ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಕಾನೂನು: ಸಂಸದೀಯ ಸಮಿತಿ ಶಿಫಾರಸು

Last Updated 21 ಡಿಸೆಂಬರ್ 2020, 14:23 IST
ಅಕ್ಷರ ಗಾತ್ರ

ನವದೆಹಲಿ: 1918ಕ್ಕಿಂತಲೂ ಹಿಂದೆ ರಚಿಸಲ್ಪಟ್ಟ ಸಾಂಕ್ರಮಿಕ ರೋಗಗಳ ಕಾಯ್ದೆಯ ಪರಿಷ್ಕರಣೆ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಮನ್ವಯತೆಗೆ ರಾಷ್ಟ್ರೀಯ ಯೋಜನೆ, ಪಿಡುಗಿನ ಅವಧಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ದರ ನಿಯಂತ್ರಣಕ್ಕೆ ಕಾನೂನು ಹೀಗೆ ಹಲವು ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಸಂಸದೀಯ ಸಮಿತಿಯೊಂದು ನೀಡಿದೆ.

ಕಾಂಗ್ರೆಸ್‌ನ ಹಿರಿಯ ಸಂಸದರಾದ ಆನಂದ್‌ ಶರ್ಮಾ ಅವರ ನೇತೃತ್ವದ ಗೃಹ ಇಲಾಖೆಗೆ ಸಂಬಂಧಿಸಿದ ಈ ಸಮಿತಿಯು,ರಾಷ್ಟ್ರದಲ್ಲಿ ಕೋವಿಡ್‌–19 ನಿರ್ವಹಣೆಯ ಪ್ರಗತಿಪರಿಶೀಲನೆ ನಡೆಸಿತು. ‘ಏಕಾಏಕಿ ಲಾಕ್‌ಡೌನ್‌ ಹೇರಿಕೆಯಿಂದ ಹಿಂದೆಂದೂ ಕಂಡಿಲ್ಲದ ಅಡೆತಡೆ ಉಂಟಾಯಿತು. ಆದರೆ, ಮೊದಲನೇ ತ್ರೈಮಾಸಿಕಕ್ಕೆ ಹೋಲಿಸಿದರೆ, ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿಯ ಚೇತರಿಕೆ ಲಕ್ಷಣಗಳು ಗೋಚರಿಸಿವೆ’ ಎಂದು‘ಕೋವಿಡ್‌–19 ಪಿಡುಗು ನಿರ್ವಹಣೆ ಹಾಗೂ ರಾಜ್ಯ ಸರ್ಕಾರಗಳೊಡನೆ ಸಮನ್ವಯ’ ಹೆಸರಿನ ವರದಿಯಲ್ಲಿ ಸಮಿತಿಯು ಉಲ್ಲೇಖಿಸಿದೆ.

ಕೋವಿಡ್‌ ಆರಂಭಿಕ ಹಂತವಾದ ಮಾರ್ಚ್‌ನಲ್ಲಿ ಸರ್ಕಾರ ಅನುಸರಿಸಿದ ಕೋವಿಡ್‌–19 ಪರೀಕ್ಷಾ ವಿಧಾನವನ್ನು ಸಮಿತಿಯು ಪ್ರಶ್ನಿಸಿತು. ‘ವಿದೇಶದಿಂದ ಆಗಮಿಸಿದ ಪ್ರಯಾಣಿಕರ ದೇಹದ ತಾಪಮಾನವನ್ನಷ್ಟೇ ಪರೀಕ್ಷಿಸಲಾಗಿತ್ತು. ಅವರಿಗೆ ಕೋವಿಡ್‌–19 ಪರೀಕ್ಷೆಗಳನ್ನು ನಡೆಸಿಲ್ಲ. ಆ ಸಂದರ್ಭದಲ್ಲಿ ಲಕ್ಷಣರಹಿತವಾಗಿದ್ದ ಕೋವಿಡ್‌–19 ಸೋಂಕಿತರನ್ನು ಹಾಗೂ ದೇಹದ ತಾಪಮಾನ ಇಳಿಸಲು ಮಾತ್ರೆಗಳನ್ನು ತೆಗೆದುಕೊಂಡಿದ್ದವರ ಪತ್ತೆ ಸಾಧ್ಯವಾಗಿಲ್ಲ. ವಾಸ್ತವವಾಗಿ ಅವರೇ ಕೋವಿಡ್‌–19 ಸೋಂಕು ವ್ಯಾಪಿಸಲು ಮೂಲವಾಗಿದ್ದರು’ ಎಂದು ಸಮಿತಿಯು ಅಭಿಪ್ರಾಯಪಟ್ಟಿದೆ.

‘ವಲಸೆ ಕಾರ್ಮಿಕರ ಬಗ್ಗೆ ನಿಖರ ದತ್ತಾಂಶವನ್ನು ಹೊಂದುವ ಅವಶ್ಯಕತೆ ಇದೆ. ಭವಿಷ್ಯದಲ್ಲಿ ಇಂಥ ಪಿಡುಗು ಮತ್ತೆ ಕಾಣಿಸಿಕೊಂಡಲ್ಲಿ, ತಕ್ಷಣದಲ್ಲೇ ಕಾರ್ಯಪ್ರವೃತ್ತರಾಗಲು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯತೆಗೆ ರಾಷ್ಟ್ರೀಯ ಯೋಜನೆಯ ಅಗತ್ಯವಿದೆ. ಕೋವಿಡ್‌ ಸಂದರ್ಭದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಬೆಡ್‌ಗಳನ್ನು ರೋಗಿಗಳಿಗೆ ಮಾರಾಟ ಮಾಡುತ್ತಿದ್ದ ವರದಿಗಳು ಪ್ರಕಟವಾಗಿದೆ. ಹೀಗಾಗಿ ಪಿಡುಗಿನ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ನಿಯಂತ್ರಣಕ್ಕೆ ಸಮಗ್ರ ಸಾರ್ವಜನಿಕ ಆರೋಗ್ಯ ಕಾಯ್ದೆಯ ಅಗತ್ಯವಿದೆ. ಕೋವಿಡ್‌–19ನಂಥ ಪಿಡುಗಿನ ವೇಳೆ ಎಲ್ಲರಿಗೂ ಉತ್ತಮ ಗುಣಮಟ್ಟದ ಹಾಗೂ ಕಡಿಮೆ ಬೆಲೆಯಲ್ಲಿ ಔಷಧಗಳು ಲಭ್ಯವಾಗುವಂತೆ ಸರ್ಕಾರ ನೋಡಿಕೊಳ್ಳಬೇಕು’ ಎಂದು ಸಮಿತಿಯು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT