ಎಚ್1ಬಿ ವೀಸಾ ಉಳ್ಳವರ ಪರ ಒಲವು ಆರೋಪ: ಫೇಸ್ಬುಕ್ ವಿರುದ್ಧ ಅಮೆರಿಕ ಮೊಕದ್ದಮೆ

ವಾಷಿಂಗ್ಟನ್: ಸಾಮಾಜಿಕ ಮಾಧ್ಯಮ ಕ್ಷೇತ್ರದ ದೈತ್ಯಸಂಸ್ಥೆ ಫೇಸ್ಬುಕ್ ಅಮೆರಿಕ ಮೂಲದ ಉದ್ಯೋಗಿಗಳ ವಿರುದ್ಧ ಇದ್ದು, ಎಚ್–1ಬಿ ವೀಸಾ ಹೊಂದಿರುವವರ ಪರ ಒಲವು ಹೊಂದಿದೆ ಎಂದು ಆರೋಪಿಸಿರುವ ಅಮೆರಿಕ ಸರ್ಕಾರ, ಫೇಸ್ಬುಕ್ ವಿರುದ್ಧ ಮೊಕದ್ದಮೆ ಹೂಡಿದೆ.
‘ಸಂಸ್ಥೆಯು ಉದ್ದೇಶಪೂರ್ವಕವಾಗಿ ಕಾನೂನು ಉಲ್ಲಂಘನೆ ಮಾಡುವ ಮೂಲಕ ಉದ್ಯೋಗಿಗಳಲ್ಲಿ ತಾರತಮ್ಯ ಮಾಡುತ್ತಿದೆ’ ಎಂದು ಸರ್ಕಾರ ದೂರಿದೆ.
‘ಸಂಸ್ಥೆಯಲ್ಲಿ 2,600ಕ್ಕೂ ಅಧಿಕ ಹುದ್ದೆಗಳಿಗೆ ನೇಮಕ ನಡೆಯಲಿದೆ. ಅಗತ್ಯ ಶೈಕ್ಷಣಿಕ ಅರ್ಹತೆ ಹೊಂದಿರುವ ಅಮೆರಿಕದ ಅಭ್ಯರ್ಥಿಗಳನ್ನು ಈ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಬೇಕು ಎಂಬ ಬೇಡಿಕೆಯನ್ನು ಫೇಸ್ಬುಕ್ ತಿರಸ್ಕರಿಸಿದೆ. ಎಚ್–1ಬಿ ವೀಸಾ ಹೊಂದಿರುವ ಉದ್ಯೋಗಿಗಳಿಗೆ ಈ ಹುದ್ದೆಗಳನ್ನು ಕಾಯ್ದಿರಿಸಿದೆ’ ಎಂದು ನ್ಯಾಯಾಂಗ ಇಲಾಖೆ ತನ್ನ ಅರ್ಜಿಯಲ್ಲಿ ದೂರಿದೆ.
‘ನ್ಯಾಯಾಂಗ ಇಲಾಖೆ ಪ್ರಸ್ತಾಪಿಸಿರುವ ವಿಷಯಗಳ ಕುರಿತು ಪರಿಶೀಲನೆ ನಡೆದಿದ್ದು, ಈ ಸಂಬಂಧ ಇಲಾಖೆಗೆ ಅಗತ್ಯ ಸಹಕಾರ ನೀಡಲಾಗುತ್ತಿದೆ’ ಎಂದು ಫೇಸ್ಬುಕ್ ಪ್ರಕಟಣೆಯಲ್ಲಿ ತಿಳಿಸಿದೆ.
‘ಸಂಸ್ಥೆ ವಿರುದ್ಧ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ‘ ಎಂದಿರುವ ಫೇಸ್ಬುಕ್, ‘ಈ ವಿಷಯ ನ್ಯಾಯಾಲಯದಲ್ಲಿ ಇರುವ ಕಾರಣ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದೂ ಸ್ಪಷ್ಟಪಡಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.