ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ: ಜೋಶಿಮಠದಲ್ಲಿನ 600 ಕುಟುಂಬ ಸ್ಥಳಾಂತರಕ್ಕೆ ಆದೇಶ

ಜೋಶಿಮಠ: ಪರಿಸ್ಥಿತಿ ಪರಿಶೀಲಿಸಿದ ಸಿ.ಎಂ ಧಾಮಿ
Last Updated 7 ಜನವರಿ 2023, 14:13 IST
ಅಕ್ಷರ ಗಾತ್ರ

ಡೆಹ್ರಾಡೂನ್ (ಪಿಟಿಐ): ‘ಜೋಶಿಮಠ ಪಟ್ಟಣದಲ್ಲಿ ಅಪಾಯಕಾರಿ ಮಟ್ಟದಲ್ಲಿ ಬಿರುಕು ಬಿಟ್ಟಿರುವ ಮನೆಗಳಲ್ಲಿನ 600 ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ’ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಆದೇಶ ನೀಡಿದ್ದಾರೆ.

ಜೋಶಿಮಠದ ಸ್ಥಿತಿಗತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಅಪಾಯದಲ್ಲಿರುವ ಜನರ ಜೀವಗಳನ್ನು ಉಳಿಸುವುದು ಸರ್ಕಾರದ ಮೊದಲ ಆದ್ಯತೆ’ ಎಂದರು. ಜೋಶಿಮಠದ ಸಮಸ್ಯೆಯನ್ನು ಪರಿಹರಿಸಲು ಅಲ್ಪಾವಧಿ ಮತ್ತು ದೀರ್ಘಾವಧಿ ಯೋಜನೆಗಳನ್ನು ರೂಪಿಸುತ್ತಿರುವುದಾಗಿ’ ಅವರು ಹೇಳಿದ್ದಾರೆ.

ಧಾಮಿ ಅವರು ಜೋಸಿಮಠಕ್ಕೆ ಶನಿವಾರ ಭೇಟಿ ನೀಡಿ, ಸದ್ಯದ ಪರಿಸ್ಥಿತಿಯನ್ನು ಪರಿಶೀಲಿಸಿದರು.

ದೇವಾಲಯ ಕುಸಿತ (ಜೋಶಿಮಠ ವರದಿ):

ಜೋಶಿಮಠದಲ್ಲಿ ದೇವಸ್ಥಾನವೊಂದು ಶುಕ್ರವಾರ ಸಂಜೆ ಕುಸಿದಿದೆ. ವರ್ಷದಿಂದ ತಮ್ಮ ಮನೆಗಳ ಗೋಡೆಗಳಲ್ಲಿ ಬೀಳುತ್ತಿರುವ ಭಾರೀ ಬಿರುಕುಗಳ ನಡುವೆ ಭಯದಲ್ಲಿಯೇ ವಾಸಿಸುತ್ತಿರುವ ನಿವಾಸಿಗಳನ್ನು ಇದು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

‘ಸುಮಾರು 14 ರಿಂದ 15 ತಿಂಗಳ ಹಿಂದೆ ಗಾಂಧಿನಗರ ಪ್ರದೇಶದಲ್ಲಿ ಈ ಸಮಸ್ಯೆ ಪ್ರಾರಂಭವಾಯಿತು. ನಂತರ ಸುನೀಲ್, ಮನೋಹರ್ ಬಾಗ್, ಸಿಂಗ್ಧರ್ ಮತ್ತು ಮಾರ್ವಾರಿ ಪ್ರದೇಶಗಳಿಗೂ ಈ ಸಮಸ್ಯೆ ವ್ಯಾಪಿಸಿತು’ ಎಂದು ಜೋಶಿಮಠದ ಮಾಜಿ ಅಧ್ಯಕ್ಷ ರಿಷಿ ಪ್ರಸಾದ್ ಸತಿ ಪ್ರತಿಕ್ರಿಯಿಸಿದ್ದಾರೆ.

ಪರಿಹಾರಕ್ಕೆ ಆಗ್ರಹ (ಹರಿದ್ವಾರ ವರದಿ):

ಜೋಶಿಮಠದಲ್ಲಿ ಜನರ ಜೀವಕ್ಕೆ ಅಪಾಯ ಎದುರಾಗಿದ್ದು, ಸರ್ಕಾರ ಆದಷ್ಟು ಬೇಗ ಪರಿಹಾರದ ಪ್ಯಾಕೇಜ್‌ ಘೋಷಿಸಬೇಕು ಎಂದು ಜ್ಯೋತಿರ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಆಗ್ರಹಿಸಿದ್ದಾರೆ.

ಅಭಿವೃದ್ಧಿಯ ಹೆಸರಿನಲ್ಲಿ ಹಿಮಾಲಯ ಪ್ರದೇಶವನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಗಡಿಯಲ್ಲಿರುವ ಈ ಪಟ್ಟಣದ ಜನರ ಜೀವ ಅಪಾಯಕ್ಕೆ ಸಿಲುಕಿದೆ ಎಂದಿದ್ದಾರೆ.

ಜೋಶಿಮಠವು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ಅತ್ಯಂತ ಮಹತ್ವದ ಪಟ್ಟಣವಾಗಿದೆ ಎಂದಿರುವ ಅವರು, ಬದರಿನಾಥ ದೇವಸ್ಥಾನದಲ್ಲಿ ಸಮರ್ಪಿಸಲಾಗಿರುವ ವಿಷ್ಣು ದೇವರನ್ನು ಚಳಿಗಾಲದಲ್ಲಿ ಜೋಶಿಮಠದ ನರಸಿಂಗ್‌ ದೇವಾಲಯದಲ್ಲಿ ಪೂಜಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇಲ್ಲಿನ ಸಹಸ್ರಾರು ನಿವಾಸಿಗಳ ಪುನರ್‌ವಸತಿ ಕಲ್ಪಿಸುವುದರ ಜತೆಗೆ ದೇವಾಲಯವನ್ನೂ ಜೀರ್ಣೋದ್ಧಾರಗೊಳಿಸಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT