ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಚುನಾವಣೆ: ಮತವಾಗಿ ಪರಿವರ್ತನೆ ಆದೀತೇ ಪ್ರಿಯಾಂಕಾ ಪ್ರಚಾರ?

Last Updated 9 ಜನವರಿ 2022, 20:13 IST
ಅಕ್ಷರ ಗಾತ್ರ

ಲಖನೌ: ಮಹಿಳಾ ಕೇಂದ್ರಿತ ಕಾರ್ಯಕ್ರಮಗಳ ಮೂಲಕ ಉತ್ತರ ಪ್ರದೇಶ ಚುನಾವಣೆಯಲ್ಲಿ ಗಮನ ಸೆಳೆಯುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಹಲವು ಯತ್ನಗಳು ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತಗಳನ್ನು ತಂದುಕೊಡಲಿವೆಯೇ ಎಂಬ ಕೌತುಕ ಇದೆ.

ಮಹಿಳೆಯರನ್ನು ಸೆಳೆ ಯುವಪ್ರಿಯಾಂಕಾ ಅವರ ಯತ್ನಗಳು ಚುನಾವಣೆಯಲ್ಲಿ ಲಾಭ ತರಲಿವೆ ಎಂದು ಪಕ್ಷದ ರಾಜ್ಯ ಘಟಕದ ಮುಖಂಡರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಆದರೆ, ಈ ಯತ್ನಗಳು ಕಾಂಗ್ರೆಸ್‌ ಮತಬುಟ್ಟಿಯನ್ನು ತುಂಬುವುದಿಲ್ಲ ಎಂಬುದು ಬಿಜೆಪಿ, ಸಮಾಜವಾದಿ ಪಕ್ಷಗಳ ಅಭಿಪ್ರಾಯ.

ಕಾಂಗ್ರೆಸ್ ಮತ ಗಳಿಕೆ ಪ್ರಮಾಣವು ಹೆಚ್ಚುವ ಸಾಧ್ಯತೆ ಇದೆಯಾದರೂ, ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಖಚಿತ ಇಲ್ಲ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. 2017ರ ಚುನಾವಣೆಯಲ್ಲಿ ಶೇ 6ರಷ್ಟು ಮತಗಳನ್ನು ಪಡೆದಿದ್ದ ಕಾಂಗ್ರೆಸ್, ಕೇವಲ 7 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಇದು ಕಾಂಗ್ರೆಸ್‌ನ ಅತ್ಯಂತ ಹೀನಾಯ ಪ್ರದರ್ಶನವಾಗಿತ್ತು. 2012ರ ಚುನಾವಣೆಗೆ ಹೋಲಿಸಿದರೆ ಮತ ಗಳಿಕೆಯು ಶೇ 5ರಷ್ಟು ಕುಸಿತ ಕಂಡಿತ್ತು ಹಾಗೂ ಸ್ಥಾನಗಳು 28ರಿಂದ 7ಕ್ಕೆ ಇಳಿಕೆಯಾಗಿದ್ದವು.

ಮಹಿಳಾ ಸಮಾವೇಶಗಳ ಜೊತೆಗೆ ಬಿಜೆಪಿ ಭದ್ರಕೋಟೆಯಾದ ವಾರಾಣಸಿ, ಗೋರಖಪುರ ಮೊದಲಾದ ಕಡೆಗಳಲ್ಲಿ ಪ್ರಿಯಾಂಕಾ ಅವರು ಸರಣಿ ರ್‍ಯಾಲಿಗಳನ್ನು ನಡೆಸಿದ್ದಾರೆ. ಲಖಿಂಪುರ–ಖೇರಿ ಪ್ರಕರಣದಲ್ಲಿ ಎಸ್‌ಯುವಿ ಹರಿದು ಮೃತಪಟ್ಟ ರೈತರ ಕುಟುಂಬಗಳನ್ನು ಪ್ರಿಯಾಂಕಾ ಭೇಟಿ ಮಾಡಿದ್ದಾರೆ. ಒಂದು ರಾತ್ರಿಯನ್ನು ಪೊಲೀಸ್ ಕಸ್ಟಡಿಯಲ್ಲಿ ಕಳೆದಿದ್ದಾರೆ. ಈ ಘಟನಾವಳಿಗಳು ದೇಶದ ಗಮನ ಸೆಳೆದಿದ್ದವು.

ರಾಜ್ಯದ ವಿವಿಧ ಭಾಗಗಳಲ್ಲಿ ಮಹಿಳೆಯರು ಹಾಗೂ ಬಾಲಕಿಯರಿಗಾಗಿ ಆಯೋಜಿಸಿದ್ದ ಮ್ಯಾರಥಾನ್‌ನಲ್ಲಿ
ಹೆಚ್ಚಿನ ಸಂಖ್ಯೆಯ ಸ್ಪರ್ಧಿಗಳು ಭಾಗಿಯಾಗಿ ಅಚ್ಚರಿ ಮೂಡಿಸಿದ್ದರು. ರಾಯ್‌ಬರೇಲಿಯಲ್ಲಂತೂಕಾಲ್ತುಳಿತ ಆಗುವಷ್ಟು ಸ್ಪರ್ಧಿಗಳು ಜಮಾಯಿಸಿದ್ದರು.

ಜನ ಸಾಮಾನ್ಯರಲ್ಲಿ ನಿರೀಕ್ಷೆ

ಪ್ರಿಯಾಂಕಾ ಅವರ ರಾಜಕೀಯ ಚಟುವಟಿಕೆಗಳಿಂದ ಪಕ್ಷಕ್ಕೆ ಲಾಭವಾಗುವುದಿಲ್ಲ ಎಂದು ವಿರೋಧಿ ಪಾಳಯ ಭಾವಿಸಿದ್ದರೆ, ಜನಸಾಮಾನ್ಯರುಆಶಾವಾದಿಗಳಾಗಿದ್ದಾರೆ. ‌

‘ಪ್ರಿಯಾಂಕಾ ಗಾಂಧಿ ಅವರು ನಮಗೆ ಹಲವು ಭರವಸೆಗಳನ್ನು ನೀಡಿದ್ದಾರೆ. ಕೊಟ್ಟ ಭರವಸೆಗಳನ್ನು ಈಡೇರಿಸಿದರೆ, ಮಹಿಳೆಯರಿಗೆ ಸಾಕಷ್ಟು ನೆರವಾಗುತ್ತದೆ. ಈ ಬಾರಿ ಮಹಿಳಾ ಮತದಾರರಿಂದ ಅವರಿಗೆ ಹೆಚ್ಚಿನ ಬೆಂಬಲ ಸಿಗಲಿದೆ’ ಎನ್ನುತ್ತಾರೆ ಲಖನೌದ ತ್ರಿವೇಣಿ ನಗರ ನಿವಾಸಿ ಮಮತಾ ತಿವಾರಿ. ಜಾನಕಿಪುರಂ ಪ್ರದೇಶ ನಿವಾಸಿ ಶಿಕ್ಷಕಿ ರಂಜನಾ ದೇವಿ ಅವರದ್ದೂ ಇದೇ ಅಭಿಪ್ರಾಯ.

ಪಕ್ಷ ಅಧಿಕಾರಕ್ಕೆ ಬಂದರೆ, ಮಹಿಳೆಯರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ 40ರಷ್ಟು ಮೀಸಲಾತಿ, ಪ್ರತಿಯೊಂದು ಠಾಣೆಗಳಲ್ಲಿ ಮಹಿಳಾ ಪೊಲೀಸರ ನಿಯೋಜನೆ ಸೇರಿದಂತೆ ಹಲವು ಮಹಿಳಾಪರ ಭರವಸೆಗಳನ್ನು ಪ್ರಿಯಾಂಕಾ ನೀಡಿದ್ದಾರೆ. ನರೇಗಾದಲ್ಲಿ ಮಹಿಳಾ ಉದ್ಯೋಗಕ್ಕೆ ಆದ್ಯತೆ ನೀಡುವ ವಾಗ್ದಾನವನ್ನೂ ಅವರು ನೀಡಿದ್ದರು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ವೇತನವನ್ನು ₹10,000ಕ್ಕೆ ಹೆಚ್ಚಿಸುವುದು, ವರ್ಷಕ್ಕೆ 3 ಉಚಿತ ಅಡುಗೆ ಅನಿಲ ಸಿಲಿಂಡರ್ ಪೂರೈಕೆ ಭರವಸೆ ನೀಡಿದ್ದಾರೆ.

ಮಹಿಳಾ ಮ್ಯಾರಥಾನ್‌ನಲ್ಲಿ ಸೇರಿದ ಜನಸಂದಣಿ ನೋಡಿದರೆ ಪ್ರಿಯಾಂಕಾ ಯತ್ನವು ಫಲ ನೀಡುತ್ತದೆ ಎಂಬ ಸ್ಪಷ್ಟ ಸೂಚನೆ ನೀಡುತ್ತದೆ. ಚುನಾವಣೆಯಲ್ಲಿ ಪ್ರಬಲ ಪ್ರದರ್ಶನ ನೀಡುತ್ತೇವೆ.

- ಸುಪ್ರಿಯಾ ಅರೋನ್, ಕಾಂಗ್ರೆಸ್ ನಾಯಕಿ.

ಕಾಂಗ್ರೆಸ್‌ನ ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಒಂದಂಕಿಯಲ್ಲೇ ಇರಲಿದೆ. ಪಕ್ಷಕ್ಕೆ ತಳಮಟ್ಟದಲ್ಲಿ ಸಂಘಟನೆ ಇಲ್ಲ.

- ರಾಜ್ಯದ ಎಸ್‌ಪಿ ಮುಖಂಡ

403 ಕ್ಷೇತ್ರಗಳಿಗೆ ಬೇಕಾಗುವಷ್ಟು ಅಭ್ಯರ್ಥಿಗಳೇ ಕಾಂಗ್ರೆಸ್‌ನಲ್ಲಿ ಇಲ್ಲ. ಪ್ರಿಯಾಂಕಾ ರಾಜ್ಯದ ಪ್ರವಾಸಿ ಅಷ್ಟೇ. ಕಾಂಗ್ರೆಸ್ ಅನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ.

- ರಾಜ್ಯದ ಹಿರಿಯ ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT