ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ಷಾತ್ ವರದಿ | ಪುನರ್ವಸತಿ ಕೇಂದ್ರದಲ್ಲಿ ಸಂತ್ರಸ್ತರ ಆರ್ತನಾದ

ಜೋಶಿಮಠದ ಮನೆಗಳ ಮೇಲೆ ‘ಅಸುರಕ್ಷಿತ’ ಫಲಕ l ಮೂಲಸೌಕರ್ಯ ಇಲ್ಲದೆ ಸಂತ್ರಸ್ತರ ಪರದಾಟ
Last Updated 15 ಜನವರಿ 2023, 23:58 IST
ಅಕ್ಷರ ಗಾತ್ರ

ಜೋಶಿಮಠ (ಉತ್ತರಾಖಂಡ): ಪಟ್ಟಣದ ನಿವಾಸಿ ಪ್ರಕಾಶ್‌ ಬೊಟಿಯಾಲ್ ಅವರ ಸ್ವಂತ ಸೂರು ಹೊಂದುವ ಕನಸು ಕೆಲವು ತಿಂಗಳ ಹಿಂದೆಯಷ್ಟೇ ಸಾಕಾರಗೊಂಡಿತ್ತು. ಮನೆ ಮಂದಿಯಲ್ಲಾ ಸಂಭ್ರಮದಲ್ಲಿದ್ದರು. ಅವರ ಕನಸೆಲ್ಲ ನುಚ್ಚುನೂರು ಆಗುವ ವಿದ್ಯಮಾನ ಜನವರಿ 2ರ ರಾತ್ರಿ ಘಟಿಸಿತು.

ಮನೆಯವರೆಲ್ಲ ಮಲಗಿದ್ದ ವೇಳೆ ಮಧ್ಯರಾತ್ರಿ ಜೋರಾದ ಸದ್ದು ಕೇಳಿಸಿತು. ಬೊಟಿಯಾಲ್ ಎದ್ದು ಮನೆಯಲ್ಲೆಲ್ಲ ಹುಡುಕಾಡಿದರು, ತಡಕಾಡಿದರು. ಮನೆಯ ಎರಡು ಕೊಠಡಿಗಳಲ್ಲಿ ದೊಡ್ಡ ದೊಡ್ಡ ಬಿರುಕುಗಳು ಕಾಣಿಸಿದವು. ಒಂದು ಕ್ಷಣ ಆಘಾತಕ್ಕೆ ಒಳಗಾದರು. ಮನೆ ಮಂದಿಗೆ ಈಗಲೇ ಹೇಳಿ ಅವರನ್ನು ನೋವಿನ ದವಡೆಗೆ ನೂಕುವುದು ಬೇಡ ಎಂದು ಅವರು ಹಾಸಿಗೆಯಲ್ಲಿ ಒರಗಿದರು. ನಿದ್ರೆ ದೂರವಾಯಿತು. ಬೆಳಿಗ್ಗೆ ಎದ್ದ ನಂತರ ಮನೆ ಮಂದಿಗೆಲ್ಲ ವಿಷಯವನ್ನು ಸಾವಧಾನದಿಂದ ಹೇಳಿದರು. ಮನೆ ರಿಪೇರಿ ಮಾಡಿಸೋಣ ಎಂದು ಧೈರ್ಯ ತುಂಬಿದರು. ಸುತ್ತಮುತ್ತಲಿನ ಹಲವು ಮನೆಗಳಲ್ಲಿ ಬಿರುಕು ಬಿಟ್ಟಿರುವುದು ಸ್ವಲ್ಪ ಹೊತ್ತಿನಲ್ಲಿ ಗೊತ್ತಾಯಿತು. ನೊಂದ ನಿವಾಸಿಗಳು ಪರಸ್ಪರ ಸಾಂತ್ವನ ಹೇಳಿಕೊಂಡರು. ಜನವರಿ 4ರ ವೇಳೆಗೆ ಮತ್ತೆರಡು ಕೊಠಡಿಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಈ ಕಟ್ಟಡ ‘ಅಸುರಕ್ಷಿತ’ ಎಂದು ಫಲಕ ಅಂಟಿಸಿ ಹೋದರು. ಕುಟುಂಬ ಸದಸ್ಯರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದರು.

ಜೋಶಿ ಮಠದ ನಗರಪಾಲಿಕೆಯ ಪುನರ್ವಸತಿ ಕೇಂದ್ರದಲ್ಲಿ ಶನಿವಾರ ಮಧ್ಯಾಹ್ನ ಮಾತಿಗೆ ಸಿಕ್ಕ ಪ್ರಕಾಶ್ ತಮ್ಮ ಕಥೆಯನ್ನು ಹೇಳುತ್ತಾ ಹೋದರು. ಟೇಲರ್‌ ಆಗಿರುವ ಪ್ರಕಾಶ್‌ಗೆ ಈಗ 52 ವರ್ಷ. ‘10 ದಿನಗಳಲ್ಲಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇವೆ. ತಡವಾಗಿ ಮಲಗುತ್ತಿದ್ದೆವು. ಸಣ್ಣ ಸದ್ದು ಆದರೂ ರಕ್ತದೊತ್ತಡ ಏರುತ್ತಿತ್ತು. ಆದರೂ, ಯಾವುದೇ ‍‍ಪರಿಸ್ಥಿತಿ ಎದುರಾದರೂ ಧೃತಿಗೆಡುವುದು ಬೇಡ ಎಂಬ ನಿರ್ಧಾರಕ್ಕೆ ಬಂದೆವು. ಎಲ್ಲವೂ ಅನಿಶ್ಚಿತ. ಇಲ್ಲಿ ಇನ್ನೆಷ್ಟು ದಿನ ಕಳೆಯಬೇಕು ಎಂಬುದು ಗೊತ್ತಿಲ್ಲ’ ಎಂದು ಹೇಳಿಕೊಂಡರು.

ಇಲ್ಲಿನ ಬಟ್ಟೆ ಅಂಗಡಿ ಮಾಲೀಕ ಸೂರಜ್‌ ಅವರ ಮನೆಗೂ ‘ಅಸುರಕ್ಷಿತ’ ಪಟ್ಟಿ ಬಿದ್ದಿದೆ. ಅವರು ಪುಟ್ಟ ಮಗು ಹಾಗೂ ಪತ್ನಿಯೊಂದಿಗೆ ಕೇಂದ್ರದಲ್ಲಿ ಇದ್ದಾರೆ. ಹಗಲು ಹೊತ್ತಿನಲ್ಲಿ ಅಂಗಡಿ ತೆರೆಯುತ್ತಾರೆ. ಸಂಜೆ ಕೇಂದ್ರಕ್ಕೆ ಬರುತ್ತಾರೆ. ಕೇಂದ್ರಕ್ಕೆ ಅಹವಾಲು ಆಲಿಸಲು ಬಂದಿದ್ದ ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳ ಬಳಿ ತಮ್ಮ ಕಷ್ಟ ಹೇಳಿಕೊಂಡರು. ‘ಸಣ್ಣ ಮಗುವಿನ ಜೊತೆಗೆ ಕೊರೆಯುವ ಚಳಿಯಲ್ಲಿ ಇಲ್ಲಿ ಇರಲು ಸಾಧ್ಯವೇ’ ಎಂದು ಪ್ರಶ್ನಿಸಿದರು. ಶಾಸಕರದ್ದು ಮೌನವೇ ಉತ್ತರವಾಗಿತ್ತು. ದಂಪತಿಯ ಕೈಯಿಂದ ಮಗುವನ್ನು ಎತ್ತಿಕೊಂಡು ಸಮಾಧಾನಪಡಿಸುವ ಪ್ರಯತ್ನವನ್ನೂ ಮಾಡಿದರು. ‘ಒಂದೆ ರಡು ದಿನಗಳಲ್ಲಿ ನಿಮಗೆ ಎಲ್ಲ ವ್ಯವಸ್ಥೆ ಕಲ್ಪಿಸಲಿದ್ದೇವೆ’ ಎಂದು ಅಧಿಕಾರಿಗಳು ಭರವಸೆಯ ಮಾತುಗಳನ್ನು ಆಡಿದರು. ‘ನಮ್ಮ ಜತೆಗೆ ನೀವೂ ಇಲ್ಲಿ. ಆಗ ನಮ್ಮ ಸಂಕಷ್ಟ ನಿಮಗೆ ಅರಿವಾಗುತ್ತದೆ’ ಎಂದು ಸೂರಜ್‌ ಕಟುವಾಗಿ ಹೇಳಿದರು.

ಸಿಂಹಧಾರ್ ನಿವಾಸಿ ಜ್ಯೋತಿ ಅವರು ತಂದೆ ಹಾಗೂ ಇಬ್ಬರು ಸಹೋದರರ ಜತೆಗೆ ಪುನರ್ವಸತಿ ಕೇಂದ್ರದಲ್ಲಿದ್ದಾರೆ. ‘2008ರಲ್ಲಿ ತಾಯಿ ನಿಧನರಾದರು. ತಂದೆಗೆ ಕೆಲಸ ಇಲ್ಲ. ಒಬ್ಬ ಸಹೋದರ 10ನೇ ತರಗತಿ ವಿದ್ಯಾರ್ಥಿ. ಇನ್ನೊಬ್ಬ ಸಹೋದರ ಶಾಲೆ ಬಿಟ್ಟು ಕೆಲಸದ ತಲಾಶೆಯಲ್ಲಿದ್ದಾನೆ. ನಾನು 18ನೇ ವಯಸ್ಸಿನಲ್ಲೇ ಮನೆಯ ಜವಾಬ್ದಾರಿ ಹೊತ್ತುಕೊಂಡೆ. ಸ್ವಲ್ಪ ಕೃಷಿ ಭೂಮಿ ಇತ್ತು. ಅದು ಸಹ ಕೈ ಬಿಟ್ಟು ಹೋಯಿತು. ಗೃಹೋಪಯೋಗಿ ಸಾಮಗ್ರಿಗಳು ಪಾಳು ಬಿದ್ದ ಮನೆಯಲ್ಲಿ ಬಿದ್ದಿವೆ. ಬದುಕು ಅಂಧಕಾರದತ್ತ ಸಾಗುತ್ತಿದೆ’ ಎಂದು ತಾಪತ್ರಯ ತೋಡಿಕೊಂಡರು.

‌ಜೋಶಿಮಠದಲ್ಲಿ ಎರಡು ದಿನ ಮಳೆ ಬಿದ್ದಿದೆ. ತಾ‍ಪಮಾನ 4ಕ್ಕೆ ಇಳಿದಿದೆ. ಔಲಿ ಹಾಗೂ ಜೋಶಿಮಠದಲ್ಲಿ ಹಿಮ ಬೀಳಲಾರಂಭಿಸಿದೆ. ಇಂತಹ ಥರಗುಟ್ಟುವ ಚಳಿಯ ವಾತಾವರಣದಲ್ಲಿ ಪುನರ್ವಸತಿ ಕೇಂದ್ರದಲ್ಲಿ ಅಗತ್ಯ ಮೂಲಸೌಕರ್ಯ ಇಲ್ಲದೆ ಸಂತ್ರಸ್ತರು ನಲುಗಿದ್ದಾರೆ. ರೊಟ್ಟಿ ಬಿಟ್ಟು ಇಲ್ಲೇನೂ ಕೊಡುತ್ತಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ಸಿಬ್ಬಂದಿಯನ್ನು ಹಲವು ಮಂದಿ ತರಾಟೆಗೆ ತೆಗೆದುಕೊಂಡರು.

ಸಂತ್ರಸ್ತ ಜನರಿಗೆ ಪುನರ್ವಸತಿ ಕಲ್ಪಿಸಲು ಚಮೋಲಿ ಜಿಲ್ಲಾಡಳಿತ ಹಲವು ಹೋಟೆಲ್‌ಗಳನ್ನು ವಶಕ್ಕೆ ಪಡೆದಿದೆ. ಇನ್ನಷ್ಟು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡರೆ ಅವರನ್ನು ಎಲ್ಲಿ ಇರಿಸುವುದು ಎಂಬ ಚಿಂತೆಯೂ ಜಿಲ್ಲಾಡಳಿತಕ್ಕೆ ಆರಂಭವಾಗಿದೆ. ಹಲವು ಹೋಟೆಲ್‌ಗಳಲ್ಲಿ ಪತ್ರಕರ್ತರು ತುಂಬಿಕೊಂಡಿದ್ದಾರೆ. ಮನೆಗಳ ತೆರವು ಕಾರ್ಯಾಚರಣೆ ಹಾಗೂ ನಿವಾಸಿಗಳ ಸ್ಥಳಾಂತರಕ್ಕೆ ಬಂದ ಅಧಿಕಾರಿಗಳು ಸರ್ಕಾರಿ ವಸತಿಗೃಹಗಳಲ್ಲಿ ಸೇರಿಕೊಂಡಿದ್ದಾರೆ. ಇಷ್ಟೆಲ್ಲ ಆದರೂ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿಲ್ಲ. ಹೋಟೆಲ್‌ಗಳಲ್ಲಿ ರೂಮ್‌ಗಳು ಖಾಲಿ ಇಲ್ಲ ಎಂಬ ಫಲಕಗಳು ಬಿದ್ದಿವೆ. ಇದನ್ನು ನೋಡಿ ಬೇಸರದಿಂದ ಹಿಂತಿರುಗುವವರು ಇದ್ದಾರೆ. ಯಾತ್ರಾಸ್ಥಳಕ್ಕೆ ಏನಾಗಿದೆ ಎಂದು ನೋಡಲು ಕುತೂಹಲದಿಂದ ಬರುವವರೂ ಸಂಖ್ಯೆಯೂ ಕಡಿಮೆಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT