ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖಿಂಪುರ್‌ ಖೇರಿ ರೈತರ ಹತ್ಯೆ ಪ್ರಕರಣ; ಮಿಶ್ರಾ ಸಚಿವ ಸ್ಥಾನಕ್ಕೆ ಜಾತಿಯ ರಕ್ಷಣೆ

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಬ್ರಾಹ್ಮಣ ಸಮುದಾಯವನ್ನು ಓಲೈಸಲು ಬಿಜೆಪಿ ತಂತ್ರ
Last Updated 16 ಡಿಸೆಂಬರ್ 2021, 21:36 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಲಖಿಂಪುರ್‌ ಖೇರಿಯಲ್ಲಿ ನಡೆದ ರೈತರ ಹತ್ಯೆ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಮಗ ಸಿಲುಕಿರುವ ಕಾರಣ ವಿಪಕ್ಷಗಳು ಅಜಯ್‌ ಅವರ ರಾಜೀನಾಮೆ ಪಡೆಯುವಂತೆ ಸರ್ಕಾರವನ್ನು ಆಗ್ರಹಿಸುತ್ತಿವೆ. ಆದರೂ ಅಜಯ್ ಮಿಶ್ರಾ ಅವರು ಸಚಿವರಾಗಿಯೇ ಮುಂದುವರಿದಿದ್ದಾರೆ. ಅವರ ಜಾತಿಯೇ ಅವರ ಸ್ಥಾನವನ್ನು ಉಳಿಸಿದೆ.

ಅದಲ್ಲದೇ, ಈ ವರ್ಷ ಜುಲೈನಲ್ಲಿ ಎರಡನೇ ಬಾರಿ ಕೇಂದ್ರ ಸಂಪುಟ ವಿಸ್ತರಣೆ ನಡೆದ ವೇಳೆ ಅಜಯ್‌ ಮಿಶ್ರಾ ಅವರು ಸಚಿವ ಸ್ಥಾನ ಪಡೆದರು. ಅವರು ‘ಬ್ರಾಹ್ಮಣ’ ಜಾತಿಯವರು ಎಂಬುದೇ ಸಚಿವ ಸ್ಥಾನಕ್ಕೆ ಅವರ ಆಯ್ಕೆಯ ಹಿಂದೆ ಕೆಲಸ ಮಾಡಿದೆ.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಹತ್ತಿರ ಆಗುತ್ತಿದೆ.ಉತ್ತರ ಪ್ರದೇಶದ ಚುನಾವಣೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯ ನಿರ್ಣಾಯಕ. ಬಿಜೆಪಿಯ ಬಗ್ಗೆ ಉತ್ತರ ಪ್ರದೇಶದ ಬ್ರಾಹ್ಮಣರಲ್ಲಿ ಇದ್ದ ಅಸಮಾಧಾನವನ್ನು ತಣ್ಣಗಾಗಿಸುವ ಸಲುವಾಗಿಯೇ ‘ಬ್ರಾಹ್ಮಣ’ ಸಮುದಾಯದವರಾದ ಮಿಶ್ರಾ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ನೀಡಲಾಯಿತು.

ಲಖಿಂಪುರ ಖೇರಿಯಲ್ಲಿ ಮಿಶ್ರಾ ಅವರನ್ನು ‘ಮಹಾರಾಜ’ ಎಂದು ಕರೆಯಲಾಗುತ್ತದೆ. ಶಕ್ತಿಶಾಲಿ ವ್ಯಕ್ತಿ ಎಂದೂ ಪರಿಗಣಿಸಲಾಗುತ್ತದೆ. ಅವರ ರಾಜೀನಾಮೆ ಪಡೆಯುವುದರಿಂದ ಬ್ರಾಹ್ಮಣ ಸಮುದಾಯದಲ್ಲಿ ಅಸಮಾಧಾನ ಉಂಟಾಗುತ್ತದೆ. ಬಿಜೆಪಿಯ ಪ್ರಮುಖ ಮತ ಬ್ಯಾಂಕ್‌ ಆಗಿರುವ ಬ್ರಾಹ್ಮಣರನ್ನು ಎದುರು ಹಾಕಿಕೊಳ್ಳುವುದರಿಂದ ಬಿಜೆಪಿಗೆ ನಷ್ಟ ಉಂಟಾಗುತ್ತದೆ.

‘ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿರುವುದರಿಂದಬ್ರಾಹ್ಮಣರನ್ನು ಕೆರಳಿಸುವಂತಹ ಯಾವ ಕೆಲಸವನ್ನೂ ನಮಗೆ ಮಾಡಲಾಗುವುದಿಲ್ಲ. ಅದರಿಂದ ನಮಗೆ ನಷ್ಟವಾಗಬಹುದು.ಮಿಶ್ರಾ ವಿರುದ್ಧ ವಿಪಕ್ಷಗಳು ನಡೆಸುತ್ತಿರುವ ದಾಳಿ ಬಿಜೆಪಿಗೆ ವರದಾನ ಆಗಲೂಬಹುದು. ನಾವು ವಿಪಕ್ಷಗಳನ್ನುಬ್ರಾಹ್ಮಣ ವಿರೋಧಿ ಎಂದು ಬಿಂಬಿಸಲು ಇದರಿಂದ ಅನುಕೂಲವಾಗುತ್ತದೆ ಎಂದು ಬಿಜೆಪಿಯ ಹಲವರು ಭಾವಿಸಿದ್ದಾರೆ’ಎಂದು ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಬ್ರಾಹ್ಮಣರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಹತಾಶೆಯನ್ನುಶಾಸಕರೂ ಸೇರಿ ಹಲವು ಬಿಜೆಪಿ ಮುಖಂಡರು ಹೊಂದಿದ್ದಾರೆ. ಇದರಿಂದಾಗಿ ತಮ್ಮ ಪಕ್ಷದೊಳಗಿನ ಬ್ರಾಹ್ಮಣ ಸದಸ್ಯರೇ ಪಕ್ಷದ ವಿರುದ್ಧ ತಿರುಗಿ ಬೀಳಬಹುದು ಎಂಬ ಭಯವೂ ಬಿಜೆಪಿಗೆ ಇದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಷ್ಟು ಜನ ಬ್ರಾಹ್ಮಣರ ಹತ್ಯೆಗಳು ರಾಜ್ಯದಲ್ಲಿ ನಡೆದಿವೆ ಮತ್ತು ಎಷ್ಟು ಪ್ರಕರಣಗಳಲ್ಲಿ ಪೊಲೀಸರು ಅಪರಾಧಿಗಳನ್ನು ಬಂಧಿಸಿದ್ದಾರೆ ಎಂಬ ಕುರಿತು ಲೆಕ್ಕ ನೀಡುವಂತೆ ಲಂಭುವ ವಿಧಾನಸಭೆ ಕ್ಷೇತ್ರದ ಶಾಸಕ ದೇವಮಣಿ ದ್ವಿವೇದಿ ಸರ್ಕಾರವನ್ನು ಆಗ್ರಹಿಸಿದ್ದರು.

ಉತ್ತರ ಪ್ರದೇಶದ ಮತದಾರರಲ್ಲಿ ಶೇ 10ರಷ್ಟು ಮತದಾರರು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. 12ಕ್ಕಿಂತಲೂ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಮತ್ತು 50ಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳಲ್ಲಿ ಅವರು ನಿರ್ಣಾಯಕ ಪಾತ್ರವಹಿಸುತ್ತಾರೆ.

ಕಾಂಗ್ರೆಸ್‌ನಿಂದ ಬಿಜೆಪಿಗೆಇತ್ತೀಚೆಗಷ್ಟೇ ಬಂದಿರುವ ಬ್ರಾಹ್ಮಣ ಸಮುದಾಯದಪ್ರಮುಖ ನಾಯಕ ಜಿತಿನ್‌ ಪ್ರಸಾದ ಅವರಿಗೆ, ವಿಧಾನಸಭೆ ಚುನಾವಣೆಯಲ್ಲಿಬ್ರಾಹ್ಮಣ ಸಮುದಾಯದ ಮತ ಸೆಳೆಯುವ ಉದ್ದೇಶದಿಂದ ಉತ್ತರ ಪ್ರದೇಶ ಸಚಿವ ಸಂಪುಟದಲ್ಲಿ ಸ್ಥಾನ ಕೊಡಲಾಗಿದೆ.

ಗೋವಾ: ಕಾಂಗ್ರೆಸ್‌ನ ಮೊದಲ ಪಟ್ಟಿ ಪ್ರಕಟ
ನವದೆಹಲಿ (ಪಿಟಿಐ): ಗೋವಾ ವಿಧಾನಸಭೆಗೆ ಕೆಲವೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್‌ ಪಕ್ಷವು ಎಂಟು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್‌ ಅವರಿಗೆ ಮಾರ್ಗೋವಾ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ.

ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದ ಕೇಂದ್ರ ಚುನಾವಣಾ ಸಮಿತಿಯು ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಗೋವಾ ವಿಧಾನಸಭೆ ಚುನಾವಣಾ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ. ಬೇರೆ ಯಾವ ಪಕ್ಷವೂ ಅಭ್ಯರ್ಥಿಗಳ ಪಟ್ಟಿಯನ್ನು ಈವರೆಗೆ ಪ್ರಕಟಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT