ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದಲ್ಲಿ ಹಿಮಪಾತ: ಸುರಂಗದೊಳಗೆ ಸಿಲುಕಿದವರ ರಕ್ಷಣೆಗೆ ಡ್ರೋನ್ ಬಳಕೆ

Last Updated 10 ಫೆಬ್ರುವರಿ 2021, 10:13 IST
ಅಕ್ಷರ ಗಾತ್ರ

ಡೆಹರಾಡೂನ್: ಉತ್ತರಾಖಂಡದಲ್ಲಿ ಹಿಮಪಾತದಿಂದಾಗಿ ಉಂಟಾದ ದುರಂತದ ನಂತರ ಸುರಂಗದಲ್ಲಿ 25-35 ಜನರು ಸಿಕ್ಕಿಬಿದ್ದಿದ್ದು, ಅವರ ರಕ್ಷಣೆಗಾಗಿ ಡ್ರೋನ್‌ಗಳು ಮತ್ತು ರಿಮೋಟ್ ಸೆನ್ಸಿಂಗ್ ಸಾಧನಗಳನ್ನು ಬಳಸಿಕೊಂಡು ರಕ್ಷಣಾ ತಂಡಗಳು ಬುಧವಾರ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಇನ್ನೂ 170 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಅವರೆಲ್ಲರೂ ಬದುಕುಳಿದಿರುವ ಭರವಸೆಯಲ್ಲೇ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.

ಹಿಮಾಲಯದ ಮೇಲ್ಭಾಗದಲ್ಲಿರುವ ಹಿಮನದಿಯಿಂದಾಗಿ ಅಲಕಾನಂದ ನದಿಯಲ್ಲಿ ಪ್ರವಾಹ ಉಂಟಾಗಿದ್ದರಿಂದ ಎನ್‌ಟಿಪಿಸಿ ಹೈಡಲ್ ಯೋಜನೆಯ ಸ್ಥಳದಲ್ಲಿ ಹಲವರು ಸಿಲುಕಿದ್ದಾರೆ. ರಕ್ಷಣಾ ಪಡೆಗಳು ಭಾನುವಾರದಿಂದಲೂ ನಿರಂತರವಾಗಿ ಶೋಧಕಾರ್ಯಾಚರಣೆ ನಡೆಸುತ್ತಿದ್ದಾರೆ.

ಚಮೋಲಿ ಜಿಲ್ಲೆಯ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಈವರೆಗೆ ವಿವಿಧ ಸ್ಥಳಗಳಲ್ಲಿ 32 ಶವಗಳು ಪತ್ತೆಯಾಗಿವೆ. ಈ ಪೈಕಿ ಎಂಟು ಶವಗಳನ್ನು ಗುರುತಿಸಲಾಗಿದ್ದು, ಇನ್ನೂ 174 ಜನರು ಕಾಣೆಯಾಗಿದ್ದಾರೆ ಎಂದು ಡೆಹರಾಡೂನ್‌ನ ರಾಜ್ಯ ತುರ್ತು ನಿಯಂತ್ರಣ ಕೇಂದ್ರ ತಿಳಿಸಿದೆ.

ನಾಪತ್ತೆಯಾದವರಲ್ಲಿ ಎನ್‌ಟಿಪಿಸಿಯ 480 ಮೆಗಾವ್ಯಾಟ್ ತಪೋವನ-ವಿಷ್ಣುಗಡ ಯೋಜನೆ ಮತ್ತು 13.2 ಮೆಗಾವ್ಯಾಟ್‌ನ ರಿಷಿಗಂಗಾಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುವವರು ಮತ್ತು ಪ್ರವಾಹದಲ್ಲಿ ಕೊಚ್ಚಿಹೋಗಿರುವ ಸ್ಥಳೀಯ ಮನೆಗಳ ಗ್ರಾಮಸ್ಥರು ಸೇರಿದ್ದಾರೆ.

ತಪೋವನದಲ್ಲಿನ 1,500 ಮೀಟರ್ ಸುರಂಗದೊಳಗೆ ನೀರು ನುಗ್ಗಿ ಬಂದಾಗ ಕೆಲಸ ಮಾಡುತ್ತಿದ್ದ 25-35 ಜನರು ಸಿಲುಕಿದ್ದು, ಅವರನ್ನು ತಲುಪಲು ಟನ್‌ಗಳಷ್ಟು ಹೂಳು, ಕೆಸರು ಮತ್ತು ಅವಶೇಷಗಳನ್ನು ಹೊರತೆಗೆಯುವ ಪ್ರಯತ್ನಗಳು ಭರದಿಂದ ಸಾಗಿವೆ.

'ಈ ಸಮಯದಲ್ಲಿ ಡ್ರೋನ್‌ಗಳು ಮತ್ತು ದೂರ ಸಂವೇದಿ ಉಪಕರಣಗಳು ಸೇರಿದಂತೆ ನಮ್ಮ ಬಳಿಯಿರುವ ಎಲ್ಲಾ ಸಂಪನ್ಮೂಲಗಳ ಸಹಾಯದಿಂದ ಸುರಂಗದೊಳಗೆ ಸಿಕ್ಕಿಬಿದ್ದವರನ್ನು ರಕ್ಷಿಸುವತ್ತ ಗಮನ ಹರಿಸಲಾಗಿದೆ' ಎಂದು ಉತ್ತರಾಖಂಡ ಪೊಲೀಸ್ ಮುಖ್ಯ ವಕ್ತಾರ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ನಿಲೇಶ್ ಆನಂದ್ ಭರ್ನೆ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಸುರಂಗದೊಳಗಿನ ಹೂಳು ಒಣಗಿರುವುದು ಮತ್ತು ಗಟ್ಟಿಯಾಗಿರುವುದರಿಂದಾಗಿ ಭಗ್ನಾವಶೇಷಗಳ ಮೂಲಕ ಕೊರೆಯುವುದು ಹೆಚ್ಚು ಕಷ್ಟಕರವಾಗಿದೆ. ಹೀಗಿದ್ದರೂ ರಕ್ಷಣಾ ತಂಡಗಳು ಇಲ್ಲಿಯವರೆಗೆ ಸುರಂಗದ ಒಳಗೆ 80 ಮೀಟರ್ ಪ್ರಗತಿ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಒಳಗೆ ಸಿಕ್ಕಿಬಿದ್ದವರನ್ನು ತಲುಪಲು ಕನಿಷ್ಠ 100 ಮೀಟರ್‌ಗಳಷ್ಟು ದೂರಕ್ಕೆ ಸಾಗಬೇಕಿದೆ ಎಂದು ಡಿಐಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT