ಬುಧವಾರ, ಆಗಸ್ಟ್ 4, 2021
22 °C

ಅಲ್‌ ಖೈದಾ ಸಂಘಟನೆಯೊಂದಿಗೆ ನಂಟು: ಉತ್ತರ ಪ್ರದೇಶದಲ್ಲಿ ಮತ್ತೆ ಮೂವರ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಲಖನೌ: ಅಲ್‌ ಖೈದಾ ಉಗ್ರ ಸಂಘಟನೆಯ ಕಾಶ್ಮೀರಿ ಘಟಕದ ಜೊತೆ ನಂಟು ಹೊಂದಿದ್ದ ಮೂವರನ್ನು ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ಪಡೆ ಬುಧವಾರ ಬಂಧಿಸಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಜುಲೈ 11ರಂದು ಲಖನೌನಲ್ಲಿ ಇಬ್ಬರು ಉಗ್ರರನ್ನು ಬಂಧಿಸಲಾಗಿತ್ತು. ಅವರ ವಿಚಾರಣೆ ನಡೆಸುವ ವೇಳೆ ಈ ಮೂವರ ಹೆಸರು ಬೆಳಕಿಗೆ ಬಂದಿದೆ ಎಂದು ಉತ್ತರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದಾರೆ. 

ಇಂದು ಬಂಧಿತರಾದ ಮೂವರೂ ಲಖನೌ ನಿವಾಸಿಗಳು ಎಂದು ಭಯೋತ್ಪಾದನೆ ನಿಗ್ರಹ ಪಡೆ ತಿಳಿಸಿದೆ.

‘ಉತ್ತರ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಅಲ್‌ ಖೈದಾ ಉಗ್ರ ಸಂಘಟನೆಯ ಘಟಕವೊಂದನ್ನು ಪತ್ತೆ ಮಾಡಿದ್ದೇವೆ. ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದೇವೆ. ಅವರಿಂದ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ’ ಎಂದು ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ಪಡೆ ಭಾನುವಾರ ಹೇಳಿತ್ತು.

ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದರು. ಬಂಧಿತರನ್ನು ಮಿನಾಜ್ ಅಹ್ಮದ್ ಮತ್ತು ಮುಶ್ರುದ್ದೀನ್ ಅಲಿಯಾಸ್ ಮುಶೀರ್ ಎಂದು ಗುರುತಿಸಲಾಗಿತ್ತು

‘ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ರಾಜ್ಯದ ರಾಜಧಾನಿಯ ಜನನಿಬಿಡ ಪ್ರದೇಶದಲ್ಲಿ ಸ್ಫೋಟ ನಡೆಸಲು ಇವರು ಸಂಚು ರೂಪಿಸಿದ್ದರು. ಇವರ ಜತೆಗಾರರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ಮತ್ತಷ್ಟು ಶಂಕಿತರನ್ನು ಬಂಧಿಸಲು ಬೇರೆ ಬೇರೆ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ’ ಎಂದು ಕುಮಾರ್ ಅವರು ತಿಳಿಸಿದ್ದರು.

‘ಲಖನೌನ ಹೊರವಲಯದಲ್ಲಿ ಇರುವ ಕಾಕೋರಿ ಪ್ರದೇಶದ ಮನೆಯೊಂದರಲ್ಲಿ ಶಂಕಿತ ಉಗ್ರರು ಅಡಗಿದ್ದರು. ನಿಖರ ಮಾಹಿತಿ ಮೇರೆಗೆ ಅಲ್ಲಿ ಶೋಧ ಕಾರ್ಯ ನಡೆಸಲಾಯಿತು. ಇವರಿಬ್ಬರು ಸಿಕ್ಕಿಬಿದ್ದರು. ಬಂಧಿತ ಮಿನಾಜ್ ಮತ್ತು ಮುಶೀರ್ ಅವರಿಗೆ ಪಾಕಿಸ್ತಾನದಿಂದ ನಿರ್ದೇಶನಗಳು ಬರುತ್ತಿದ್ದವು’ ಎಂದು ಕುಮಾರ್ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು