ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಫಲಿತಾಂಶ: ಬದಲಾದ ಲೆಕ್ಕಾಚಾರ, ಯೋಗಿ ಸರ್ಕಾರ ಅಚಲ

Last Updated 11 ಮಾರ್ಚ್ 2022, 7:50 IST
ಅಕ್ಷರ ಗಾತ್ರ

ಕೃಷಿ ಕಾಯ್ದೆಗಳೂ ಸೇರಿದಂತೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರಗಳ ಹಲವು ನೀತಿಗಳು ಉತ್ತರ ಪ್ರದೇಶ ವಿಧಾನಸಭೆಯ ಚುನಾವಣೆಯನ್ನು ಪ್ರಭಾವಿಸಲಿವೆ ಎಂದು ನಿರೀಕ್ಷಿಸಲಾಗಿತ್ತು. ಈ ವಿಷಯಗಳೆಲ್ಲವೂಆಡಳಿತಾರೂಢ ಬಿಜೆಪಿಗೆ ಮುಳುವಾಗಲಿದೆ ಎಂದು ಹೇಳಲಾಗುತ್ತಿತ್ತು. ವಿರೋಧ ಪಕ್ಷಗಳೂ ಈ ವಿಷಯಗಳನ್ನೇ ಮುಂದು ಮಾಡಿ ಪ್ರಚಾರ ನಡೆಸಿದ್ದವು. ಫಲಿತಾಂಶದ ಮೇಲೆ ಈ ಎಲ್ಲಾ ಅಂಶಗಳು ಪರಿಣಾಮ ಬೀರಿರುವುದು ಕಾಣುತ್ತಿದೆ. ಆದರೆ, ಸರ್ಕಾರವನ್ನು ಬದಲಿಸುವಷ್ಟು ದೊಡ್ಡ ಪ್ರಮಾಣದಲ್ಲಿ ಈ ಯಾವ ಅಂಶಗಳೂ ಕೆಲಸ ಮಾಡಿಲ್ಲ.

ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದ್ದ ಹೋರಾಟವು, ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಪ್ರಭಾವ ಬೀರಲಿದೆ ಎಂದು ಹೇಳಲಾಗಿತ್ತು. ರಾಜ್ಯದ ಪೂರ್ವಾಂಚಲ ಪ್ರಾಂತ್ಯದ ಜಿಲ್ಲೆಗಳ ರೈತರು ಈ ಕಾಯ್ದೆಗಳ ವಿರುದ್ಧ ಭಾರಿ ಹೋರಾಟ ನಡೆಸಿದ್ದರು. ಚುನಾವಣೆ ಘೋಷಣೆಯಾಗುವುದಕ್ಕೂ ಮುನ್ನ ಕೇಂದ್ರ ಸರ್ಕಾರವು ಈ ಕಾಯ್ದೆಗಳನ್ನು ವಾಪಸ್‌ ಪಡೆದಿತ್ತು. ಆದರೆ ರೈತರ ಸಿಟ್ಟು ಕಡಿಮೆಯಾಗಿರಲಿಲ್ಲ. ಬಿಜೆಪಿ ನಾಯಕರು ಪ್ರಚಾರಕ್ಕೆ ಹೋದಾಗಲೆಲ್ಲಾ ಅವರನ್ನು, ರೈತರು ಘೇರಾವ್ ಮಾಡಿದ ಮತ್ತು ಓಡಿಸಿದ ಘಟನೆಗಳು ನಡೆದಿದ್ದವು.

ಬಿಜೆಪಿ ವರಿಷ್ಠರಿಗೂ ಇದರ ಬಿಸಿ ತಟ್ಟಿತ್ತು. ಈ ಭಾಗದ ಕೃಷಿಕ ಸಮುದಾಯವಾದ ಜಾಟರು, ಬಿಜೆಪಿಯಿಂದ ದೂರ ಸರಿದಿದ್ದರು. ಜಾಟರ ಆರ್‌ಎಲ್‌ಡಿ ಪಕ್ಷವು ಸಮಾಜವಾದಿ ಪಕ್ಷದ ಜತೆಗೆ ಕೈಜೋಡಿಸಿತ್ತು. ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುಂತೆ ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಅವರು, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರಿಗೆ ಹಲವು ಬಾರಿ ಬಹಿರಂಗ ಆಹ್ವಾನ ನೀಡಿದ್ದರು. ಆದರೆ, ಆರಂಭದಲ್ಲಿ ಇದ್ದ ರೈತರ ಸಿಟ್ಟು, ಮತದಾನದ ವೇಳೆಗೆ ಕಡಿಮೆಯಾದಂತೆ ಕಾಣುತ್ತದೆ. ರೈತರ ಪ್ರತಿಭಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ನೋಯಿಡಾ, ಆಗ್ರಾ ಜಿಲ್ಲೆಗಳ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತೆ ಆರಿಸಿ ಬಂದಿದೆ. ಆದರೆ ಉಳಿದ ಜಿಲ್ಲೆಗಳಲ್ಲಿ ಎಸ್‌ಪಿ ಮತ್ತು ಆರ್‌ಎಲ್‌ಡಿ ಅಭ್ಯರ್ಥಿಗಳು ಆರಿಸಿ ಬಂದಿದ್ದಾರೆ.

ಬಿಜೆಪಿಯ ಒಟ್ಟು ಸ್ಥಾನಗಳು ಕುಸಿಯುವಂತೆ ಮಾಡುವಲ್ಲಿ ರೈತರ ಸಿಟ್ಟು ಯಶಸ್ವಿಯಾಗಿದೆ. ಆದರೆ, ಅದು ಸರ್ಕಾರವನ್ನು ಬದಲಿಸುವಷ್ಟು ಪರಿಣಾಮ ಬೀರಿಲ್ಲ.

ಕೃಷಿ ಸಮುದಾಯವೇ ಬಹುಸಂಖ್ಯಾತವಾಗಿರುವ ವ್ರಜ ಪ್ರದೇಶದಲ್ಲಿ ಬಿಜೆಪಿ ಹಲವು ಕ್ಷೇತ್ರಗಳನ್ನು ಕಳೆದುಕೊಂಡಿದೆ. ವ್ರಜ ಪ್ರಾಂತ್ಯವು ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿಯೇ ಬರುತ್ತದೆ. ಕೃಷಿ ಕಾಯ್ದೆಗಳ ವಿರುದ್ಧ ಇಲ್ಲಿನ ರೈತರೂ ಹೋರಾಟ ನಡೆಸಿದ್ದರು. ಅದರ ಬಿಸಿ ತಟ್ಟಬಹುದು ಎಂದು ಭಾವಿಸಿದ್ದ ಬಿಜೆಪಿ ಇಲ್ಲಿ ಧಾರ್ಮಿಕ ಧ್ರುವೀಕರಣಕ್ಕೆ ಮುಂದಾಗಿತ್ತು. ಮಥುರಾದಲ್ಲಿನ ಶ್ರೀಕೃಷ್ಣ ಜನ್ಮಸ್ಥಾನದಲ್ಲಿ ಇರುವ ಮಸೀದಿಯನ್ನು ಜಾಗವನ್ನು ತೆರವು ಮಾಡಬೇಕು ಎಂದು ನ್ಯಾಯಾಲಯಗಳಲ್ಲಿ ಹಲವು ದಾವೆಗಳನ್ನು ಹೂಡಲಾಗಿತ್ತು. ‘ಅಯೋಧ್ಯೆ ಮತ್ತು ಕಾಶಿ ನಮ್ಮದಾಯಿತು. ಈಗ ಮಥುರಾದ ಸರದಿ’ ಎಂದು ಬಿಜೆಪಿ ನಾಯಕರು ಬಹಿರಂಗವಾಗಿಯೇ ಘೋಷಿಸಿದ್ದರು. ಬಿಜೆಪಿಯ ಈ ತಂತ್ರ ರೈತ ಸಮುದಾಯದ ಸಿಟ್ಟನ್ನು ಕಡಿಮೆ ಮಾಡಿರಬಹುದು. ಆದರೆ ಅದನ್ನು ಪೂರ್ಣ ಪ್ರಮಾಣದಲ್ಲಿ ಹೋಗಲಾಡಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಹೀಗಾಗಿ ಬಿಜೆಪಿ ಈ ಪ್ರಾಂತ್ಯದಲ್ಲಿ ಹಲವು ಕ್ಷೇತ್ರಗಳನ್ನು ಕಳೆದುಕೊಂಡಿದೆ.

ರೈತರ ಸಿಟ್ಟು ಇಲ್ಲಿ ಎಸ್‌ಪಿ ಮತ್ತು ಅದರ ಮಿತ್ರಪಕ್ಷ ಆರ್‌ಎಲ್‌ಡಿ ಪರವಾಗಿ ಕೆಲಸ ಮಾಡಿದೆ. ಈ ಪ್ರಾಂತ್ಯದ ಹಲವು ಕ್ಷೇತ್ರಗಳಲ್ಲಿ ಈ ಎರಡೂ ಪಕ್ಷಗಳು ಗೆಲುವು ದಾಖಲಿಸಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಠಾಕೂರರನ್ನು ಮಾತ್ರ ಓಲೈಸುತ್ತಾರೆ. ಉಳಿದ ಎಲ್ಲಾ ಜಾತಿಗಳು, ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣರನ್ನು ಕಡೆಗಣಿಸುತ್ತಾರೆ ಮತ್ತು ತುಚ್ಛವಾಗಿ ಕಾಣುತ್ತಾರೆ ಎಂಬುದು, ಯೋಗಿ ವಿರುದ್ದ ಇದ್ದ ದೊಡ್ಡ ಆರೋಪ. ಚುನಾವಣೆಯಲ್ಲೂ ಇದು ಪ್ರಭಾವ ಬೀರಿದಂತೆ ಕಾಣುತ್ತದೆ. ಯೋಗಿ ಅವರ ಭದ್ರಕೋಟೆಯಾದ ಪೂರ್ವಾಂಚಲ, ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿ ಮತ್ತು ಸುತ್ತಮುತ್ತಲಿನ ಹಲವು ಜಿಲ್ಲೆಗಳಲ್ಲಿ ಬ್ರಾಹ್ಮಣರ ಪ್ರಾಬಲ್ಯ ಹೆಚ್ಚು. ಈ ಜಿಲ್ಲೆಗಳಲ್ಲಿ ಈ ಹಿಂದೆ ಗೆದ್ದಿದ್ದ ಹಲವು ಕ್ಷೇತ್ರಗಳನ್ನು ಬಿಜೆಪಿ ಈ ಬಾರಿ ಕಳೆದುಕೊಂಡಿದೆ. ಇಲ್ಲಿ ಈ ಹಿಂದೆ ಬಿಎಸ್‌ಪಿ ಗೆದ್ದಿದ್ದ ಹಲವು ಸ್ಥಾನಗಳನ್ನು ಈ ಬಾರಿ ಎಸ್‌‍ಪಿ ಗೆದ್ದುಕೊಂಡಿದೆ. ಒಟ್ಟಾರೆ ಈ ಪ್ರಾಂತ್ಯದಲ್ಲಿ ಬಿಜೆಪಿ ಮತ್ತು ಬಿಎಸ್‌ಪಿ ಹಲವು ಕ್ಷೇತ್ರಗಳನ್ನು ಕಳೆದುಕೊಂಡಿವೆ.

ಪೂರ್ವಾಂಚಲ ಪ್ರದೇಶದಲ್ಲಿ ಬೀಡಾಠಡಿ ದನಗಳ ಸಮಸ್ಯೆಯೂ ಚುನಾವಣೆಯ ವಿಷಯವಾಗಿತ್ತು. ಇದೂ ಸಹ ಬಿಜೆಪಿ ವಿರುದ್ಧವಾಗಿ ಕೆಲಸ ಮಾಡಿರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT