ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷದಿಂದ ಹೊರಹೋಗಿದ್ದ ಚಿಕ್ಕಪ್ಪನ ಭೇಟಿಯಾದ ಅಖಿಲೇಶ್‌: ಮೈತ್ರಿಯ ಮಾತುಕತೆ

Last Updated 16 ಡಿಸೆಂಬರ್ 2021, 14:12 IST
ಅಕ್ಷರ ಗಾತ್ರ

ಲಖನೌ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗುರುವಾರ ಮುಲಾಯಂ ಸಿಂಗ್‌ ಯಾದವ್‌ ಸೋದರ ಶಿವಪಾಲ್ ಸಿಂಗ್ ಯಾದವ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಮೂಲಕ ಚಿಕ್ಕಪ್ಪ ಮತ್ತು ಮಗ ರಾಜಕೀಯವಾಗಿ ಒಂದಾಗುವ ಮನ್ಸೂಚನೆ ನೀಡಿದ್ದಾರೆ.

‌ಉಭಯ ನಾಯಕರು ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಕಳೆದ ಐದು ವರ್ಷಗಳಿಂದ ಕುಟುಂಬದ ಕೆಲವು ಕಾರ್ಯಕ್ರಮಗಳಲ್ಲಿ ಮುಖಾಮುಖಿಯಾಗಿದ್ದು ಬಿಟ್ಟರೆ, ಈ ಇಬ್ಬರೂ ಪ್ರತ್ಯೇಕವಾಗಿ ಭೇಟಿಯಾದ ಪ್ರಸಂಗ ಇರಲಿಲ್ಲ.

ಭೇಟಿ ನಂತರ ಇಬ್ಬರೂ ಮಾಧ್ಯಮಗಳೊಂದಿಗೆ ಮಾತನಾಡಲಿಲ್ಲ. ನಂತರ ಟ್ವೀಟ್‌ ಮಾಡಿರುವ ಅಖಿಲೇಶ್‌ ಯಾದವ್‌, ಮೈತ್ರಿ ಕುರಿತು ಚರ್ಚಿಸಿರುವುದಾಗಿ ಹೇಳಿದ್ದಾರೆ.

‘ಅಖಿಲೇಶ್‌ ಅವರ ಸಮಾಜವಾದಿ ಪಕ್ಷ ಮತ್ತು ಶಿವಪಾಲ್ ಯಾದವ್ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷ–ಲೋಹಿಯಾ (ಪಿಎಸ್‌ಪಿಎಲ್) ನಡುವೆ ಮೈತ್ರಿ ಮಾತುಕತೆಗಳು ನಡೆದವು. ಎರಡೂ ಪಕ್ಷಗಳು ಮೈತ್ರಿಗೆ ಒಪ್ಪಿವೆ,’ ಎಂದು ಮೂಲಗಳು ತಿಳಿಸಿವೆ.

‘ಅನ್ಯರ ಉಪಸ್ಥಿತಿ ಇಲ್ಲದೇ, ಸೌಹಾರ್ದಯುತ ಮತ್ತು ಭಾವನಾತ್ಮಕ ವಾತಾವರಣದಲ್ಲಿ ಸಭೆ ನಡೆದಿದೆ. ಕಾರ್ಯತಂತ್ರಗಳನ್ನು ರೂಪಿಸಲು ಮುಂದಿನ ದಿನಗಳಲ್ಲಿ ಇಂಥ ಹೆಚ್ಚು ಸಭೆಗಳು ನಡೆಯಲಿವೆ,’ ಎಂದು ಮೂಲಗಳು ಹೇಳಿವೆ.

‘ಚುನಾವಣೆಗೂ ಮುನ್ನ ಇಬ್ಬರೂ ನಾಯಕರು ಪರಸ್ಪರ ವೈಮನಸ್ಸು ನಿವಾರಣೆ ಮಾಡಿಕೊಳ್ಳಬೇಕು,’ ಎಂದು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಯಾದವ್ ಆಗಾಗ್ಗೆ ಹೇಳುತ್ತಲೇ ಬಂದಿದ್ದಾರೆ.

ತಮ್ಮ ಘನತೆ ಮತ್ತು ಬೆಂಬಲಿಗರ ಗೌರವವನ್ನು ಕಾಪಾಡುವ ಖಾತ್ರಿ ನೀಡಿದರೆ ತಮ್ಮ ಪಕ್ಷವನ್ನು ಎಸ್‌ಪಿಯೊಂದಿಗೆ ವಿಲೀನಗೊಳಿಸಲು ಸಿದ್ಧ ಎಂದು ಶಿವಪಾಲ್ ಯಾದವ್ ಅವರು ಹಲವಾರು ಸಂದರ್ಭಗಳಲ್ಲಿ ಹೇಳಿದ್ದಾರೆ.

ಅಖಿಲೇಶ್ ಯಾದವ್ ಅವರು ತಮ್ಮ ಚಿಕ್ಕಪ್ಪನೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಈ ಹಿಂದೆ ಹೇಳಿದ್ದರು. ಆದರೆ, ಎಂದೂ ತಮ್ಮ ಚಿಕ್ಕಪ್ಪನನ್ನು ಭೇಟಿಯಾಗಿ ಮಾತುಕತೆ ನಡೆಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT