ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖಿಂಪುರ ಖೇರಿ: ಬಿಜೆಪಿಗೆ ರೈತರ ಆಕ್ರೋಶದ ಬಿಸಿ

ರೈತರ ಮೇಲೆ ವಾಹನ ಹರಿಸಿ ಹತ್ಯೆ ಪ್ರಕರಣದ ಗಾಯ ಇನ್ನೂ ಹಸಿ
Last Updated 18 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಲಖಿಂಪುರ ಖೇರಿ: ‘ಈ ಸರ್ಕಾರ (ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರ ಸರ್ಕಾರ) ರೈತರ ಬಗ್ಗೆ ಯೋಚನೆಯನ್ನೇ ಮಾಡುತ್ತಿಲ್ಲ’ ಎಂಬುದು 70 ವರ್ಷ ವಯಸ್ಸಿನ ರೈತ ದಲ್ಬೀರ್‌ ಸಿಂಗ್‌ ಅವರ ಅಭಿಪ್ರಾಯ. ಅವರು ಲಖಿಂಪುರ ಖೇರಿ ಜಿಲ್ಲೆಯ ಬನಿಕಾ ಗ್ರಾಮದ ನಿವಾಸಿ. ರೈತರ ಮೇಲೆ ವಾಹನ ಹರಿಸಿ ನಾಲ್ವರು ರೈತರು ಹತ್ಯೆಯಾದ ಸಂದರ್ಭದಲ್ಲಿ ಈ ಜಿಲ್ಲೆಯು ಸುದ್ದಿಯ ಕೇಂದ್ರವಾಗಿತ್ತು. ಕೇಂದ್ರದ ಸಚಿವ ಅಜಯ್‌ ಮಿಶ್ರಾ ಅವರ ಮಗ ಆಶಿಶ್‌ ಮಿಶ್ರಾ ಅವರು ಈ ವಾಹನ ಚಲಾಯಿಸಿದ್ದರು ಎಂದು ಆರೋಪಿಸಲಾಗಿದೆ.

ದಲ್ಬೀರ್‌ ಅವರು 50 ವರ್ಷಗಳಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ರೈತರು ಇಷ್ಟೊಂದು ಆಕ್ರೋಶಗೊಂಡಿದ್ದನ್ನು ಮತ್ತು ಅಸಹಾಯಕವಾಗಿದ್ದನ್ನು ಕಂಡೇ ಇಲ್ಲ ಎಂದು ಅವರು ಹೇಳಿದ್ದಾರೆ. ‘ನಮಗೆ ಸಾಲ ಮನ್ನಾ ಬೇಡ, ನಮಗೆ ಕೊಡುಗೆಗಳೂ ಬೇಡ. ನಮ್ಮ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದರೆ ಸಾಕು. ನಮ್ಮ ಸ್ಥಿತಿಯು ಉತ್ತಮಗೊಳ್ಳುತ್ತದೆ’ ಎಂದು ದಲ್ಬೀರ್‌ ಹೇಳಿದ್ದಾರೆ.

ತಮ್ಮ ತಂದೆಯ ಜತೆಗೆ 1960ರ ದಶಕದಲ್ಲಿ ಇಲ್ಲಿಗೆ ಬಂದ ದಲ್ಬೀರ್‌ಗೆ ಆಗಿನ ಸರ್ಕಾರ ಜಮೀನು ನೀಡಿತ್ತು.

ನಾಲ್ವರು ರೈತರ ಹತ್ಯೆಯಾಗಿ ನಾಲ್ಕು ತಿಂಗಳು ಕಳೆದಿವೆ. ಆದರೆ, ರೈತರ ಮನದಲ್ಲಿ ಈ ನೆನಪು ಇನ್ನೂ ಹಸಿಯಾಗಿಯೇ ಇದೆ. ಈ ಘಟನೆಯಿಂದ ಆಗಿರುವ ಹಾನಿ ತಗ್ಗಿಸಲು ಬಿಜೆಪಿ ಭಾರಿ ಪ್ರಯತ್ನ ನಡೆಸಿದೆ. ಹಾಗಿದ್ದರೂ ರೈತರ ಹತ್ಯೆಯು ಚುನಾವಣೆಯಲ್ಲಿ ಬಿಜೆಪಿಗೆ ಪ್ರತಿಕೂಲವಾಗಿ ಪರಿಣಮಿಸ
ಬಹುದು. ಈ ಪ್ರದೇಶದಲ್ಲಿ ಇದೇ 23ರಂದು ಮತದಾನ ನಡೆಯಲಿದೆ.

ರೈತರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಆಶಿಶ್‌ ಮಿಶ್ರಾ ಅವರಿಗೆ ಜಾಮೀನು ಸಿಕ್ಕಿದೆ. ರೈತರ ಆಕ್ರೋಶ ತೀವ್ರವಾಗಿರುವ ಸಂದರ್ಭದಲ್ಲಿಯೇ ಅವರು ಜಾಮೀನು ಪಡೆದಿರುವುದು ಕೂಡ ಬಿಜೆಪಿಗೆ ಪ್ರತಿಕೂಲ ಆಗಬಹುದು. ಈ ಬಗ್ಗೆ ದಲ್ಬೀರ್‌ ಅವರನ್ನು ಪ್ರಶ್ನಿಸಿದಾಗ ‘ಆಶಿಶ್‌ ಮಿಶ್ರಾ ಅವರು ಕೇಂದ್ರ ಸಚಿವರ ಮಗ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.

2017ರ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಕುರ್ಮಿ, ಬ್ರಾಹ್ಮಣ ಮತ್ತು ಸಿಖ್‌ ಸಮುದಾಯದ ಬೆಂಬಲ ಬಿಜೆಪಿಗೆ ಲಭಿಸಿದ್ದು ಈ ಗೆಲುವಿಗೆ ಕಾರಣ. ಮುಸ್ಲಿಮರು ಮತ್ತು ಪರಿಶಿಷ್ಟ ಜಾತಿಯ ಜನರು ಕೆಲವು ಕ್ಷೇತ್ರಗಳಲ್ಲಿ ನಿರ್ಣಾಯಕ. ಈ ಬಾರಿ ಪರಿಸ್ಥಿತಿ ಬದಲಾಗಿದೆ. ರೈತರು ನಡೆಸಿದ ಒಂದು ವರ್ಷದ ಪ್ರತಿಭಟನೆ, ರೈತರ ಹತ್ಯೆ, ಕಬ್ಬು ಬಾಕಿ ಪಾವತಿ ಆಗದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

‘ರೈತರಿಗೆ ಬಿಜೆಪಿಯ ಮೇಲೆ ಸಿಟ್ಟು ಇದೆ. ರೈತರ ಹತ್ಯೆ ಪ್ರಕರಣದಲ್ಲಿ ಮಗ ಮುಖ್ಯ ಆರೋಪಿ ಆಗಿದ್ದರೂ ಸಚಿವ ಅಜಯ್‌ ಮಿಶ್ರಾ ಅವರನ್ನು ಪ್ರಧಾನಿ ವಜಾ ಮಾಡಲಿಲ್ಲ. ಅವರು ಈಗಲೂ ಸಚಿವರಾಗಿಯೇ ಇದ್ದಾರೆ. ಅವರು ಸಚಿವರಾಗಿ ಮುಂದುವರಿಯುತ್ತಿರುವುದು ನಮಗೆ ಅವಮಾನ’ ಎಂದು ದಿಲ್‌ಬಾಗ್ ಸಿಂಗ್‌ ಹೇಳುತ್ತಾರೆ. ಅವರು ಭಾರತೀಯ ಕಿಸಾನ್‌ ಯೂನಿಯನ್‌ನ ಸ್ಥಳೀಯ ಮುಖಂಡ.

ರೈತ ಮುನ್ನಾಲಾಲ್‌ ಕೂಡ ಇದೇ ಭಾವನೆ ವ್ಯಕ್ತಪಡಿಸಿದರು. ‘ಜಾತಿ ಲೆಕ್ಕಾಚಾರವವನ್ನು ಮರೆತುಬಿಡಿ. ಈ ಬಾರಿ, ರೈತರ ಅಸ್ತಿತ್ವವೇ ಮುಖ್ಯ ವಿಚಾರ’ ಎಂದು ಮುನ್ನಾಲಾಲ್‌ ಹೇಳಿದರು. ಅವರು ಕುರ್ಮಿ ಸಮುದಾಯದವರು.

ಜಾತಿ ಲೆಕ್ಕಾಚಾರವೂ ಇದೆ

ಜಾತಿ ಮತ್ತು‍ ರೈತರ ಬೆಂಬಲವೇ ಈ ಬಾರಿಯ ಫಲಿತಾಂಶವನ್ನು ನಿರ್ಧರಿಸಲಿದೆ. ಮತದಾನದ ದಿನಾಂಕ ಹತ್ತಿರವಾಗುತ್ತಿದ್ದಂತೆಯೇ ಎಲ್ಲವನ್ನೂ ಬದಿಗೆ ಸರಿಸಿ ಜಾತಿಯೇ ಮುನ್ನೆಲೆಗೆ ಬರುತ್ತದೆ. ನಿಜವಾದ ಸಮಸ್ಯೆಗಳು ಚರ್ಚೆಯೇ ಆಗುವುದಿಲ್ಲ ಎಂಬುದು ತಿಕುನಿಯಾದಲ್ಲಿ ಅಂಗಡಿ ಇಟ್ಟಿರುವ ಸತೀಶ್‌ ಕುಮಾರ್‌ ಮಾತು.

2017ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಸತೀಶ್‌ ಅವರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈ ಬಾರಿ ರೈತರ ಆಕ್ರೋಶವು ಬಿಜೆಪಿಯ ಗೆಲುವಿನ ಸಾಧ್ಯತೆಯನ್ನು ಕಡಿಮೆಯಾಗಿಸಿದೆ ಎಂಬುದು ಸತೀಶ್‌ ಅವರ ಅಭಿಪ್ರಾಯ.

ಮುಸ್ಲಿಮರು ಸಮಾಜವಾದಿ ಪಕ್ಷದ ಪರವಾಗಿ ಧ್ರುವೀಕರಣಗೊಂಡಿದ್ದಾರೆ. ‘ಮುಸ್ಲಿಮರು ಸಮಾಜವಾದಿ ಪಕ್ಷದ ಜತೆಗೆ ಗುರುತಿಸಿಕೊಂಡಿದ್ದಾರೆ’ ಎಂದು ರಜಬ್‌ ಖಾನ್‌ ಹೇಳಿದ್ದಾರೆ.

ಅಜಯ್‌ ಮಿಶ್ರಾ ಅವರನ್ನು ಕೈಬಿಟ್ಟಿಲ್ಲ ಎಂಬ ಕಾರಣಕ್ಕೆ ಬ್ರಾಹ್ಮಣ ಸಮುದಾಯದ ಮತಗಳು ಬಿಜೆಪಿಯತ್ತ ವಾಲಬಹುದು. ಒಂದೆರಡು ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯದ ಮತಗಳು ಗಣನೀಯ ಸಂಖ್ಯೆಯಲ್ಲಿ ಇವೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಸಚಿವರಾಗಿರುವ ಜಿತಿನ್‌ ಪ್ರಸಾದ ಅವರು ಬ್ರಾಹ್ಮಣ ಸಮುದಾಯದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ತಮ್ಮ ಪ್ರತಿಷ್ಠೆಯ ವಿಚಾರ ಇದು ಎಂದು ಬ್ರಾಹ್ಮಣರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಜಾತಿ ಲೆಕ್ಕಾಚಾರ ಏನೇ ಇದ್ದರೂ ತಮ್ಮ ಧ್ವನಿ ಗಟ್ಟಿಯಾಗಿ ಕೇಳಿಸಬೇಕು ಎಂಬ ದೃಢ ನಿರ್ಧಾರದಲ್ಲಿ ರೈತರು ಇದ್ದಾರೆ. ಹಾಗಾಗಿ, 2017ರ ಫಲಿತಾಂಶದ ಪುನರಾವರ್ತನೆ ಬಿಜೆಪಿಗೆ ಸುಲಭವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT