ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರೊ ಇಂಡಿಯಾದಲ್ಲಿ ಅಮೆರಿಕದ ಕಂಪನಿಗಳು ಭಾಗಿ: ರಕ್ಷಣಾ ಸಹಕಾರ ವೃದ್ಧಿಗೆ ನೆರವು

Last Updated 29 ಜನವರಿ 2021, 19:21 IST
ಅಕ್ಷರ ಗಾತ್ರ

ಬೆಂಗಳೂರು: ವೈಮಾನಿಕ ಪ್ರದರ್ಶನ ‘ಏರೊ ಇಂಡಿಯಾ 2021’ರಲ್ಲಿ ಅಮೆರಿಕವು ಭಾಗಿಯಾಗುತ್ತಿದೆ. ಇದು ಭಾರತ-ಅಮೆರಿಕದ ನಡುವಣ ರಕ್ಷಣಾ ಕಾರ್ಯತಂತ್ರ ಮತ್ತು ರಕ್ಷಣಾ ಸಹಕಾರ ಮತ್ತಷ್ಟು ಗಟ್ಟಿಯಾಗುತ್ತಿರುವುದರ ಸಂಕೇತ ಎಂದು ಅಮೆರಿಕವು ಹೇಳಿದೆ.

‘ಏರೊ ಇಂಡಿಯಾದಲ್ಲಿ ಅಮೆರಿಕದ ನಿಯೋಗವು ಭಾಗವಹಿಸಲಿದೆ. ಈ ನಿಯೋಗದ ಮುಂದಾಳತ್ವ ವಹಿಸಲು ನಾನು ಉತ್ಸುಕನಾಗಿದ್ದೇನೆ. ಈ ಪ್ರದರ್ಶನವು ಎರಡೂ ದೇಶಗಳ ನಡುವಣ ದ್ವಿಪಕ್ಷೀಯ ರಕ್ಷಣಾ ಸಹಕಾರ ಸಂಬಂಧದ ಮುಂದುವರಿಕೆಯ ಪ್ರತೀಕವಾಗಿದೆ. ಹಿಂದೂ ಮಹಾಸಾಗರ–ಪೆಸಿಫಿಕ್ ಪ್ರದೇಶವನ್ನು ಮುಕ್ತ ಮತ್ತು ಸ್ವತಂತ್ರವಾಗಿರಿಸುವ ದಿಸೆಯಲ್ಲಿ ಇದು ಮಹತ್ವ ಪಡೆದಿದೆ’ ಎಂದು ಅಮೆರಿಕದ ನಿಯೋಗದ ನೇತೃತ್ವ ವಹಿಸಿರುವ ರಾಜತಾಂತ್ರಿಕ ಅಧಿಕಾರಿ ಡಾನ್ ಹೆಪ್ಲನ್ ಹೇಳಿದ್ದಾರೆ.

ಈ ಪ್ರದರ್ಶನದಲ್ಲಿ ಅಮೆರಿಕವು ಭಾಗವಹಿಸುತ್ತಿರುವುದರಿಂದ ಅಮೆರಿಕದ ಉದ್ಯಮಗಳು ಮತ್ತು ರಕ್ಷಣಾ ಸೇವೆಗಳಿಗೆ ಭಾರತದ ಮಾರುಕಟ್ಟೆ ತೆರೆದುಕೊಳ್ಳಲಿದೆ. ಅಮೆರಿಕದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಇದರಲ್ಲಿ ಭಾಗಿಯಾಗುತ್ತಿವೆ. ಭಾರತ ಮತ್ತು ಅಮೆರಿಕವು ರಕ್ಷಣಾ ವಲಯದಲ್ಲಿ ಮತ್ತಷ್ಟು ದ್ವಿಪಕ್ಷೀಯ ಒಪ್ಪಂದಗಳನ್ನು ಮಾಡಿಕೊಳ್ಳಲು ಇದು ಅವಕಾಶ ಮಾಡಿಕೊಡಲಿದೆ ಎಂದು ಹೆಪ್ಲನ್ ವಿವರಿಸಿದ್ದಾರೆ.

ಸಂಗೀತ ಕಚೇರಿ

ಏರೊ ಇಂಡಿಯಾ 2021 ಹೈಬ್ರಿಡ್ ಪ್ರದರ್ಶನವಾಗಿದೆ. ಇದಕ್ಕೆ ಪೂರಕವಾಗಿ ಅಮೆರಿಕವು ಹವಾಯಿ ದ್ವೀಪದಲ್ಲಿ ಇರುವ ವಾಯುನೆಲೆಯಲ್ಲಿ ಭಾರತೀಯ ಸಂಗೀತ ಕಚೇರಿಯನ್ನು ಏರ್ಪಡಿಸಿದೆ. ಅಮೆರಿಕ ವಾಯುಪಡೆಯ ಸಂಗೀತ ತಂಡವು ಈ ಕಚೇರಿಯನ್ನು ಆಯೋಜಿಸುತ್ತಿದೆ. ಘಟಂ ಕಲಾವಿದರಾದ ಗಿರಿಧರ ಉಡುಪ ಅವರು ಈ ಕಚೇರಿಯಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಅಮೆರಿಕ ದೂತಾವಾಸ ಕಚೇರಿಯ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಪುಟಗಳಲ್ಲಿ ಈ ಕಾರ್ಯಕ್ರಮವು ಪ್ರಸಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT