ಸೋಮವಾರ, ಸೆಪ್ಟೆಂಬರ್ 27, 2021
28 °C

ಬಿಜೆಪಿ ಸೇರಿದ ಕಾಂಗ್ರೆಸ್ ನಾಯಕ, ಗೆಲುವಿನ ಸೂಚನೆ ಎಂದ ಕೇಸರಿ ಪಕ್ಷದ ನಾಯಕರು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಉತ್ತರಾಖಂಡ ವಿಧಾನಸಭೆಯಲ್ಲಿ ಪುರೋಲಾ ಕ್ಷೇತ್ರವನ್ನು ಪ್ರತಿನಿಧಿಸುವ ದಲಿತ ನಾಯಕ, ಕಾಂಗ್ರೆಸ್ ಶಾಸಕ ರಾಜಕುಮಾರ್ ಅವರು ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದು ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲೂ ತನ್ನ ಗೆಲುವಿನ ಸೂಚನೆಯಾಗಿದೆ ಎಂದು ಕೇಸರಿ ಪಕ್ಷ ಪ್ರತಿಪಾದಿಸಿದೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಪಕ್ಷದ ರಾಜ್ಯಾಧ್ಯಕ್ಷ ಮದನ್ ಕೌಶಿಕ್ ಮತ್ತು ರಾಜ್ಯಸಭಾ ಸಂಸದ ಅನಿಲ್ ಬಲೂನಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ರಾಜಕುಮಾರ್, ಕೇಂದ್ರ ಮತ್ತು ರಾಜ್ಯದಲ್ಲಿನ ಬಿಜೆಪಿ ಸರ್ಕಾರಗಳು ಉತ್ತರಾಖಂಡದಲ್ಲಿ ಎಲ್ಲ ಹವಾಮಾನಕ್ಕೂ ಸೂಕ್ತವಾಗುವ ರಸ್ತೆಗಳು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಮುಂದಾಗಿವೆ ಎಂದು ಶ್ಲಾಘಿಸಿದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ಅವರು, ಕಾಂಗ್ರೆಸ್‌ ದಲಿತರನ್ನು ಸರ್ಕಾರದ ಅನುದಾನಗಳ ಮೇಲೆ ಅವಲಂಬಿಸುವಂತೆ ಮಾಡಿದೆ. ಆದರೆ, ಬಿಜೆಪಿ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಕೆಲಸ ಮಾಡಿದೆ ಎಂದು ಹೇಳಿದರು.

ಈ ಹಿಂದೆಯೂ ಬಿಜೆಪಿಯಲ್ಲಿದ್ದ ರಾಜಕುಮಾರ್, ಕೋವಿಡ್-19 ಸಮಯದಲ್ಲಿ ಬಡವರಿಗೆ ಉಚಿತ ಧಾನ್ಯಗಳನ್ನು ಒದಗಿಸಿದ್ದಕ್ಕಾಗಿ ಮತ್ತು ಇತರ ಕಲ್ಯಾಣ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಮೋದಿ ಸರ್ಕಾರವನ್ನು ಶ್ಲಾಘಿಸಿದರು.

ಇತ್ತೀಚೆಗಷ್ಟೇ, ಪಕ್ಷೇತರ ಶಾಸಕರಾದ ಪ್ರೀತಂ ಸಿಂಗ್ ಪನ್ವಾರ್ ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಧರ್ಮೇಂದ್ರ ಪ್ರಧಾನ್, ರಾಜಕುಮಾರ್ ಅವರನ್ನು ಜನ ನಾಯಕ ಎಂದು ಶ್ಲಾಘಿಸಿದರು ಮತ್ತು ಅವರು ಬಿಜೆಪಿಗೆ ಸೇರಿರುವುದು ಮುಂಬರುವ ಚುನಾವಣೆಯಲ್ಲಿ ಪಕ್ಷದ ಗೆಲುವಿನ ಸೂಚನೆಯಾಗಿದೆ. ಮೋದಿ ಮತ್ತು ಧಾಮಿ ಅವರ ನೇತೃತ್ವದಲ್ಲಿ ಬಿಜೆಪಿ ಗೆಲ್ಲುತ್ತದೆ ಮತ್ತು ರಾಜ್ಯದಲ್ಲಿ 'ಡಬಲ್-ಎಂಜಿನ್' ಸರ್ಕಾರ ಇರುತ್ತದೆ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು