ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UP Election Results | ಉತ್ತರ ಪ್ರದೇಶ ಚುನಾವಣೆ ಫಲಿತಾಂಶದ ಪ್ರಮುಖಾಂಶಗಳು

Last Updated 10 ಮಾರ್ಚ್ 2022, 16:08 IST
ಅಕ್ಷರ ಗಾತ್ರ

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ನೇತೃತ್ವದ ಆಡಳಿತಾರೂಢ ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳುತ್ತಿವೆ. ಆದರೆ, ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿಗೆ ಹಿನ್ನೆಡೆಯಾಗಲಿದೆ. ಸಮಾಜವಾದಿ ಪಕ್ಷವು ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ.ಕಳೆದ (2017ರ) ವಿಧಾನ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಎಸ್‌ಪಿ 47, ಬಿಎಸ್‌ಪಿ 19 ಕ್ಷೇತ್ರಗಳಲ್ಲಿ ಜಯ ಕಂಡರೆ, ಕಾಂಗ್ರೆಸ್ ಕೇವಲ 7 ಕಡೆ ಖಾತೆ ತೆರೆದಿತ್ತು.

***

ಕಾಂಗ್ರೆಸ್‌ ವರಿಷ್ಠರು ಸ್ಪರ್ಧಿಸುವ ಅಮೇಠಿ, ರಾಯಬರೇಲಿಯಲ್ಲಿ ಯಾರಿಗೆ ಗೆಲುವು?

ಸೋನಿಯಾ ಗಾಂಧಿ ಅವರು (2004ರಿಂದ) ಪ್ರತಿನಿಧಿಸುತ್ತಿರುವ ರಾಯಬರೇಲಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಐದು ವಿಧಾನಸಭೆ ಕ್ಷೇತ್ರಗಳ ಪೈಕಿ ಎಸ್‌ಪಿ ಮೂರಲ್ಲಿ ಮುಂದಿದ್ದರೆ, ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಮುಂದಿದೆ.

ಈ ಕ್ಷೇತ್ರವನ್ನು ಹಿಂದೆ ಫಿರೋಜ್‌ ಗಾಂಧಿ (1952–60), ಇಂದಿರಾಗಾಂಧಿ (1967–77) ಅವರು ಪ್ರತಿನಿಧಿಸಿದ್ದರು.

ಅಮೇಠಿಯಲ್ಲಿಯೂ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಬಿಜೆಪಿ ಮೂರರಲ್ಲಿ ಮುಂದಿದೆ. ಎಸ್‌ಪಿ ಎರಡರಲ್ಲಿ ಮುನ್ನಡೆ ಸಾಧಿಸಿದೆ. 2004ರಿಂದ ರಾಹುಲ್‌ ಗಾಂಧಿ ಅವರು ಸತತವಾಗಿ ಈ ಕ್ಷೇತ್ರವನ್ನು ಗೆಲ್ಲುತ್ತಾ ಬಂದಿದ್ದದ್ದರು. ಆದರೆ, 2019ರ ಬಿಜೆಪಿಯ ಸ್ಮೃತಿ ಇರಾನಿ ಈ ಕ್ಷೇತ್ರದಲ್ಲಿ ಗೆದ್ದಿದ್ದಾರೆ.

ರಾಜನಾಥ್ ಸಿಂಗ್ ಪುತ್ರ ಪಂಕಜ್‌ಗೆ 1.81 ಲಕ್ಷ ಮತಗಳ ಅಂತರದ ಗೆಲುವು

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪುತ್ರ, ಬಿಜೆಪಿಯ ಪಂಕಜ್ ಸಿಂಗ್ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನೋಯ್ಡ ಕ್ಷೇತ್ರದಲ್ಲಿ 1,81,513 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ತಮ್ಮ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಕರ್ಹಾಲ್ ಕ್ಷೇತ್ರದಲ್ಲಿ 14,7237 ಮತಗಳನ್ನು ಪಡೆದು ಗೆದ್ದಿದ್ದಾರೆ.

ಯೋಗಿಗೆ ಭಾರಿ ಮತಗಳ ಮುನ್ನಡೆ

ಗೋರಖ್‌ಪುರ ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು, 40,144 ಮತಗಳಿಂದ ಮುಂದಿದ್ದಾರೆ.

ಯುಪಿ+ಯೋಗಿ = ಉಪಯೋಗಿ ಎಂದ ಸುಧಾಕರ್
ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶವನ್ನು ಉತ್ತಮ ಪ್ರದೇಶವಾಗಿ ಪರಿವರ್ತಿಸುವ ಮೂಲಕ ‘ಯುಪಿ+ಯೋಗಿ’ನಿಶ್ಚಯವಾಗಿ 'ಉಪಯೋಗಿ' ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಡಾ.ಕೆ.ಸುಧಾಕರ್ ಬಣ್ಣಿಸಿದ್ದಾರೆ.

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಕುರಿತು ಟ್ವೀಟ್ ಮಾಡಿರುವ ಅವರು, ‘ಉತ್ತರ ಪ್ರದೇಶವನ್ನು ಉತ್ತಮ ಪ್ರದೇಶವಾಗಿ ಪರಿವರ್ತಿಸುವ ಮೂಲಕ ‘ಯುಪಿ+ಯೋಗಿ’ನಿಶ್ಚಯವಾಗಿ ‘ಉಪಯೋಗಿ’ಎಂಬುದನ್ನು ಸಾಬೀತು ಪಡಿಸಿದೆ. ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಐತಿಹಾಸಿಕ ಮತ್ತು ದೊಡ್ಡ ಗೆಲುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಚಲ ನಂಬಿಕೆ ಮತ್ತು ಮಹಾಂತ ಯೋಗಿ ಆದಿತ್ಯನಾಥ್‌ ಜೀ ಅವರ ವಿಕಾಸ ಮಂತ್ರದ ಫಲವಿದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯೋತ್ಸವ; ನಿರ್ಬಂಧ ಹಿಂಪಡೆದ ಚುನಾವಣಾ ಆಯೋಗ
ರಾಜಕೀಯ ಪಕ್ಷಗಳು ಚುನಾವಣೆ ಗೆಲುವಿನ ಸಂಭ್ರಮಾಚರಣೆ ನಡೆಸದಂತೆ ಹೇರಿದ್ದ ನಿರ್ಬಂಧಗಳನ್ನು ಚುನಾವಣಾ ಆಯೋಗವು ಸಡಿಲಿಸಿದೆ. ಕೋವಿಡ್–19 ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಉತ್ತರಪ್ರದೇಶ, ಉತ್ತರಾಖಂಡ, ಮಣಿಪುರ, ಪಂಜಾಬ್ ಹಾಗೂ ಗೋವಾ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಆಯೋಗ ನಿರ್ಬಂಧಗಳನ್ನು ವಿಧಿಸಿತ್ತು.

ಆದಾಗ್ಯೂ, ಈ ನಿರ್ಬಂಧ ಸಡಿಲಿಕೆಯು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳು (ಎಸ್‌ಡಿಎಂಎ) ಹಾಗೂ ಜಿಲ್ಲಾ ಆಡಳಿತಗಳ ಸೂಚನೆಗಳಿಗೆ ಒಳಪಟ್ಟು ಮುಂದವರಿಯಲಿವೆ ಎಂದು ಆಯೋಗ ತಿಳಿಸಿದೆ. ಈ ಸಂಬಂಧ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.

ಲಖಿಂಪುರ ಖೇರಿ ಜಿಲ್ಲೆಯ 8ರಲ್ಲಿ 7 ಕಡೆ ಬಿಜೆಪಿಗೆ ಮುನ್ನಡೆ
ಹಿಂಸಾಚಾರ ಪ್ರಕರಣದಿಂದ ಕಳೆದ ವರ್ಷ ಕುಖ್ಯಾತಿ ಪಡೆದಿರುವ 'ಲಖಿಂಪುರ ಖೇರಿ' ಜಿಲ್ಲೆಯಲ್ಲಿರುವ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಬಿಜೆಪಿ 7ರಲ್ಲಿ ಮುನ್ನಡೆ ಸಾಧಿಸಿದೆ. ಇನ್ನೊಂದು ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಮುನ್ನಡೆಯಲ್ಲಿದೆ.

ಕೇಂದ್ರ ಸಚಿವ ಅಜಯ್ ಮಿಶ್ರಾ ಥೇಣಿ ಅವರ ಪುತ್ರ ಆಶಿಶ್ ಮಿಶ್ರಾ, ಪ್ರತಿಭಟನಾ ನಿರತ ರೈತರ ಮೇಲೆ ಕಾರು ಚಲಾಯಿಸಿದ್ದರು ಎಂಬ ಆರೋಪವಿದೆ. ಈ ವೇಳೆ ಹಿಂಸಾಚಾರ ನಡೆದಿತ್ತು. ಪ್ರಕರಣದಲ್ಲಿ ರೈತರು, ಪೊಲೀಸರು ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟಿದ್ದರು.

ಹಿಂಸಾಚಾರ ನಡೆದಿದ್ದ ನಿಘಾಸನ್‌ ಕ್ಷೇತ್ರದಲ್ಲಿ ಬಿಜೆಪಿಯ ಶಶಾಂಕ್ ವರ್ಮಾ 39,975 ಮತ ಗಳಿಸಿದ್ದಾರೆ. ಎಸ್‌ಪಿಯ ಆರ್‌.ಎಸ್‌.ಕುಶ್ವಾಹ24,527 ಮತ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಉತ್ತರ ಪ್ರದೇಶದಲ್ಲಿ ಆಡಳಿತ ಪಕ್ಷಕ್ಕೇ ಮತ್ತೆ ಅಧಿಕಾರ: 1985ರ ಬಳಿಕ ಇದೇ ಮೊದಲು
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಮತ ಎಣಿಕೆ ಪ್ರಗತಿಯಲ್ಲಿದ್ದು, ಉತ್ತರ ಪ್ರದೇಶದಲ್ಲಿ ಬಿಜೆಪಿ ಬಹುಮತದತ್ತ ಸಾಗುತ್ತಿದೆ.

ಒಂದು ವೇಳೆಉತ್ತರ ಪ್ರದೇಶದಲ್ಲಿ ಬಿಜೆಪಿ ‌ಬಹುಮತ ಗಳಿಸಿದರೆ, 1985ರ ಬಳಿಕ ಇದೇ ಮೊದಲ ಬಾರಿಗೆ ಆಡಳಿತ ಪಕ್ಷವೇ ಚುನಾವಣೆಯಲ್ಲಿ ಗೆದ್ದು ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಿದಂತಾಗಲಿದೆ.

ಯೋಗಿ ಆದಿತ್ಯನಾಥ್ ಅವರೇ ಇನ್ನೊಂದು ಅವಧಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದರೆ ಅದೂ ಸಹ ದಾಖಲೆಯಾಗಲಿದೆ. 1950ರ ಬಳಿಕ ಇದೇ ಮೊದಲ ಬಾರಿಗೆ, ಐದು ವರ್ಷಗಳ ಪೂರ್ಣಾವಧಿ ಆಡಳಿತ ನಡೆಸಿದ ಬಳಿಕ ಮತ್ತೆ ಅಧಿಕಾರ ಉಳಿಸಿಕೊಂಡ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಗುರುತಿಸಿಕೊಳ್ಳಲಿದ್ದಾರೆ.

1950ರಿಂದ 54ರ ವರೆಗೆ ಗೋವಿಂದ ವಲ್ಲಭ ಪಂತ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 1955ರಿಂದ 61 ರವರೆಗೆ ಅವರೇ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದರು.

ಜೈಲಿನಲ್ಲಿರುವ ಎಸ್‌ಪಿ ನಾಯಕ ಅಜಂ ಖಾನ್ ಮುನ್ನಡೆ
ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು,ಜೈಲಿನಲ್ಲಿರುವ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

ರಾಂಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅಜಂ ಖಾನ್ 5,090 ಮತಗಳನ್ನು ಪಡೆಯುವುದರೊಂದಿಗೆ ಬಿಜೆಪಿಯ ಆಕಾಶ್ ಸಕ್ಸೇನಾ ವಿರುದ್ಧ 4000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.

ಎಸ್‌ಪಿ ಅಭ್ಯರ್ಥಿ ಅಜಂ ಖಾನ್ ಅವರು, ರಾಂಪುರ ಜಿಲ್ಲೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಹಲವು ದೂರುಗಳ ಹಿನ್ನೆಲೆಯಲ್ಲಿ ಸದ್ಯ ಸೀತಾಪುರ ಜೈಲಿನಲ್ಲಿದ್ದಾರೆ.

ಪಿಎಂ ಮೋದಿ ಪ್ರತಿನಿಧಿಸುವವಾರಾಣಸಿಯ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಪ್ರತಿನಿಧಿಸುವ ವಾರಾಣಸಿ ಜಿಲ್ಲೆಯ, ವಾರಾಣಸಿ ಕಂಟೋನ್ಮೆಂಟ್ ಮತ್ತು ವಾರಾಣಸಿ ಉತ್ತರ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಆದರೆ, ವಾರಾಣಸಿ ದಕ್ಷಿಣ ವಿಧಾನಸಭೆಯಲ್ಲಿ ಹಿನ್ನಡೆ ಅನುಭವಿಸಿದೆ.

ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ನೀಲಕಂಠ ತಿವಾರಿ ಅವರು2017ರ ಚುನಾವಣೆಯಲ್ಲಿ ಗೆದ್ದು ಯೋಗಿ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಆದರೆ, ಈ ಬಾರಿ ಸಮಾಜವಾದಿ ಪಕ್ಷದ (ಎಸ್‌ಪಿ) ಅಭ್ಯರ್ಥಿ ಕಿಶನ್ ದೀಕ್ಷಿತ್ ಎದುರು 6,146 ಮತಗಳಿಂದ ಹಿನ್ನಡೆ ಅನುಭವಿಸಿದ್ದಾರೆ.

ಮುನ್ನಡೆ ಕಾಯ್ದುಕೊಂಡ ಬಿಜೆಪಿ
11ರ ವೇಳೆಗೆ ಬಿಜೆಪಿ ಮೈತ್ರಿಕೂಟ 255 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದೇ ವೇಳೆ ಎಸ್‌ಪಿ ಮೈತ್ರಿಕೂಟ 113, ಕಾಂಗ್ರೆಸ್‌ 4, ಬಿಎಸ್‌ಪಿ 4 ಹಾಗೂ ಇತರ ಪಕ್ಷಗಳು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಯೋಗಿ,ಅಖಿಲೇಶ್‌ಗೆ ಮುನ್ನಡೆ
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತುಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಆರಂಭಿಕ ಮುನ್ನಡೆ ಪಡೆದುಕೊಂಡಿದ್ದಾರೆ.

ಯೋಗಿಗೋರಖಪುರ ನಗರ ವಿಧಾನಸಭೆ ಕ್ಷೇತ್ರದಿಂದ ಮತ್ತು ಯಾದವ್‌ ಕರ್ಹಾಲ್‌ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಆರಂಭಿಕ ಮುನ್ನಡೆ ಕಾಯ್ದುಕೊಂಡ ಬಿಜೆಪಿ
ಉತ್ತರ ಪ್ರದೇಶ ವಿಧಾನಸಭೆಯ 403 ಸ್ಥಾನಗಳಿಗೆ ಮತ ಎಣಿಕೆ ಆರಂಭವಾಗಿದ್ದು, ಆಡಳಿತಾರೂಢ ಬಿಜೆಪಿಯು ಪ್ರಬಲ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ(ಎಸ್‌ಪಿ) ನೇತೃತ್ವದ ಮೈತ್ರಿಕೂಟಕ್ಕಿಂತ ಮುನ್ನಡೆ ಪಡೆದುಕೊಂಡಿದೆ.

ಉತ್ತರ ಪ್ರದೇಶ ವಿಧಾನಸಭೆಗೆ‌ಫೆಬ್ರುವರಿ 10ರಿಂದ ಮಾರ್ಚ್‌ 7ರ ವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆದಿತ್ತು. ಬಹುಮತ ಸಾಬೀತು ಮಾಡಲು ಬೇಕಿರುವ ಸಂಖ್ಯೆ 202 ಆಗಿದ್ದು, ಇಂದು ಫಲಿತಾಂಶ ಪ್ರಕಟವಾಗಲಿದೆ.

ಸದ್ಯ ಬಿಜೆಪಿ 240ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಸ್‌ಪಿ ಅಭ್ಯರ್ಥಿಗಳು 100ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಮತ ಎಣಿಕೆ ಆರಂಭ
ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು (ಗುರುವಾರ ಮಾ. 10) ಪ್ರಕಟವಾಗಲಿದೆ. 403 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಬೆಳಿಗ್ಗೆ 8ಕ್ಕೆ ಆರಂಭವಾಗಿದೆ.

ರಾಜ್ಯದಾದ್ಯಂತ ಬಿಗಿ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

ಸಮೀಕ್ಷೆ ಲೆಕ್ಕಾಚಾರ
ರಿಪಬ್ಲಿಕ್ ಟಿವಿ ಸಮೀಕ್ಷೆ ಪ್ರಕಾರ, ಉತ್ತರ ಪ್ರದೇಶದ 403 ಕ್ಷೇತ್ರಗಳ ಪೈಕಿ ಬಿಜೆಪಿ ಮೈತ್ರಿಕೂಟವು 240 ಕ್ಷೇತ್ರಗಳನ್ನು ಗೆಲ್ಲಲಿದೆ. ಸಮಾಜವಾದಿ ಪಕ್ಷದ ಮೈತ್ರಿಕೂಟವು 140 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಎಸ್‌ಪಿಗೆ 17 ಮತ್ತು ಉಳಿದವರು 6 ಸ್ಥಾನಗಳಲ್ಲಿ ಜಯಸಾಧಿಸಬಹುದು.

ಸಿಎನ್‌ಎನ್‌ ನ್ಯೂಸ್‌ 18 ಪ್ರಕಾರ, ಬಿಜೆಪಿ ಮೈತ್ರಿಕೂಟವು 262–277 ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಎಸ್‌ಪಿ ಮೈತ್ರಿಕೂಟವು 119–134 ಕ್ಷೇತ್ರಗಳಲ್ಲಿ ಜಯಸಾಧಿಸಬಹುದು. ಬಿಎಸ್‌ಪಿಯು 7–15, ಕಾಂಗ್ರೆಸ್‌ 3–8 ಕ್ಷೇತ್ರಗಳನ್ನು ಗೆಲ್ಲಬಹುದು.

ಇಟಿಜಿ ರಿಸರ್ಚ್ ಸಮೀಕ್ಷೆ ಪ್ರಕಾರ, ಬಿಜೆಪಿ ಮೈತ್ರಿಕೂಟವು 230–245 ಕ್ಷೇತ್ರಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೆ ಬರಲಿದೆ. ಪ್ರಬಲ ಎದುರಾಳಿ ಎಸ್‌ಪಿ ಮೈತ್ರಿಕೂಟವು 150–165 ಮತ್ತು ಬಿಎಸ್‌ಪಿ 5–10 ಸ್ಥಾನದಲ್ಲಿ ಜಯ ಗಳಿಸಬಹುದು. ಕಾಂಗ್ರೆಸ್‌ಗೆ 2–6 ಸ್ಥಾನಗಳು ದೊರೆಯಬಹುದು.

ನ್ಯೂಸ್‌ ಎಕ್ಸ್‌– ಪೋಲ್‌ಸ್ಟರ್‌ ಸಮೀಕ್ಷೆಯೂ ಸಹ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದಿದೆ. ಬಿಜೆಪಿ ಮೈತ್ರಿಕೂಟ 211–245, ಎಸ್‌ಪಿ ಮೈತ್ರಿಕೂಟ 146–160, ಬಿಎಸ್‌ಪಿ 14–24 ಹಾಗೂ ಕಾಂಗ್ರೆಸ್‌ 4–6 ಕ್ಷೇತ್ರಗಳಲ್ಲಿ ಗೆಲ್ಲಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT