳು ಎಸ್‌ಪಿ ಪರವಾಗಿ ಕೆಲಸ ಮಾಡಿದೆ.

ಪೂರ್ವಾಂಚಲದಲ್ಲಿ ಬಿಎಸ್‌ಪಿಯ ಹಲವು ಕ್ಷೇತ್ರಗಳನ್ನು ಎಸ್‌ಪಿ ಗೆದ್ದುಕೊಂಡಿದೆ. ಬಿಎಸ್‌ಪಿ ಮುಖ್ಯಸ್ಥ ಮಾಯಾವತಿ ಅವರು ಚುನಾವಣಾ ಕಣದಲ್ಲಿ ನಿಷ್ಕ್ರಿಯರಾಗಿ ಇದ್ದದ್ದು, ಬಿಎಸ್‌ಪಿ ಮತಗಳು ಹಂಚಿಹೋಗಲು ಕಾರಣವಾಗಿದೆ. ಈ ಚುನಾವಣೆಯಲ್ಲಿ ಬಿಎಸ್‌ಪಿಯ ಮತ ಪ್ರಮಾಣ ಕುಸಿದಿದೆ. ಬಿಎಸ್‌ಪಿಯ ಮತಗಳಲ್ಲಿ ಹಲವು ಬಿಜೆಪಿಗೆ ವರ್ಗವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಆದರೆ, ಅದೇ ಕ್ಷೇತ್ರಗಳಲ್ಲಿ ಯಾದವರು ಮತ್ತು ಇತರ ಹಿಂದುಳಿದ ವರ್ಗಗಳ ಮತವು ಎಸ್‌ಪಿಗೆ ಬಿದ್ದಿರುವ ಕಾರಣ ಆ ಕ್ಷೇತ್ರಗಳಲ್ಲಿ ಎಸ್‌ಪಿ ಗೆಲುವು ಸಾಧಿಸಿದೆ.

ಬಿಜೆಪಿ ವಿರುದ್ಧದ ರೈತರ ಸಿಟ್ಟನ್ನು ತನ್ನ ಪರವಾಗಿ ಬಳಸಿಕೊಳ್ಳುವಲ್ಲಿ ಎಸ್‌ಪಿ ಯಶಸ್ವಿಯಾಗಿದೆ. ಆದರೆ, ಅದು ನಿರೀಕ್ಷಿತ ಮಟ್ಟದಲ್ಲಿ ಸಫಲವಾಗಿಲ್ಲ. ರೈತ ಸಮುದಾಯ ಬಹುಸಂಖ್ಯಾತವಾಗಿರುವ ಪ್ರಾಂತ್ಯಗಳಲ್ಲಿ ಎಸ್‌ಪಿ ಹಲವು ಕ್ಷೇತ್ರಗಳನ್ನು ಬಿಜೆಪಿಯಿಂದ ಗೆದ್ದುಕೊಂಡಿದೆ.

ಕಾಂಗ್ರೆಸ್‌ ಎಲ್ಲಾ ಕ್ಷೇತ್ರಗಳಲ್ಲಿ ಕಣಕ್ಕೆ ಇಳಿದಿದ್ದ ಕಾರಣ, ಅದು ಬ್ರಾಹ್ಮಣರು ಮತ್ತು ಮೇಲುವರ್ಗದ ಮತದಾರರನ್ನು ಸೆಳೆಯುತ್ತದೆ. ಇದರಿಂದ ಬಿಜೆಪಿಯ ಮತಗಳು ಕುಸಿಯುತ್ತವೆ ಎಂದು ಎಣಿಸಲಾಗಿತ್ತು. ಅದರ ಲಾಭ ಎಸ್‌ಪಿಗೆ ಬರುತ್ತದೆ. ಅಲ್ಲಿ ಎಸ್‌ಪಿಗೆ ಹೆಚ್ಚು ಮತಗಳು ಬೀಳದೇ ಇದ್ದರೂ, ಬಿಜೆಪಿ ಮತಗಳು ವಿಭಜನೆಯಾಗುವುದರಿಂದ ಎಸ್‌ಪಿಗೆ ಲಾಭವಾಗುತ್ತದೆ ಎಂದು ಎಣಿಸಲಾಗಿತ್ತು. ಆದರೆ ಈ ತಂತ್ರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಎಸ್‌ಪಿ ಹಲವು ಕ್ಷೇತ್ರಗಳಲ್ಲಿ ಗೆಲುವಿನ ಅವಕಾಶಗಳನ್ನು ಕಳೆದುಕೊಂಡಿದೆ. ಕಾಂಗ್ರೆಸ್‌ನ ಮತ ಪ್ರಮಾಣವೂ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT