ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಜ್ಯಗಳಿಗೆ ಪರಿಹಾರ ಸಿಗದೆ ಜನರು ವಂಚಿತ: ‘ಸುಪ್ರೀಂ’ ಕಳವಳ

ಗ್ರಾಹಕರ ವೇದಿಕೆಗಳಲ್ಲಿ ಮೂಲಸೌಕರ್ಯ, ಸಿಬ್ಬಂದಿ ಕೊರತೆ
Last Updated 30 ಜನವರಿ 2021, 13:26 IST
ಅಕ್ಷರ ಗಾತ್ರ

ನವದೆಹಲಿ: ಜಿಲ್ಲಾ ಮತ್ತು ರಾಜ್ಯ ಗ್ರಾಹಕರ ವೇದಿಕೆಗಳಿಗೆ ಅಧ್ಯಕ್ಷ, ಸದಸ್ಯರನ್ನು ನೇಮಕ ಮಾಡದಿರುವುದು, ಮೂಲಸೌಕರ್ಯ, ಸಿಬ್ಬಂದಿ ಕೊರತೆಯಿಂದ ಜನರು ತಮ್ಮ ವ್ಯಾಜ್ಯಗಳಿಗೆ ಪರಿಹಾರ ಸಿಗದೇ ತೊಂದರೆ ಅನುಭವಿಸುವಂತಾಗಿದೆ ಎಂದು ಸುಪ್ರೀಂಕೋರ್ಟ್‌ ಅಭಿಪ್ರಾಯಪಟ್ಟಿದೆ.

‘ಗ್ರಾಹಕರ ಹಕ್ಕುಗಳು ಕೂಡ ಮಹತ್ವದ್ದಾಗಿವೆ. ಆದರೆ, ಗ್ರಾಹಕರ ವೇದಿಕೆಗಳಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು, ಮೂಲಸೌಕರ್ಯ ಒದಗಿಸುವಲ್ಲಿ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದ ಜನರು ನ್ಯಾಯದಿಂದ ವಂಚಿತರಾಗುವಂತಾಗಿದೆ’ ಎಂದೂ ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜಯಕಿಶನ್‌ ಕೌಲ್‌, ಹೃಷಿಕೇಶ್ ರಾಯ್‌ ಅವರಿರುವ ನ್ಯಾಯಪೀಠ, ‘ಕಾನೂನು ವಿದ್ಯಾರ್ಥಿಯೊಬ್ಬ ಈ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಪ್ರಸ್ತಾಪಿಸಿರುವ ವಿಷಯಗಳು ಮಹತ್ವದ್ದಾಗಿವೆ. ಆದರೆ, ವಿಷಯದ ಗಂಭೀರತೆ ಕುರಿತು ಸರಿಯಾದ ಅಧ್ಯಯನ ನಡೆಸದ ಕಾರಣ ಈ ಅರ್ಜಿ ಅಪೂರ್ಣ ಎನಿಸುತ್ತಿದೆ’ ಎಂದು ಅಭಿಪ್ರಾಯಪಟ್ಟಿತು.

‘ಅರ್ಜಿಯಲ್ಲಿ ಪ್ರಸ್ತಾಪಿಸಿರುವ ವಿಷಯಗಳಿಗೆ ಒತ್ತು ಕೊಟ್ಟು, ಇದನ್ನು ಸ್ವಯಂ ಪ್ರೇರಿತ ದೂರು ಎಂಬುದಾಗಿ ಪರಿಗಣಿಸಿ, ಪರಿಶೀಲನೆ ಮಾಡಲಾಗುವುದು’ ಎಂದೂ ಪೀಠ ಹೇಳಿತು.

ಈ ವಿಷಯದಲ್ಲಿ ನ್ಯಾಯಾಲಯಕ್ಕೆ ಸಹಕಾರ ನೀಡಲು(ಅಮಿಕಸ್‌ ಕ್ಯೂರಿ) ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಹಾಗೂ ಆದಿತ್ಯ ನಾರಾಯಣ್‌ ಅವರನ್ನು ನ್ಯಾಯಪೀಠ ನೇಮಕ ಮಾಡಿತು.

ಅರ್ಜಿದಾರರು ಉಲ್ಲೇಖಿಸಿರುವ ವಿಷಯ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸುವಂತೆ ಈ ಇಬ್ಬರು ವಕೀಲರಿಗೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ಫೆಬ್ರುವರಿ 22ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT