ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರದೊಳಗೆ ಇಬ್ಬರ ಜೀವ ಉಳಿಸಿತು ಉತ್ತರ ಪ್ರದೇಶ ಪೊಲೀಸ್–ಫೇಸ್‌ಬುಕ್ ಒಪ್ಪಂದ

Last Updated 5 ಫೆಬ್ರುವರಿ 2023, 15:33 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ಪೊಲೀಸ್‌ ಇಲಾಖೆ ಹಾಗೂ ಮೆಟಾ (ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ನ ಮಾತೃ ಕಂಪನಿ) ನಡುವೆ ನಡೆದಿರುವ ಒಪ್ಪಂದವು ಒಂದು ವಾರದ ಅಂತರದಲ್ಲಿ ಇಬ್ಬರ ಪ್ರಾಣ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಅಂಬೇಡ್ಕರ್‌ನಗರ ಜಿಲ್ಲೆಯ ಕಾಲೇಜು ವಿದ್ಯಾರ್ಥಿನಿ ಹಾಗೂ ಗಾಜಿಯಾಬಾದ್‌ ವ್ಯಕ್ತಿಯೊಬ್ಬರನ್ನು ರಕ್ಷಿಸಲಾಗಿದೆ.

ವಿದ್ಯಾರ್ಥಿನಿ ಇನ್‌ಸ್ಟಾಗ್ರಾಮ್‌ನಲ್ಲಿ ಶುಕ್ರವಾರ (ಜನವರಿ 3 ರಂದು) ರಾತ್ರಿ ಮಾತ್ರೆಗಳ ಚಿತ್ರವನ್ನು ಹಂಚಿಕೊಂಡು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದುಕೊಂಡಿದ್ದರು. ಗಾಜಿಯಾಬಾದ್‌ನ ವ್ಯಕ್ತಿ ಜನವರಿ 31ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ನೇರಪ್ರಸಾರ ಸಹ ಮಾಡಿದ್ದರು. ಈ ವ್ಯಕ್ತಿಯು ವ್ಯವಹಾರದಲ್ಲಿ ₹ 90,000 ನಷ್ಟ ಅನುಭವಿಸಿದ್ದಕ್ಕೆ ಮಾನಸಿಕವಾಗಿ ನೊಂದಿದ್ದರು.

ಈ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಾಕಿಕೊಳ್ಳುತ್ತಿದ್ದಂತೆಯೇ, ಸಾಮಾಜಿಕ ಮಾಧ್ಯಮ ಕ್ಷೇತ್ರದ ದೈತ್ಯ ಕಂಪನಿ ಮೆಟಾ ಪೊಲೀಸರಿಗೆ ಮಾಹಿತಿ ನೀಡಿತ್ತು. ಕೂಡಲೇ ಸ್ಥಳಗಳಿಗೆ ಧಾವಿಸಿದ ಪೊಲೀಸರು ಆತ್ಮಹತ್ಯೆಗಳನ್ನು ತಪ್ಪಿಸಿದ್ದಾರೆ.

ಉತ್ತರ ಪ್ರದೇಶ ಪೊಲೀಸ್‌ ಸಾಮಾಜಿಕ ಮಾಧ್ಯಮ ಕೇಂದ್ರದ ಉಸ್ತುವಾರಿ, ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್‌) ವಿಭಾಗದ ಹೆಚ್ಚುವರಿ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ (ಎಸ್‌ಪಿ) ರಾಹುಲ್‌ ಶ್ರೀವಸ್ತವ್‌ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 'ಉತ್ತರ ಪ್ರದೇಶ ಪೊಲೀಸ್‌ ಇಲಾಖೆ ಹಾಗೂ ಮೆಟಾ ಕಂಪನಿ 2022ರ ಮಾರ್ಚ್‌ನಲ್ಲಿ ಒಪ್ಪಂದ ಮಾಡಿಕೊಂಡಿದೆ. ಅದರ ಪ್ರಕಾರ, ಯಾವುದೇ ವ್ಯಕ್ತಿ ಆತ್ಮಹತ್ಯೆ ಅಥವಾ ತಮಗೆ ತಾವೇ ಹಾನಿ ಮಾಡಿಕೊಳ್ಳುವ ಪೋಸ್ಟ್‌ಗಳನ್ನು ಫೇಸ್‌ಬುಕ್‌ ಇಲ್ಲವೇ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದರೆ, ಉತ್ತರ ಪ್ರದೇಶ ಪೊಲೀಸ್‌ ಇಲಾಖೆಯ ಸಾಮಾಜಿಕ ಮಾಧ್ಯಮ ಕೇಂದ್ರಕ್ಕೆ ತಕ್ಷಣವೇ ಕರೆ ಅಥವಾ ಇಮೇಲ್‌ ಮೂಲಕ ಅಲರ್ಟ್‌ ಸಂದೇಶ ಕಳುಹಿಸುತ್ತದೆ' ಎಂದು ತಿಳಿಸಿದ್ದಾರೆ.

ಇಲ್ಲಿಯವರೆಗೆ ಹತ್ತಕ್ಕೂ ಹೆಚ್ಚು ಜೀವಗಳನ್ನು ಕಾಪಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಅಂಬೇಡ್ಕರ್‌ನಗರ ಪ್ರಕರಣದಲ್ಲಿ, ಮೆಟಾ ಕಂಪನಿಯು ಪೊಲೀಸ್‌ ಸಾಮಾಜಿಕ ಮಾಧ್ಯಮ ಕೇಂದ್ರಕ್ಕೆ ರಾತ್ರಿ 11.37ಕ್ಕೆ ವಿದ್ಯಾರ್ಥಿನಿಯ ವಿವರ ಸಹಿತ ಎಚ್ಚರಿಕೆ ನೀಡಿತ್ತು. 15 ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಆತ್ಮಹತ್ಯೆ ಪ್ರಯತ್ನ ವಿಫಲಗೊಳಿಸಿದ್ದರು.

ಗಾಜಿಯಾಬಾದ್‌ ಪ್ರಕರಣದಲ್ಲಿ, ಅಲರ್ಟ್‌ ಸಂದೇಶ ಬಂದ 13 ನಿಮಿಷಗಳಲ್ಲೇ ಸ್ಥಳಕ್ಕೆ ಬಂದ ಪೊಲೀಸರು, ವ್ಯಕ್ತಿಯನ್ನು ಕಾಪಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT