ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: ಚುನಾವಣಾ ಯಾತ್ರೆಗೆ ಬಿಜೆಪಿ ನಿರ್ಧಾರ

Last Updated 1 ಡಿಸೆಂಬರ್ 2021, 4:40 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯ ಸಿದ್ಧತೆಗೆ ಮುಂದಾಗಿರುವ ಬಿಜೆಪಿ, ಜನರನ್ನು ತಲುಪುವುದಕ್ಕಾಗಿ ರಾಜ್ಯದಾದ್ಯಂತ ಆರು ಯಾತ್ರೆಗಳನ್ನು ನಡೆಸಲು ನಿರ್ಧರಿಸಿದೆ.

ಪಕ್ಷದ ಕಚೇರಿಯಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ವತಂತ್ರದೇವ್ ಸಿಂಗ್‌ ಹಾಗೂ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಮಂಗಳವಾರ ಈ ನಿರ್ಧಾರಕ್ಕೆ ಬರಲಾಗಿದೆ.

‘2022ರ ವಿಧಾನಸಭಾ ಚುನಾವಣೆಗಾಗಿ, ಪಕ್ಷವು ಆರು ಯಾತ್ರೆ ಹಮ್ಮಿಕೊಳ್ಳಲಿದೆ. ಪಕ್ಷದ ಕಾರ್ಯಕರ್ತರು, ಜನತೆಯ ಆಶೀರ್ವಾದದ ಬಲದೊಂದಿಗೆ ಬಿಜೆಪಿಯು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಸರ್ಕಾರ ರಚಿಸಲಿದೆ’ ಎಂದು ಸ್ವತಂತ್ರದೇವ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ಪಕ್ಷದ ಯಾತ್ರೆಗಳಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರಮುಖವಾಗಿ ಬಿಂಬಿಸಲಾಗುವುದು. ಯಾತ್ರೆಗೆ ಸಂಬಂಧಿಸಿದ ಇನ್ನಷ್ಟು ವಿವರಗಳನ್ನು ಅಂತಿಮಗೊಳಿಸಬೇಕಿದೆ ಎಂದು ಪಕ್ಷದ ಕಚೇರಿಯ ಮೂಲಗಳು ತಿಳಿಸಿವೆ. ಪಕ್ಷವು, 2014ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ, ‘ಪರಿವರ್ತನಾ ಯಾತ್ರೆ’ಯ ಹೆಸರಿನಲ್ಲಿ ಸಮಾಜವಾದಿ ಪಕ್ಷದ ವಿರುದ್ಧ ಪ್ರಚಾರ ಆರಂಭಿಸಿತ್ತು.

ರಾಜ್ಯದ 403 ವಿಧಾನಸಭಾ ಸ್ಥಾನಗಳ ಪೈಕಿ, 312 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. 13 ಸ್ಥಾನಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಪಕ್ಷಗಳು ಗೆಲುವು ಸಾಧಿಸಿದ್ದವು.

ಅಪರಾಧಿಗಳಿಗೆ ಶರಣಾದ ಕಾನೂನು–ಸುವ್ಯವಸ್ಥೆ: ಪ್ರಿಯಾಂಕಾ ವಾಗ್ದಾಳಿ

ನವದೆಹಲಿ: ಉತ್ತರ ಪ್ರದೇಶದ ಕಾನೂನು–ಸುವ್ಯವಸ್ಥೆಯ ಬಗ್ಗೆ ಹರಿಹಾಯ್ದಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ದೂರದಿಂದ ಎಲ್ಲವೂ ಚೆನ್ನಾಗಿದೆ ಎಂದು ಸರ್ಕಾರ ಬಿಂಬಿಸಬಹುದು; ಆದರೆ, ವಾಸ್ತವಾಗಿ ಅಪರಾಧಗಳ ಅಂಕಿಸಂಖ್ಯೆಯು ಭಯಾನಕವಾಗಿದೆ’ ಎಂದಿದ್ದಾರೆ.

ಗೋರಖ್‌ಪುರ ಜಿಲ್ಲೆಯಲ್ಲಿ ಏಳು ದಿನಗಳಲ್ಲಿ ಏಳು ಕೊಲೆ ನಡೆದಿವೆ ಎಂಬ ಮಾಧ್ಯಮ ವರದಿಯನ್ನು ಉಲ್ಲೇಖಿಸಿ, ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧ ಅವರು ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.

‘ಮುಖ್ಯಮಂತ್ರಿಯ ಸ್ವಂತ ಕ್ಷೇತ್ರದಲ್ಲಿಯೇ ರಾಜ್ಯದ ಕಾನೂನು–ಸುವ್ಯವಸ್ಥೆಯು ಅಪರಾಧಿಗಳಿಗೆ ಶರಣಾಗಿದೆ. ಇನ್ನು ಉಳಿದ ಪ್ರದೇಶಗಳ ಸ್ಥಿತಿ ಹೇಗಿರಬಹುದು ಎಂಬುದನ್ನು ನೀವೇ ಊಹಿಸಬಹುದು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

‘70 ವರ್ಷಗಳಲ್ಲಿ ಎರಡೇ ಮೃಗಾಲಯ’

ಲಖನೌ: ಉತ್ತರಪ್ರದೇಶದಲ್ಲಿ, 70 ವರ್ಷಗಳ ಅವಧಿಯಲ್ಲಿ ಕೇವಲ ಎರಡೇ ಎರಡು ಮೃಗಾಲಯ ಸ್ಥಾಪಿಸಲು ಸಾಧ್ಯವಾಗಿದೆ ಎಂದು ವಿರೋಧ ಪಕ್ಷಗಳನ್ನು ಟೀಕಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ತಮ್ಮ ಅಧಿಕಾರಾವಧಿಯ ಕಳೆದ ಐದು ವರ್ಷಗಳಲ್ಲಿಯೇ ಗೋರಖಪುರದಲ್ಲಿ ಮೃಗಾಲಯ ಸ್ಥಾಪನೆಯಾಗಿದೆ ಎಂದು ಹೇಳಿದರು.

ಅರಣ್ಯ ಇಲಾಖೆಯ ಪ್ರಯತ್ನದಿಂದ ನೂರು ಕೋಟಿ ಸಸಿಗಳನ್ನೂ ನೆಡಲಾಗಿದೆ ಎಂದರು.

ಇಲ್ಲಿನ ನವಾಬ್‌ ವಾಜಿದ್‌ ಮೃಗಾಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್‌–19 ಸಾಂಕ್ರಾಮಿಕವು ಪ್ರಾಣಿಗಳಿಗೂ ಸಂಕಷ್ಟದ ಸಮಯವಾಗಿತ್ತು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT