ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಜನ್‌ ಅಪಹರಣ ಪ್ರಕರಣ: ಎನ್‌ಕೌಂಟರ್‌ನಲ್ಲಿ ಆರೋಪಿಗಳಿಬ್ಬರು ಹತ

ಉತ್ತರ ಪ್ರದೇಶ
Last Updated 22 ಜುಲೈ 2021, 10:33 IST
ಅಕ್ಷರ ಗಾತ್ರ

ಆಗ್ರಾ (ಉತ್ತರಪ್ರದೇಶ): ‘ಹಿರಿಯ ಸರ್ಜನ್‌ವೊಬ್ಬರ ಅಪಹರಣ ಪ್ರಕರಣದ ಸಂಚುಕೋರ ಮತ್ತು ಆತನ ಸಹಚರ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ’ ಎಂದು ಪೊಲೀಸರು ಗುರುವಾರ ತಿಳಿಸಿದರು.

ಜುಲೈ 13ರಂದು ಹಿರಿಯ ಸರ್ಜನ್‌ ಡಾ. ಉಮಾಕಾಂತ್‌ ಗುಪ್ತಾ ಅವರನ್ನು ಬದನ್‌ ಸಿಂಗ್‌ ಮತ್ತು ಅವನ ತಂಡ ಅ‍ಪಹರಿಸಿತ್ತು. ಅಪಹರಣಕಾರರು ₹5 ಕೋಟಿ ಬೇಡಿಕೆ ಇಟ್ಟಿದ್ದರು ಎಂದು ಅವರು ಹೇಳಿದರು.

‘ಜುಲೈ 15ರಂದು ಆಗ್ರಾ ಮತ್ತು ರಾಜಸ್ಥಾನ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ಉಮಾಕಾಂತ್‌ ಗುಪ್ತಾ ಅವರನ್ನು ರಾಜಸ್ಥಾನ ಧೋಲ್‌ಪುರದ ಚಂಬಲ್‌ನಲ್ಲಿ ರಕ್ಷಿಸಿದರು’ ಎಂದು ಅವರು ಮಾಹಿತಿ ನೀಡಿದರು.

‘ಆಗ್ರಾ ಗ್ರಾಮೀಣ ಪ್ರದೇಶದ ಕಚ್ಪುರ ಅರಣ್ಯ ಪ್ರದೇಶದಲ್ಲಿ ಬುಧವಾರ ಮಧ್ಯರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಪ್ರಕರಣದ ಪ್ರಮುಖ ಆರೋಪಿ ಮತ್ತು ಆತನ ಸಹಚರರು ಮೃತಪಟ್ಟಿದ್ದಾರೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಮುನಿರಾಜ್‌ ಜಿ ಹೇಳಿದರು.

‘ಬೈಕ್‌ನಲ್ಲಿ ಬರುತ್ತಿದ್ದ ಸವಾರರನ್ನು ಪೊಲೀಸರು ತಪಾಸಣೆಗಾಗಿ ನಿಲ್ಲಿಸಿದರು. ಆದರೆ ಅವರು ಹೆದರಿ, ಅರಣ್ಯ ಪ್ರದೇಶದತ್ತ ಓಡಿಹೋದರು. ಈ ವೇಳೆ ಪರಾರಿಯಾದ ಇಬ್ಬರೂ ಪ್ರಕರಣದ ಆರೋಪಿಗಳೆಂಬುದು ಬೆಳಕಿಗೆ ಬಂದಿದೆ. ಅರಣ್ಯ ಪ್ರದೇಶದಲ್ಲಿ ಅವರಿಗಾಗಿ ಶೋಧ ನಡೆಸುತ್ತಿದ್ದಾಗ, ಆರೋಪಿಗಳು ಮೊದಲು ಗುಂಡು ಹಾರಿಸಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಆರೋಪಿಗಳು ಗಾಯಗೊಂಡಿದ್ದರು. ಆದರೆ ಆಸ್ಪತ್ರೆ ತಲುಪುವ ಮೊದಲೇ ಅವರಿಬ್ಬರು ಮೃತಪಟ್ಟಿದ್ದಾರೆ’ ಎಂದು ಅವರು ಹೇಳಿದರು.

ಈ ಪ್ರಕರಣದ ಇನ್ನುಳಿದ ಇಬ್ಬರು ಆರೋಪಿಗಳನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT