ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಚುನಾವಣೆ ನಾಲ್ಕನೇ ಹಂತ: ಎಲ್ಲ ಪಕ್ಷಗಳಿಗೂ ಸವಾಲು

ಅವಧ್‌ ಪ್ರದೇಶದಲ್ಲಿ ಮತದಾನ: ಹೆಚ್ಚು ಕ್ಷೇತ್ರ ಗೆಲ್ಲುವ ನಿರೀಕ್ಷೆಯಲ್ಲಿ ಎಸ್‌ಪಿ, ಬಿಎಸ್‌ಪಿ
Last Updated 22 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಅವಧ್‌ ಪ್ರದೇಶದ 59 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ಮತದಾನ ನಡೆಯಲಿದೆ. ಲಖಿಂಪುರ ಖೇರಿಯಲ್ಲಿ ಜೀಪು ಹರಿಸಿ ನಾಲ್ವರು ರೈತರ ಹತ್ಯೆಯ ಆರೋಪ ಹೊತ್ತಿರುವ ಆಶಿಶ್‌ ಮಿಶ್ರಾ ಅವರ ತಂದೆ, ಕೇಂದ್ರ ಸಚಿವ ಅಜಯ್‌ ಮಿಶ್ರಾ ಅವರ ಪ್ರಭಾವ ಎಷ್ಟಿದೆ ಎಂಬುದನ್ನು ಈ ಹಂತವು ಸ್ಪಷ್ಟಪಡಿಸಲಿದೆ. ಹತ್ಯೆ ಪ್ರಕರಣವು ರೈತರಲ್ಲಿ ಭಾರಿ ಆಕ್ರೋಶ ಉಂಟು ಮಾಡಿದೆ. ಕಾಂಗ್ರೆಸ್‌ಗೂ ಈ ಹಂತವು ಅಗ್ನಿಪರೀಕ್ಷೆಯಾಗಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುವ ರಾಯಬರೇಲಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಬುಧವಾರ ಮತದಾನ ಆಗಲಿದೆ.

ನಾಲ್ಕನೇ ಹಂತವು ಸಮಾಜವಾದಿ ಪಕ್ಷಕ್ಕೂ (ಎಸ್‌ಪಿ) ಮಹತ್ವದ್ದಾಗಿದೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿಗೆ ಭಾರಿ ಹಿನ್ನಡೆ ಆಗಿತ್ತು. ಈ ಪ್ರದೇಶದಲ್ಲಿ ಎಸ್‌ಪಿ ಗೆದ್ದ ಸ್ಥಾನಗಳ ಸಂಖ್ಯೆ ಆರು ಮಾತ್ರ.

ಬಿಜೆಪಿಯ ಮುಂದೆ ಈ ಬಾರಿ ಹಲವು ಸವಾಲುಗಳು ಇವೆ. ಪಿಲಿಭಿತ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ನಾಲ್ಕನೇ ಹಂತದಲ್ಲಿ ಮತದಾನ ಆಗಲಿದೆ. ಈ ಕ್ಷೇತ್ರದ ಬಿಜೆಪಿ ಸಂಸದ ವರುಣ್‌ ಗಾಂಧಿ ಅವರು ಬಿಜೆಪಿಯ ಮುಂದಿರುವ ಸವಾಲುಗಳನ್ನು ಇನ್ನಷ್ಟು ಸಂಕೀರ್ಣಗೊಳಿಸುವ ಕೆಲಸ ಮಾಡುತ್ತಿದ್ದಾರೆ. ವರುಣ್‌ ಅವರು ಪಕ್ಷದ ವಿರುದ್ಧ ಮತ್ತು ಪಕ್ಷದ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಮಾನ್ಯತೆ, ಕೇಂದ್ರ ಸಚಿವ ಅಜಯ್‌ ಮಿಶ್ರಾ ವಜಾ ವಿಚಾರದಲ್ಲಿ ವರುಣ್‌ ಅವರು ರೈತ ಸಂಘಟನೆಗಳ ಪರ ನಿಂತಿದ್ದಾರೆ.

ಬುಧವಾರ ಮತದಾನ ಆಗಲಿರುವ ಲಖಿಪುರ ಖೇರಿ, ಪಿಲಿಭಿತ್‌ ಮತ್ತು ಇತರ ಕೆಲವು ಜಿಲ್ಲೆಗಳಿಂದ ಸಿಕ್ಕ ಮಾಹಿತಿಯ ಪ್ರಕಾರ, ಎಂಎಸ್‌ಪಿಗೆ ಕಾನೂನು ಮಾನ್ಯತೆ ನೀಡದೇ ಇರುವುದು, ಅಜಯ್‌ ಮಿಶ್ರಾ ಅವರನ್ನು ವಜಾ ಮಾಡದಿರುವ ವಿಚಾರದಲ್ಲಿ ರೈತರಲ್ಲಿ ಭಾರಿ ಆಕ್ರೋಶ ಇದೆ. ಆಶಿಶ್‌ ಮಿಶ್ರಾ ಅವರು ಜಾಮೀನಿನಲ್ಲಿ ಹೊರಗೆ ಬಂದಿರುವುದು ರೈತರಲ್ಲಿರುವ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ.

ಲಖಿಂಪುರ ಖೇರಿಯಲ್ಲಿ ಬಿಜೆಪಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವುದು ಸಾಧ್ಯವಾಗದೇ ಇದ್ದರೆ ಅಜಯ್‌ ಮಿಶ್ರಾ ತಲೆದಂಡವಾಗಬಹುದು. ಹೆಚ್ಚು ಕ್ಷೇತ್ರಗಳನ್ನು ಗೆದ್ದರೆ ಬಿಜೆಪಿಯೊಳಗೆ ಅಜಯ್‌ ಮಿಶ್ರಾ ವರ್ಚಸ್ಸು ಇನ್ನಷ್ಟು ಹೆಚ್ಚಬಹುದು.

ಈ ಬಾರಿಯ ಚುನಾವಣೆಯಲ್ಲಿ ಮುಖ್ಯ ವಿಷಯವೇ ಆಗಿರುವ ಬೀಡಾಡಿ ಜಾನುವಾರು ಸಮಸ್ಯೆಯು ಬಿಜೆಪಿಗೆ ತೊಡಕಾಗಿ ಪರಿಣಮಿಸಬಹುದು. ವಿಶೇಷವಾಗಿ ಸೀತಾಪುರ ಮತ್ತು ಸುತ್ತಲಿನ ಕೆಲವು ಜಿಲ್ಲೆಗಳಲ್ಲಿ ಸಮಸ್ಯೆ ಆಗಬಹುದು ಎಂದು ರಾಜಕೀಯ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ಇಳಿಸುವ ಹುರುಪಿನಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಇದ್ದಾರೆ. ಅದು ಸಾಧ್ಯವಾಗಬೇಕಿದ್ದರೆ ಈ ಪ್ರದೇಶದಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಎಸ್‌ಪಿ ಗೆಲ್ಲಬೇಕು. ‘ಮುಂದಿನ ಸರ್ಕಾರವನ್ನು ನಾವು ರಚಿಸಬೇಕಿದ್ದರೆ ಈ ಭಾಗದಲ್ಲಿ ಗಣನೀಯ ಸಂಖ್ಯೆಯ ಕ್ಷೇತ್ರಗಳನ್ನು ಗೆಲ್ಲಬೇಕು’ ಎಂದು ಎಸ್‌ಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಈ ಭಾಗದಲ್ಲಿ 14 ಮೀಸಲು ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಗೆದ್ದದ್ದು ಒಂದು ಕ್ಷೇತ್ರದಲ್ಲಿ ಮಾತ್ರ. ಈ ಬಾರಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಮಾಯಾವತಿ ಅವರಲ್ಲಿ ಇದೆ.

ಸಾಧನೆ ಪುನರಾವರ್ತನೆ ಸಾಧ್ಯವೇ?

2017ರ ಚುನಾವಣೆಯಲ್ಲಿ ಅವಧ್ ಪ್ರಾಂತ್ಯದಲ್ಲಿ ಬಿಜೆಪಿ 51 ಕ್ಷೇತ್ರಗಳಲ್ಲಿ ಗೆದ್ದಿತ್ತು. ಇದೇ ಸಾಧನೆಯ ಪುನರಾವರ್ತನೆ ಸಾಧ್ಯವೇ ಇಲ್ಲ ಎಂದು ಬಿಜೆಪಿಯ ಮುಖಂಡರೇ ಹೇಳುತ್ತಿದ್ದಾರೆ. ಲಖಿಂಪುರ ಖೇರಿ ಘಟನೆಯು ಅವಧ್‌ ಭಾಗದಲ್ಲಿ ದೊಡ್ಡ ಏಟು ಕೊಡಬಹುದು ಎಂಬ ಆತಂಕ ಬಿಜೆಪಿಯಲ್ಲಿ ಇದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಜನಪ್ರಿಯತೆಯೂ ನಾಲ್ಕನೇ ಹಂತದ ಮತದಾನದಲ್ಲಿ ಪರೀಕ್ಷೆಗೆ ಒಳಪಡಲಿದೆ. ಲೋಕಸಭೆಯಲ್ಲಿ ಅವರು ಪ್ರತಿನಿಧಿಸುವ ಲಖನೌ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ಇದೇ ಹಂತದಲ್ಲಿ ಮತದಾನ ಆಗಲಿದೆ. ಕಳೆದ ಚುನಾವಣೆಯಲ್ಲಿ ಇಲ್ಲಿನ 9 ಕ್ಷೇತ್ರಗಳ ಪೈಕಿ 8ರಲ್ಲಿ ಬಿಜೆಪಿ ಗೆದ್ದಿತ್ತು. ಆದರೆ, ಆ ಪರಿಸ್ಥಿತಿ ಈ ಬಾರಿ ಇದ್ದಂತಿಲ್ಲ. ಏಕೆಂದರೆ, ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆ, ಅಭ್ಯರ್ಥಿ ಆಯ್ಕೆಯ ಬಗ್ಗೆ ಇರುವ ಅತೃಪ್ತಿ ಬಿಜೆಪಿಗೆ ತೊಡಕಾಗಬಹುದು.

ಪ್ರಿಯಾಂಕಾ ಕಾರ್ಯತಂತ್ರಕ್ಕೆ ಪರೀಕ್ಷೆ

ಈ ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಹಲವು ಮುಖಂಡರು ಈ ಬಾರಿ ಬಿಜೆಪಿ ಸೇರಿ, ಆ ಪಕ್ಷದ ಟಿಕೆಟ್‌ ಪಡೆದುಕೊಂಡಿದ್ದಾರೆ. ಹಾಗಾಗಿ, ಕಾಂಗ್ರೆಸ್‌ ಪಕ್ಷವು ತಮ್ಮದೇ ಪಕ್ಷದ ಮುಖಂಡರ ವಿರುದ್ಧ ಸೆಣಸಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ಸೋನಿಯಾ ಗಾಂಧಿ ಅವರು ಈ ಬಾರಿ ಪ್ರಚಾರಕ್ಕೆ ಹೋಗಿಲ್ಲ. ಹಾಗಿದ್ದರೂ ತಮ್ಮ ಕ್ಷೇತ್ರ ರಾಯಬರೇಲಿಯ ಮತದಾರರ ಜತೆಗೆ ವರ್ಚುವಲ್‌ ಸಭೆ ನಡೆಸಿ, ಮತ ಕೋರಿದ್ದಾರೆ.

ಹೊಸ ಮುಖಗಳು ಮತ್ತು ರಾಜಕೀಯದಿಂದ ಹೊರಗಿರುವ ವ್ಯಕ್ತಿಗಳಿಗೆ ಟಿಕೆಟ್‌ ನೀಡಿದ ಕಾರ್ಯತಂತ್ರವು ಪರೀಕ್ಷೆಗೆ ಒಳಪಡಲಿದೆ.ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಈ ಬಾರಿ ಈ ಕಾರ್ಯತಂತ್ರ ಅನುಸರಿಸಿದ್ದಾರೆ. ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ತಾಯಿಯನ್ನು ಉನ್ನಾವೊ ಸದರ್‌ ಕ್ಷೇತ್ರದಿಂದ ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಇತರ ಕ್ಷೇತ್ರಗಳಲ್ಲಿಯೂ ಇಂತಹ ಪ್ರಯೋಗವನ್ನು ಕಾಂಗ್ರೆಸ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT