ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಪಕ್ಷೀಯ ಶಾಸಕ, ಸಚಿವರ ವಿರುದ್ಧದ ಪ್ರಕರಣ ಹಿಂಪಡೆಯಲು ಯೋಗಿ ಸರ್ಕಾರ ಚಿಂತನೆ

Last Updated 11 ಆಗಸ್ಟ್ 2022, 14:14 IST
ಅಕ್ಷರ ಗಾತ್ರ

ಲಖನೌ: ಯೋಗಿ ಆದಿತ್ಯನಾಥ್‌ ಅವರ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ ಸರ್ಕಾರವು ತನ್ನ ಸಚಿವರು ಮತ್ತು ಶಾಸಕರ ಮೇಲಿನ ಕ್ರಿಮಿನಲ್ ಮೊಕದ್ದಮೆಗಳನ್ನು ಹಿಂಪಡೆಯಲು ಚಿಂತನೆ ನಡೆಸುತ್ತಿದೆ.

ಸಚಿವರೊಬ್ಬರು ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿರುವುದು, ಮತ್ತೊಬ್ಬ ಸಚಿವನಿಗೆಜಾಮೀನು ರಹಿತ ವಾರಂಟ್‌ ಜಾರಿಯಾಗಿರುವ ಪ್ರಸಂಗಗಳು ಉತ್ತರ ಪ್ರದೇಶ ಸರ್ಕಾರವನ್ನು ತೀವ್ರ ಮುಜುಗರಕ್ಕೆ ತಳ್ಳಿವೆ. ಈ ಮಧ್ಯೆಯೇ ಸರ್ಕಾರ ಇಂಥದ್ದೊಂದು ಚಿಂತನೆಯಲ್ಲಿ ನಿರತವಾಗಿದೆ.

‘ಅಪರಾಧ ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಕಾನೂನು ಇಲಾಖೆಯೊಂದಿಗೆ ಸಮಾಲೋಚಿಸಿದ ನಂತರ ಶೀಘ್ರದಲ್ಲೇ ಪ್ರಾರಂಭಿಸಲಾಗುತ್ತದೆ. 'ರಾಜಕೀಯ ಪ್ರೇರಿತ ಪ್ರಕರಣಗಳನ್ನು ಮಾತ್ರ ಹಿಂಪಡೆಯಲಾಗುವುದು. ಗಂಭೀರ ಪ್ರಕರಣಗಳನ್ನು ಹಿಂಪಡೆಯುವುದಿಲ್ಲ. ವಿರೋಧ ಪಕ್ಷಗಳ ಸರ್ಕಾರಗಳ ಅವಧಿಯಲ್ಲಿ ಸಚಿವರು ಮತ್ತು ಪಕ್ಷದ ಶಾಸಕರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ’ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

‘ನಮ್ಮ ನಾಯಕರ ವಿರುದ್ಧ ದಾಖಲಾಗಿರುವ ಬಹುತೇಕ ಪ್ರಕರಣಗಳು ರಾಜಕೀಯ ಪ್ರೇರಿತವಾಗಿವೆ. ಅವುಗಳನ್ನು ಹಿಂಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಹಿಂದಿನ ಬಿಎಸ್‌ಪಿ ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ)ದ ಸರ್ಕಾರಗಳು ಮಂತ್ರಿಗಳು ಮತ್ತು ಆಡಳಿತ ಪಕ್ಷದ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದ ಉದಾಹರಣೆಗಳಿವೆ’ ಎಂದು ಅವರು ತಿಳಿಸಿದ್ದಾರೆ.

ಉತ್ತರ ಪ್ರದೇಶ ಸಂಪುಟದ 52 ಸಚಿವರ ಪೈಕಿ 22 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಇದರಲ್ಲಿ ಅವರು ತಪ್ಪಿತಸ್ಥರಾದರೆಂದು ಸಾಬೀತಾದರೆ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಬಹುದು. ವಿಧಾನಸಭೆಯ 403 ಶಾಸಕರ ಪೈಕಿ ಅರ್ಧಕ್ಕೂ ಹೆಚ್ಚು ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಸಚಿವರಾದ ಯೋಗೇಂದ್ರ ಉಪಾಧ್ಯಾಯ, ಧರ್ಮಪಾಲ್ ಸಿಂಗ್ ನಂದ್ ಗೋಪಾಲ್ ನಂದಿ ಸೇರಿದಂತೆ ಹಲವರು ಕ್ರಿಮಿನಲ್‌ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ಎದುರಿಸುತ್ತಿದ್ದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವ ರಾಕೇಶ್ ಸಚನ್ ಅವರನ್ನು ಇತ್ತೀಚೆಗೆ ಕೋರ್ಟ್‌ ಅಪರಾಧಿ ಎಂದು ಘೋಷಿಸಿತ್ತು. ಇನ್ನೊಂದಡೆ ಬಿಜೆಪಿಯ ಮಿತ್ರಪಕ್ಷ ನಿಶಾದ್ ಪಕ್ಷದ ಅಧ್ಯಕ್ಷ, ಸಚಿವ ಸಂಜಯ್ ನಿಶಾದ್ ವಿರುದ್ಧ ಪ್ರಕರಣವೊಂದರಲ್ಲಿ ಕೋರ್ಟ್‌ ಜಾಮೀನು ರಹಿತ ವಾರಂಟ್‌ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರವು ತೀವ್ರ ಟೀಕೆಗೆ ಗುರಿಯಾಗಿದೆ.

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT