ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ, ಗೋವಾ ವಿಧಾನಸಭಾ ಚುನಾವಣೆ: ನಾಳೆ ಮತದಾನ

Last Updated 13 ಫೆಬ್ರುವರಿ 2022, 12:39 IST
ಅಕ್ಷರ ಗಾತ್ರ

ಪಣಜಿ/ ಡೆಹ್ರಾಡೂನ್‌: ಉತ್ತರಾಖಂಡದ 70 ವಿಧಾನಸಭಾ ಕ್ಷೇತ್ರಗಳು ಮತ್ತು 40 ವಿಧಾನಸಭಾ ಕ್ಷೇತ್ರಗಳಿರುವ ಗೋವಾದಲ್ಲಿ ಸೋಮವಾರ ಮತದಾನ ನಡೆಯಲಿದೆ. ಶನಿವಾರ ಸಂಜೆ ವರೆಗೂ ರಾಜಕೀಯ ಪಕ್ಷಗಳು ಮನೆಮನೆಗೆ ತೆರಳಿ ಪ್ರಚಾರ, ರ್‍ಯಾಲಿಗಳ ಮೂಲಕ ಹಾಗೂ ವರ್ಚುವಲ್‌ ವ್ಯವಸ್ಥೆಯಲ್ಲಿ ಪ್ರಚಾರ ನಡೆಸಿವೆ.

ಉತ್ತರಾಖಂಡದ 13 ಜಿಲ್ಲೆಗಳ 70 ಕ್ಷೇತ್ರಗಳಲ್ಲಿ 152 ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 632 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬೆಳಿಗ್ಗೆ 8ರಿಂದ ಸಂಜೆ 6ರ ವರೆಗೂ ಮತದಾನ ನಡೆಯಲಿದೆ. 2000ರಲ್ಲಿ ಉತ್ತರಾಖಂಡ ರಾಜ್ಯವಾಗಿ ರೂಪಗೊಂಡ ನಂತರ ಐದನೇ ಬಾರಿಗೆ ವಿಧಾನಸಭೆ ಚುನವಾಣೆ ನಡೆಯುತ್ತಿದೆ. ಮತದಾನ ನಡೆಸಲು 81 ಲಕ್ಷ ಜನರು ಅರ್ಹರಾಗಿದ್ದಾರೆ.

2017ರ ಚುನಾವಣೆಯಲ್ಲಿ ಉತ್ತರಾಖಂಡದಲ್ಲಿ ಬಿಜೆಪಿ 70 ಸ್ಥಾನಗಳ ಪೈಕಿ 57 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು ಹಾಗೂ ಕಾಂಗ್ರೆಸ್‌ ಕೇವಲ 11 ಸ್ಥಾನಗಳಲ್ಲಿ ಗೆದ್ದಿತ್ತು. ಸ್ವತಂತ್ರ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದರು.

ಉತ್ತರಾಖಂಡ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನಡೆಯುತ್ತಿದ್ದ ಪೈಪೋಟಿಗೆ ಈ ಬಾರಿ ಎಎಪಿ ಮೂಲಕ ಹೆಚ್ಚುವರಿ ಸವಾಲು ಎದುರಾಗಿದೆ. ಎಲ್ಲ 70 ಕ್ಷೇತ್ರಗಳಲ್ಲಿ ಎಎಪಿ ಸಹ ಸ್ಪರ್ಧಿಸುತ್ತಿದೆ.

ಗೋವಾದಲ್ಲಿ 301 ಅಭ್ಯರ್ಥಿಗಳು

ಕಾಂಗ್ರೆಸ್‌, ಬಿಜೆಪಿ ಜೊತೆಗೆ ಎಎಪಿ ಹಾಗೂ ಟಿಎಂಸಿ ಜಿದ್ದಾಜಿದ್ದಿನ ಹೋರಾಟಕ್ಕೆ ಮುಂದಾಗಿರುವ ಗೋವಾದಲ್ಲಿ ಒಟ್ಟು 301 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಒಟ್ಟು 11 ಲಕ್ಷ ಜನರು ಮತದಾನ ನಡೆಸಲು ಅರ್ಹರಾಗಿದ್ದಾರೆ.

ಗೋವಾದಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಪೂರ್ಣ ಮಹಿಳಾ ಸಿಬ್ಬಂದಿ ಒಳಗೊಂಡಿರುವ 100 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಹಾಗೂ ಕೋವಿಡ್‌–19 ನಿಯಂತ್ರಣದ ದೃಷ್ಟಿಯಿಂದ ಮತ ಕೇಂದ್ರಗಳಲ್ಲಿ ಮತದಾರರಿಗೆ ಕೈಗವಸು ನೀಡಲಾಗುತ್ತದೆ ಎಂದು ಚುನಾವಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

2017ರ ಚುನಾವಣೆಯಲ್ಲಿ ಗೋವಾದಲ್ಲಿ ಶೇಕಡ 82.56ರಷ್ಟು ಮತದಾನ ನಡೆದಿತ್ತು. ಆಗ ಕಾಂಗ್ರೆಸ್‌ 17 ಸ್ಥಾನಗಳಲ್ಲಿ ಹಾಗೂ ಬಿಜೆಪಿ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿಯು ಪ್ರಾದೇಶಿಕ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಸರ್ಕಾರ ರಚಿಸಿತ್ತು.

ಈ ಬಾರಿ ಬಿಜೆಪಿ ಚುನಾವಣೆಗೂ ಮುನ್ನ ಮೈತ್ರಿಗೆ ಮುಂದಾಗಿಲ್ಲ. ಕಾಂಗ್ರೆಸ್‌ ಮತ್ತು ಗೋವಾ ಫಾರ್ವರ್ಡ್‌ ಪಾರ್ಟಿ (ಜಿಎಫ್‌ಪಿ) ಮೈತ್ರಿ ಮಾಡಿಕೊಂಡಿದ್ದರೆ, ಟಿಎಂಸಿ ಮತ್ತು ಮಹಾರಾಷ್ಟ್ರವಾದಿ ಗೋಮಂಟಕ್‌ ಪಾರ್ಟಿ (ಎಂಜಿಪಿ) ಜೊತೆಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿವೆ. ಶಿವಸೇನಾ ಮತ್ತು ಎನ್‌ಸಿಪಿ ಸಹ ಮೈತ್ರಿ ಘೋಷಿಸಿವೆ. ಎಎಪಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ.

ಗೋವಾದಲ್ಲಿ ಸ್ಪರ್ಧಿಸಿರುವ ಪ್ರಮುಖ ಅಭ್ಯರ್ಥಿಗಳು

ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ (ಬಿಜೆಪಿ), ವಿರೋಧ ಪಕ್ಷದ ನಾಯಕ ದಿಗಂಬರ್‌ ಕಾಮತ್‌ (ಕಾಂಗ್ರೆಸ್‌), ಮಾಜಿ ಮುಖ್ಯಮಂತ್ರಿ ಚರ್ಚಿಲ್‌ ಅಲೆಮಾವೊ (ಟಿಎಂಸಿ), ರವಿ ನಾಯ್ಕ್‌ (ಬಿಜೆಪಿ), ಲಕ್ಷ್ಮಿಕಾಂತ್ ಪರ್ಸೇಕರ್‌ (ಸ್ವತಂತ್ರ ಅಭ್ಯರ್ಥಿ), ಮಾಜಿ ಉಪ ಮುಖ್ಯಮಂತ್ರಿ ವಿಜಯ್‌ ಸರ್ದೇಸಾಯಿ (ಜಿಎಫ್‌ಪಿ) ಮತ್ತು ಸುದಿನ್‌ ಧಾವಳಿಕರ್‌ (ಎಂಜಿಪಿ), ದಿವಂಗತ ಮನೋಹರ್‌ ಪರ್‍ರೀಕರ್‌ ಅವರ ಮಗ ಉತ್ಪಲ್‌ ಪರ್‍ರೀಕರ್‌ ಹಾಗೂ ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಅಮಿತ್‌ ಪಾಲೇಕರ್‌ ಕಣದಲ್ಲಿರುವ ಪ್ರಮುಖ ಮುಖಂಡರು.

ಉತ್ತರಾಖಂಡದಲ್ಲಿ ಸ್ಪರ್ಧಿಸಿರುವ ಪ್ರಮುಖ ಅಭ್ಯರ್ಥಿಗಳು

ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ, ಸಚಿವರಾದ ಸತ್ಪಾಲ್‌ ಮಹಾರಾಜ್‌, ಸುಬೋಧ್‌ ಉನಿಯಾಲ್‌, ಅರ್‌ವಿಂದ್ ಪಾಂಡೆ, ಧನ್‌ ಸಿಂಗ್‌ ರಾವತ್‌, ರೇಖಾ ಆರ್ಯಾ ಹಾಗೂ ಮದನ್‌ ಕೌಶಿಕ್‌ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT