ಮಂಗಳವಾರ, ಜನವರಿ 18, 2022
15 °C
ಮೂವರು ಮುಖ್ಯಮಂತ್ರಿಗಳ ಬದಲಾವಣೆ ದುಬಾರಿಯಾಗಬಹುದೇ?

ಉತ್ತರಾಖಂಡ ಚುನಾವಣೆ: ಎರಡನೇ ಅವಧಿ ಮೇಲೆ ಬಿಜೆಪಿ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಅಧಿಕಾರವು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಹೊಯ್ದಾಡಿದ್ದು ಈವರೆಗಿನ ಪ್ರವೃತ್ತಿ. ರಾಜ್ಯದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯುವ ಕಡೆಗೆ ಆಡಳಿತಾರೂಢ ಬಿಜೆಪಿ ಗುರಿಯಿಟ್ಟಿದೆ. ಆದರೆ ಒಂದು ಅಧಿಕಾರಾವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಿಸಿದ್ದು ಬಿಜೆಪಿಗೆ ದುಬಾರಿ ಆಗುವ ಸಾಧ್ಯತೆಗಳಿವೆ.

2017ರಲ್ಲಿ 70 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 57 ಸ್ಥಾನಗಳನ್ನು ಗೆಲ್ಲುವ ಮೂಲಕ ಭಾರಿ ಬಹುಮತದೊಂದಿಗೆ ಬಿಜೆಪಿ ಉತ್ತರಾಖಂಡದಲ್ಲಿ ಅಧಿಕಾರಕ್ಕೇರಿತು. ಆದರೆ ಐದು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಿಸಿತು. ಈ ಬೆಳವಣಿಗೆಗಳು ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಗೆ ಕಾರಣವಾಯಿತು.

ಕೇದಾರನಾಥ ಚಾರ್‌ ಧಾಮ ರಸ್ತೆಯ ಪುನರ್‌ನಿರ್ಮಾಣದಂಥ ಅಭಿವೃದ್ಧಿ ಕೆಲಸಗಳನ್ನು ಮುಂದಿರಿಸಿಕೊಂಡು ಬಿಜೆಪಿ ಮತ್ತೊಂದು ಅವಕಾಶವನ್ನು ಕೋರುತ್ತಿದೆ. ಉತ್ತರಾಖಂಡದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳು ಈ ದಶಕವನ್ನು ‘ಉತ್ತರಾಖಂಡದ ದಶಕ’ವನ್ನಾಗಿ ಮಾಡುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರ‍್ಯಾಲಿಗಳಲ್ಲಿ ಹೇಳಿದ್ದಾರೆ.

ಆದರೆ, ಈ ಬಾರಿಯ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷ ಕೂಡ ಸ್ಪರ್ಧಿಸುತ್ತಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಪ್ರಾದೇಶಿಕ ಪಕ್ಷವಾದ ಉತ್ತರಾಖಂಡ ಕ್ರಾಂತಿ ದಳ ಕೂಡಾ ಈ ಬಾರಿ ತನ್ನ ನೆಲೆಯನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದೆ.

ಬಿಜೆಪಿ ಅವಧಿಯಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಿಸಿದ್ದನ್ನೇ ಚುನವಣಾ ಪ್ರಚಾರದ ಪ್ರಮುಖ ಅಂಶವನ್ನಾಗಿ ಕಾಂಗ್ರೆಸ್‌ ಮಾಡಿಕೊಂಡಿದೆ. ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ವಿಫಲವಾಗಿದೆ ಎಂದು ಕಾಂಗ್ರೆಸ್‌ ಚುನಾವಣಾ ಉಸ್ತುವಾರಿ ಹೊತ್ತಿರುವ ಹಿರಿಯ ನಾಯಕ ಹರೀಶ್‌ ರಾವತ್‌ ಅವರು ಜನರೆದುರು ಹೇಳುತ್ತಲೇ ಇದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳನ್ನು ಚುನಾವಣಾ ಪ್ರಚಾರಕ್ಕೆ ಸಮರ್ಪಕವಾಗಿ ಬಳಸುತ್ತಿದ್ದಾರೆ.

ಕಳೆದ 20 ವರ್ಷಗಳಿಂದ ಕಾಂಗ್ರೆಸ್‌ ಮತ್ತು ಬಿಜೆಪಿಗೆ ಅಧಿಕಾರ ನೀಡಿರುವ ಅನುಭವ ಇರುವ ಕಾರಣ ಈ ಬಾರಿ ಎಎಪಿಗೆ ಅವಕಾಶ ನೀಡಿ ಎಂದು ಎಎಪಿ ಕೇಳುತ್ತಿದೆ. ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು, 300 ಯೂನಿಟ್‌ ವಿದ್ಯುತ್‌ ಸೇರಿ ಹಲವಾರು ಉಚಿತ ಸೇವೆ ನೀಡುವ ವಾಗ್ದಾನವನ್ನು ನೀಡಿದ್ದಾರೆ.  ಹೀಗಾಗಿ, ಬಿಜೆಪಿ ಮತ್ತೆ ಅಧಿಕಾರ ಹಿಡಿಯುವುದು ಅಷ್ಟು ಸುಲಭವಿಲ್ಲ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು