ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೇಜಸ್ವಿ–ಅಖಿಲೇಶ್ ಹೆದ್ದಾರಿ ಜಟಾಪಟಿ

Last Updated 18 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಲಖನೌ/ಬೆಂಗಳೂರು:ಉತ್ತರ ಪ್ರದೇಶದ ಎಕ್ಸ್‌ಪ್ರೆಸ್‌ ಹೆದ್ದಾರಿಗಳು ಈಗ ಚುನಾವಣಾ ಪ್ರಚಾರದ ಸರಕುಗಳಾಗಿವೆ. ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ನಡುವೆ ಟ್ವೀಟ್‌ ಸಮರಕ್ಕೂ ಈ ಎಕ್ಸ್‌ಪ್ರೆಸ್‌ ಹೆದ್ದಾರಿಗಳು ಕಾರಣವಾಗಿವೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಪರವಾಗಿ ಪ್ರಚಾರ ನಡೆಸುತ್ತಿರುವ ತೇಜಸ್ವಿ ಸೂರ್ಯ ಅವರು ಗುರುವಾರ ಒಂದು ಟ್ವೀಟ್ ಮಾಡಿದ್ದರು. ಆಗ್ರಾದಿಂದ ಕನೌಜ್‌ಗೆ ಪ್ರಯಾಣಿಸುವಾಗ ಅವರು ‘ಆಗ್ರಾ–ಲಖನೌ’ ಎಕ್ಸ್‌ಪ್ರೆಸ್‌ ಹೆದ್ದಾರಿಯ ವಿಡಿಯೊವನ್ನುಟ್ವೀಟ್ ಮಾಡಿದ್ದರು. ಟ್ವೀಟ್‌ನಲ್ಲಿ, ‘ಆಗ್ರಾದಿಂದ ಕನೌಜ್‌ಗೆ ಯೋಗಿಜೀ ಅವರ ಎಕ್ಸ್‌ಪ್ರೆಸ್‌ವೇಯಲ್ಲಿ ಪ್ರಯಾಣ. ಯೋಗಿಜೀ ಅವರು ಉಪಯೋಗಿ’ ಎಂದು ಹೇಳಿದ್ದರು.

ಈ ಟ್ವೀಟ್‌ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದ ಅಖಿಲೇಶ್ ಯಾದವ್ ಅವರು, ‘ಈ ಎಕ್ಸ್‌ಪ್ರೆಸ್‌ವೇಯನ್ನು ನಿರ್ಮಿಸಿದವರು ನಾವು’ ಎಂದು ಹೇಳಿದ್ದರು.

ತೇಜಸ್ವಿ ಸೂರ್ಯ ಅವರ ಟ್ವೀಟ್ ಅನ್ನು ರಿಟ್ವೀಟ್‌ ಮಾಡಿದ್ದ ಅಖಿಲೇಶ್ ಯಾದವ್ ಅವರು, ‘ದೀಪದ ಕೆಳಗೆ ಸದಾ ಕತ್ತಲು ಇರುತ್ತದೆ ಎಂಬುದನ್ನು ಕೇಳಿದ್ದೆ. ಬಿಜೆಪಿಯವರ ಅಜ್ಞಾನವನ್ನು ನೋಡಿ, ಈ ಮಾತನ್ನು ‘ಸೂರ್ಯನ ಕೆಳಗೆ ಕತ್ತಲು ಇರುತ್ತದೆ’ ಎಂದು ಹೇಳಬಹುದು. ಈ ಆಗ್ರಾ–ಲಖನೌ ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು ಹೊಗಳುತ್ತಿರುವ ಸೂರ್ಯ ಅವರು ತಿಳಿದುಕೊಳ್ಳಬೇಕಿರುವುದು ಏನೆಂದರೆ, ಇದನ್ನು ಅವರ ‘ಅನುಪಯೋಗಿ’ ಅವರು ನಿರ್ಮಿಸಿಲ್ಲ. ಬದಲಿಗೆ ಅದನ್ನು ನಿರ್ಮಿಸಿದವರು ನಾವು’ ಎಂದು ಹೇಳಿದ್ದಾರೆ.

302 ಕಿ.ಮೀ. ಉದ್ದದ ಆಗ್ರಾ–ಲಖನೌ ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು ಅಖಿಲೇಶ್ ಯಾದವ್ ಅವರ ಸರ್ಕಾರದ ಅವಧಿಯಲ್ಲಿ ನಿರ್ಮಿಸಲಾಗಿತ್ತು. 2016ರ ಅಂತ್ಯದಲ್ಲಿ ಅಖಿಲೇಶ್ ಯಾದವ್ ಅವರು ಈ ಹೆದ್ದಾರಿಯನ್ನು ಉದ್ಘಾಟಿಸಿದ್ದರು. 2017ರ ಫೆಬ್ರುವರಿಯಲ್ಲಿ ಇದು ಸಾರ್ವಜನಿಕರ ಬಳಕೆಗೆ ಮುಕ್ತವಾಗಿತ್ತು.

ಈ ಬಗ್ಗೆ ಸಾರ್ವಜನಿಕರು ಸಹ ತೇಜಸ್ವಿ ಸೂರ್ಯ ಅವರ ಟ್ವೀಟ್‌ ಅನ್ನು ಟೀಕಿಸಿದ್ದಾರೆ. ‘ಮಾನ್ಯ ದಕ್ಷಿಣ ಬೆಂಗಳೂರಿನ ಸಂಸದರೇ. ಈ ಹೆದ್ದಾರಿಯನ್ನು ತೆರಿಗೆದಾರರ ಹಣದಿಂದ ನಿರ್ಮಿಸಲಾಗಿದೆ. ಅದನ್ನು ಬಳಸಲು ಮತ್ತೆ ತೆರಿಗೆ ನೀಡಬೇಕು. ಹೀಗಿದ್ದಾಗ ಅದು ಯೋಗಿಜೀ ಅವರ ಎಕ್ಸ್‌ಪ್ರೆಸ್‌ ಹೆದ್ದಾರಿ ಆಗಿದ್ದು ಹೇಗೆ’ ಎಂದು ಸೌರವ್ ಎಂಬುವವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. ‘ಕರ್ನಾಟಕದ ಹೆದ್ದಾರಿಗಳನ್ನು ಈ ರೀತಿ ಯಾವಾಗ ಮಾಡುತ್ತೀರಿ’ ಎಂದು ಸಂತೋಷ್‌ ಪಿ.ಕೆ. ಎಂಬುವವರು ಟ್ವೀಟ್‌ನಲ್ಲಿ
ಪ್ರಶ್ನಿಸಿದ್ದಾರೆ.

ಅಖಿಲೇಶ್ ಅವರ ಪ್ರತಿಕ್ರಿಯೆಗೆ ತೇಜಸ್ವಿ ಸೂರ್ಯ ಸಹ ಮತ್ತೊಂದು ಟ್ವೀಟ್‌ನಲ್ಲಿ ತೀಕ್ಷವಾಗಿ ತಿರುಗೇಟು ನೀಡಿದ್ದಾರೆ. ‘ಕಾವ್ಯಾತ್ಮಕವಾಗಿ ಬರೆ ಯುವ ಬದಲು, ಉತ್ತರ ಪ್ರದೇಶದ ಜನರಿಗಾಗಿ ನೀವು ಮತ್ತಷ್ಟು ಎಕ್ಸ್‌ಪ್ರೆಸ್‌ ಹೆದ್ದಾರಿಗಳನ್ನು ನಿರ್ಮಿಸಬೇಕಿತ್ತು’ ಎಂದು ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ 1947ರಿಂದ 2017ರವರೆಗೆ ರಾಜ್ಯದಲ್ಲಿ ಒಟ್ಟು 467 ಕಿ.ಮೀ. ಉದ್ದದ ಹೆದ್ದಾರಿಗಳನ್ನು ನಿರ್ಮಿಸಲಾಗಿತ್ತು. 2017ರಿಂದ ಯೋಗಿಅವರ ಸರ್ಕಾರದಲ್ಲಿ 1,321 ಕಿ.ಮೀ. ಉದ್ದದ ಹೆದ್ದಾರಿಗಳನ್ನು ನಿರ್ಮಿಸಲಾಗಿದೆ ಎಂಬ ವಿವರ ಇರುವ ಬಿಜೆಪಿ ಪ್ರಚಾರದ ಪೋಸ್ಟರ್ ಅನ್ನೂ ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT