ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶವನ್ನು ಮತ್ತೊಮ್ಮೆ ‘ಹೆಮ್ಮೆಯ ರಾಜ್ಯ' ಮಾಡುವುದೇ ಬಿಜೆಪಿ ಅಜೆಂಡಾ: ಶಾ

Last Updated 20 ಫೆಬ್ರುವರಿ 2022, 7:55 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶವನ್ನು ಮತ್ತೊಮ್ಮೆ ಹೆಮ್ಮೆಯ ರಾಜ್ಯವನ್ನಾಗಿ ಮಾಡುವುದೇಬಿಜೆಪಿಯ ಅಜೆಂಡಾ (ಕಾರ್ಯಸೂಚಿ) ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ರಾಜ್ಯಸಭೆ ಸದಸ್ಯ ಸಂಜಯ್ ಸೇಠ್ ನಗರದಲ್ಲಿ ಆಯೋಜಿಸಿದ್ದ 'ಪ್ರಬುದ್ಧ ವರ್ಗ ಸಮಾವೇಶ'ದಲ್ಲಿ ಮಾತನಾಡಿದ ಅಮಿತ್ ಶಾ, 'ಉತ್ತರ ಪ್ರದೇಶವನ್ನು ಅತ್ಯಂತ ಸಮೃದ್ಧ, ಸಾಕ್ಷರ ರಾಜ್ಯಗಳ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಕೊಂಡೊಯ್ಯುವುದೇ ಬಿಜೆಪಿಯ ಕಾರ್ಯಸೂಚಿ' ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಪೂರ್ಣಗೊಳ್ಳದೆ ಉಳಿದುಕೊಂಡಿದ್ದ ನೀರಾವರಿ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಉದ್ಘಾಟಿಸಿದ್ದರು ಎಂದುಉಲ್ಲೇಖಿಸಿರುವ ಅವರು, 'ದೇಶದ ಮೊದಲಪ್ರಧಾನಮಂತ್ರಿ ಜವಾಹರ್‌ಲಾಲ್‌ ನೆಹರೂ ಅವರು 1961ರಲ್ಲಿ ಭೂಮಿ ಪೂಜೆ ನೆರವೇರಿಸಿದ್ದ ನೀರಾವರಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಕೆಲವು ದಿನಗಳ ಹಿಂದಷ್ಟೇ ಉದ್ಘಾಟಿಸಿದ್ದರು.ಈ ಯೋಜನೆಗಳು ಪೂರ್ಣಗೊಳ್ಳಲು 59 ವರ್ಷಗಳು ಬೇಕಾದವು. ಇದು ನನ್ನ ವಯಸ್ಸಿಗಿಂತಲೂ (57 ವರ್ಷ) ಹೆಚ್ಚು. ಈ ಯೋಜನೆಗಳ ಶಂಕುಸ್ಥಾಪನೆಗೆ ಹಾಕಿದ್ದ ಕಲ್ಲುಗಳೂ ಕಳೆದುಹೋಗಿದೆ. ನೆಹರೂ ಅವರ ಹೆಸರು ಹಾಕಿದ್ದ ಕಲ್ಲನ್ನು ಮರುಸ್ಥಾಪಿಸಲು ನಾವು ಕೆಲಸ ಮಾಡಿದ್ದೇವೆ' ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಇದೇವೇಳೆ, ಜಾತಿ,ಕುಟುಂಬ ಮತ್ತು ಓಲೈಕೆಯಆಧಾರದ ಮೇಲೆ ನಡೆಯುವ ಸರ್ಕಾರಗಳು ಉತ್ತರ ಪ್ರದೇಶಕ್ಕೆ ಎಂದಿಗೂ ಒಳಿತು ಮಾಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ, 'ಬಿಜೆಪಿ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಯನ್ನು ಉತ್ತಮಪಡಿಸಿದೆ. ಅದರ ಫಲವಾಗಿ ಅಜಂ ಖಾನ್, ಅತೀಕ್ ಅಹ್ಮದ್ ಮತ್ತು ಮುಖ್ತಾರ್ ಅನ್ಸಾರಿ 15 ವರ್ಷಗಳ ಬಳಿಕ ಒಂದೇ ಸಮಯದಲ್ಲಿ ಜೈಲು ಪಾಲಾಗಿದ್ದಾರೆ' ಎಂದು ತಿಳಿಸಿದ್ದಾರೆ.

ರಾಜಕೀಯದ ಅಪರಾಧೀಕರಣಮತ್ತುಆಡಳಿತದಲ್ಲಿ ರಾಜಕೀಯದ ಹಸ್ತಕ್ಷೇಪವನ್ನು ಬಿಜೆಪಿಯು ಕೊನೆಗಾಣಿಸಿದೆ ಎಂದು ಒತ್ತಿ ಹೇಳಿರುವ ಅಮಿತ್ ಶಾ, 'ಹಲವು ವಿಚಾರಗಳನ್ನು ಸರಿಯಾಗಿ ನಿರ್ವಹಿಸಿದ ಪರಿಣಾಮವಾಗಿ ಇಂದು, ಅಧಿಕಾರಿಗಳು ಸಂವಿಧಾನ, ಕಾನೂನು ಮತ್ತು ನಿಯಮಗಳ ಅನುಸಾರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಕೇಂದ್ರ ಸರ್ಕಾರ ನೀಡಿರುವ ಆರ್ಥಿಕ ನೆರವಿನಿಂದಾಗಿಉತ್ತರ ಪ್ರದೇಶವು ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿಅಭಿವೃದ್ಧಿ ಸಾಧಿಸಿರುವುದು ಸ್ಪಷ್ಟವಾಗಿದೆ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ಎದುರಾಳಿಯಾಗಿರುವಸಮಾಜವಾದಿ ಪಕ್ಷವನ್ನು ಗುರಿಯಾಗಿಸಿಯೂ ಕಿಡಿಕಾರಿರುವ ಶಾ,'ಅಖಿಲೇಶ್ ಯಾದವ್ ಅವರು ಸೈಫೈ ಮತ್ತು ಲಖನೌ ನಗರಗಳಿಗೆ ಮಾತ್ರವೇ 24 ಗಂಟೆ ವಿದ್ಯುತ್ ನೀಡುತ್ತಿದ್ದರು. ಆದರೆ, ಯೋಗಿ ಸರ್ಕಾರವು ಪ್ರತಿಯೊಂದು ಗ್ರಾಮ ಮತ್ತು ನಗರಕ್ಕೂ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಪೂರೈಸಿದೆ' ಎಂದಿದ್ದಾರೆ. ಆ ಮೂಲಕಮೂಲಸೌಕರ್ಯಗಳ ಕೊರತೆಯಿರುವ ರಾಜ್ಯವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಎರಡು ಹಂತದ (ಫೆಬ್ರುವರಿ 10 ಮತ್ತು 14ರಂದು) ಮತದಾನ ಈಗಾಗಲೇ ಮುಗಿದಿದೆ. ಇಂದು (ಫೆಬ್ರುವರಿ 20) ಮೂರನೇ ಹಂತದ ಮತದಾನ ನಡೆಯುತ್ತಿದೆ. ಫೆಬ್ರುವರಿ 23, 27, ಮಾರ್ಚ್‌ 3 ಮತ್ತು 7ರಂದು ಉಳಿದ ಹಂತಗಳ ಚುನಾವಣೆ ನಡೆಯಲಿದೆ. ಮಾರ್ಚ್‌ 10 ರಂದು ಫಲಿತಾಂಶ ಪ್ರಕಟವಾಗಲಿದೆ.

2017ರ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಎಸ್‌ಪಿ 47, ಬಿಎಸ್‌ಪಿ 19 ಕ್ಷೇತ್ರಗಳಲ್ಲಿ ಜಯ ಕಂಡರೆ, ಕಾಂಗ್ರೆಸ್ ಕೇವಲ 7 ಕಡೆ ಖಾತೆ ತೆರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT