ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದಲ್ಲಿ ಬಿಜೆಪಿಗೆ ಮತ್ತೆ ಗದ್ದುಗೆ

Last Updated 10 ಮಾರ್ಚ್ 2022, 20:35 IST
ಅಕ್ಷರ ಗಾತ್ರ

ಡೆಹರಾಡೂನ್: ದೇವಭೂಮಿ ಉತ್ತರಾಖಂಡದಲ್ಲಿ ಮತದಾರರು ಮತ್ತೆ ಬಿಜೆಪಿಯ ಕೈ ಹಿಡಿದಿದ್ದಾರೆ. ಮುಖ್ಯಮಂತ್ರಿಪುಷ್ಕರ್‌ ಸಿಂಗ್‌ ದಾಮಿ ನೇತೃತ್ವದಲ್ಲಿ ಜನಾದೇಶ ಪಡೆಯಲು ಹೊರಟಿದ್ದ ಬಿಜೆಪಿಗೆ ನಿರೀಕ್ಷೆಯಂತೆ ಮತ್ತೆ ಅಧಿಕಾರ ಗದ್ದುಗೆ ದಕ್ಕಿದೆ. ಆದರೆ, ಪುಷ್ಕರ್‌ ಸಿಂಗ್‌ ದಾಮಿಗೆ ಸೋಲಿನ ರುಚಿ ತೋರಿಸಿರುವ ಮತದಾರರು ಹೊಸ ನಾಯಕ ಬೇಕೆನ್ನುವ ಸಂದೇಶ ನೀಡಿದಂತಿದೆ.

ರಾಜ್ಯದಲ್ಲಿ ಒಂದೇ ಪಕ್ಷ ಸತತ ಎರಡನೇ ಬಾರಿ ಅಧಿಕಾರ ಚುಕ್ಕಾಣಿ ಹಿಡಿದ ನಿದರ್ಶನವಿರಲಿಲ್ಲ. ಆದರೆ, ಬಿಜೆಪಿ ಈ ಪ್ರವೃತ್ತಿಯನ್ನು ಮುರಿದಿದೆ.

70 ಸ್ಥಾನಗಳ ವಿಧಾನಸಭೆಯಲ್ಲಿ ಅಧಿಕಾರಕ್ಕೇರಲುರಾಜಕೀಯ ಪಕ್ಷಗಳಿಗೆ 36 ಸೀಟುಗಳ ಬಹುಮತ ಅಗತ್ಯವಿತ್ತು. ಬಿಜೆಪಿ 48 ಸ್ಥಾನ, ಕಾಂಗ್ರೆಸ್‌ 15, ಬಿಎಸ್‌ಪಿ 2 ಸ್ಥಾನ ಪಡೆದಿದ್ದು, ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 11 ಕಡೆ ಗೆಲುವು ಕಂಡಿತ್ತು.ಈ ಬಾರಿ 7 ಸ್ಥಾನ ಹೆಚ್ಚಿಸಿಕೊಂಡರೂ, ಎರಡನೇ ಸ್ಥಾನದಲ್ಲೇ ಉಳಿದು ಪ್ರತಿಪಕ್ಷದ ಸ್ಥಾನವೇ ‘ಕಾಯಂ’ ಎನ್ನುವಂತಾಗಿದೆ.

‌ನಿಚ್ಚಳ ಬಹುಮತವನ್ನುಬಿಜೆಪಿ ಪಡೆದಿದೆಯಾದರೂ ಈ ಬಾರಿ 9 ಸ್ಥಾನಗಳನ್ನು ಅದು ಕಳೆದುಕೊಂಡಿರುವುದು ಗಮನಿಸಬೇಕಾದ ಸಂಗತಿ. ಶೇ 4.64ರಷ್ಟು ಮತದಾರರು ಬಿಜೆಪಿಯಿಂದ ದೂರ ಸರಿದಿದ್ದಾರೆ. ಆ ಪಕ್ಷದ ನಾಯಕರು, ಇದು ಎಚ್ಚರಿಕೆಯ ಗಂಟೆ ಎನ್ನುವುದನ್ನು ಮರೆಯುವಂತಿಲ್ಲ.

ಇನ್ನು ಮಾಯಾವತಿ ನೇತೃತ್ವದ ಬಿಎಸ್‌ಪಿಗೆ ಎರಡು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಿಕ್ಕಿದೆ. ಆದರೆ, ಇದೇ ಮೊದಲ ಬಾರಿಗೆ ಅಖಾಡಕ್ಕೆ ಇಳಿದಿದ್ದ ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿ (ಎಎಪಿ)ಯದು ಶ್ಯೂನ್ಯ ಸಂಪಾದನೆ.

2017ರ ಚುನಾವಣೆಯಲ್ಲಿ ಬಿಜೆಪಿ 57 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಶೇ 46.51ರಷ್ಟು ಮತಗಳು ದೊರಕಿದ್ದವು.ಈ ಬಾರಿ ಬಿಜೆಪಿಗೆ ಶೇ 44.2, ಕಾಂಗ್ರೆಸ್‌ಗೆ ಶೇ 39, ಬಿಎಸ್‌ಪಿಗೆ ಶೇ 5.1, ಎಎಪಿಗೆ ಶೇ 3.3ಹಾಗೂ ಪಕ್ಷೇತರರಿಗೆ ಶೇ 8.4 ಮತ ಹಂಚಿಕೆಯಾಗಿದೆ.

ಉತ್ತರಾಖಂಡದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದ ಹೋರಾಟ ನಡೆಸಲಿವೆ ಮತ್ತು ಅತಂತ್ರ ಫಲಿತಾಂಶ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಕೆಲವು ಮತದಾನೋತ್ತರ ಸಮೀಕ್ಷೆಗಳು ಹೇಳಿದ್ದವು. ಇನ್ನು ಕೆಲವು ಸಮೀಕ್ಷೆಗಳು ಬಿಜೆಪಿ ಪುನಾ ಅಧಿಕಾರಕ್ಕೆ ಬರಲಿದೆ ಎಂದಿದ್ದವು.

ಪ್ರಮುಖರ ಸೋಲು–ಗೆಲುವು

ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ ಅವರುಲಾಲ್‌ಕೌನ್‌ ವಿಧಾನಸಭಾ ಕ್ಷೇತದಲ್ಲಿ ಬಿಜೆಪಿ ಅಭ್ಯರ್ಥಿ ಮೋಹನ್‌ ಬಿಶಾತ್‌ ವಿರುದ್ಧ 14 ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. 2014ರಿಂದ 2017ರವರೆಗೂ ಉತ್ತರಾಖಂಡದ ಮುಖ್ಯಮಂತ್ರಿಯಾಗಿದ್ದ ಹರೀಶ್‌ ರಾವತ್‌ ಅವರು ಮತದಾರರ ವಿಶ್ವಾಸ ಗಳಿಸಲು ವಿಫಲರಾಗಿದ್ದಾರೆ.

ಈ ಹಿಂದಿನ ಸರ್ಕಾರದಲ್ಲಿಸ್ಪೀಕರ್ ಆಗಿದ್ದ ಬಿಜೆಪಿಯ ಪ್ರೇಮ್ ಚಂದ್ ಅಗರ್‌ವಾಲ್‌ ಮರು ಆಯ್ಕೆಯಾದ ಪ್ರಮುಖರಲ್ಲಿ ಒಬ್ಬರು. ಇವರು ಋಷಿಕೇಶದಲ್ಲಿ ಕಾಂಗ್ರೆಸ್‌ನ ಜಯೇಂದ್ರ ಚಂದ್ ರಾಮೋಲಾ ಅವರನ್ನು 19,057 ಮತಗಳಿಂದ ಸೋಲಿಸಿದರು.

ರಾಯ್‌ಪುರದಿಂದ ಬಿಜೆಪಿಯ ಉಮೇಶ್ ಶರ್ಮಾ ಕೌ ಅವರು ಕಾಂಗ್ರೆಸ್‌ನ ಹೀರಾ ಸಿಂಗ್ ಬಿಶ್ತ್ ಅವರನ್ನು 3,0052 ಮತಗಳಿಂದ ಸೋಲಿಸಿದರು.

ಮಸ್ಸೂರಿಯಲ್ಲಿ ಬಿಜೆಪಿಯ ಗಣೇಶ್ ಜೋಶಿ ಅವರು ಕಾಂಗ್ರೆಸ್‌ನ ಗೋದಾವರಿ ಥಾಪ್ಲಿ ಅವರನ್ನು 15,325 ಮತಗಳಿಂದ ಸೋಲಿಸಿದರೆ, ಬಿಜೆಪಿಯ ಖಾಜನ್ ದಾಸ್ ಅವರು ರಾಜ್‌ಪುರ ರಸ್ತೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರಾಜ್‌ಕುಮಾರ್ ಅವರನ್ನು 11,163 ಮತಗಳಿಂದ ಸೋಲಿಸಿದರು.

ಕಾಂಗ್ರೆಸ್‌ನ ಮಮತಾ ರಾಕೇಶ್ ಅವರು ಭಗ್ವಾಪುರ ಕ್ಷೇತ್ರದಲ್ಲಿ ತಮ್ಮ ಸೋದರ ಮಾವ ಬಿಎಸ್‌ಪಿಯ ಸುಬೋಧ್ ರಾಕೇಶ್ ಅವರನ್ನು 4,811 ಸ್ಥಾನಗಳಿಂದ ಸೋಲಿಸಿದರೆ, ಕಾಂಗ್ರೆಸ್‌ನ ಆದೇಶ್ ಸಿಂಗ್ ಚೌಹಾಣ್ ಅವರು ಜಸ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ಶೈಲೇಂದ್ರ ಮೋಹನ್ ಸಿಂಘಾಲ್ ಅವರನ್ನು4,172 ಮತಗಳಿಂದ ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT