ಸೋಮವಾರ, ಅಕ್ಟೋಬರ್ 3, 2022
24 °C

ತಿರಂಗ ಖರೀದಿಸುವಂತೆ ಬಲವಂತ ಪಡಿಸುತ್ತಿರುವುದು ನಾಚಿಕೆಗೇಡು: ವರುಣ್‌ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪಡಿತರ ಗ್ರಾಹಕರಿಗೆ ರಾಷ್ಟ್ರಧ್ವಜವನ್ನು ಖರೀದಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಸಂಸದ ವರುಣ್‌ ಗಾಂಧಿ, 75ನೇ ಸ್ವಾತಂತ್ರ್ಯೋತ್ಸವದ ಆಚರಣೆಯು ಬಡವರಿಗೆ ಹೊರೆಯಾಗಿ ಪರಿಣಮಿಸಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಿರಂಗವು ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿದೆ. ಇದೀಗ ಬಾವುಟಕ್ಕೆ ಬೆಲೆ ನಿಗದಿ ಮಾಡಿ, ಅವರಿಂದ ದುಡ್ಡನ್ನು ಕಿತ್ತುಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ವರುಣ್‌ ಗಾಂಧಿ ಹರಿಹಾಯ್ದಿದ್ದಾರೆ. ಇದು ಬಡವರ ಆಹಾರದ ಪಾಲನ್ನು ಕಿತ್ತುಕೊಳ್ಳುವುದಾಗಿದೆ ಎಂದು ಟೀಕಿಸಿ ಟ್ವೀಟ್‌ ಮಾಡಿದ್ದಾರೆ.

₹ 20 ಕೊಟ್ಟು ಬಾವುಟವನ್ನು ಖರೀದಿಸುವಂತೆ ಬಲವಂತಪಡಿಸುತ್ತಿರುವ ಬಗ್ಗೆ ಕೆಲವು ಪಡಿತರ ಗ್ರಾಹಕರು ಅಳಲು ತೋಡಿಕೊಳ್ಳುತ್ತಿರುವ ವಿಡಿಯೊವನ್ನು ಸಂಸದ ಪೋಸ್ಟ್‌ ಮಾಡಿದ್ದಾರೆ.

'75ನೇ ಸ್ವಾತಂತ್ರ್ಯೋತ್ಸವವು ಬಡವರ ಪಾಲಿಗೆ ಹೊರೆಯಾಗುತ್ತದೆ ಎಂದಾದರೆ ಇದೊಂದು ದುರದೃಷ್ಟಕರ ಸಂಗತಿ. ಬಾವುಟ ಖರೀದಿಸದಿದ್ದರೆ ಪಡಿತರ ನಿರಾಕರಿಸುವ ಮೂಲಕ ಖರೀದಿಸಲು ಬಲವಂತ ಮಾಡಲಾಗುತ್ತಿದೆ' ಎಂದು ವರುಣ್‌ ಗಾಂಧಿ ದೂರಿದ್ದಾರೆ.

'ಹರ್‌ ಘರ್‌ ತಿರಂಗ' ಅಭಿಯಾನದಡಿ ಪ್ರತಿಯೊಬ್ಬರೂ ಆಗಸ್ಟ್‌ 13-15ರಂದು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಕೇಂದ್ರ ಸರ್ಕಾರ ಒತ್ತಾಯಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ಅಭಿಯಾನವನ್ನು ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಲು ಬಿಜೆಪಿ ಭಾರಿ ಪ್ರಚಾರ ನಡೆಸುತ್ತಿದೆ.

ಇದೀಗ ಪಕ್ಷದ ಸಂಸದರೊಬ್ಬರು ರಾಷ್ಟ್ರಧ್ವಜವನ್ನು ಖರೀದಿಸಲು ಬಲವಂತ ಪಡಿಸುತ್ತಿದೆ ಎಂದು ಆರೋಪಿಸಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮುಜುಗರವಾಗಿ ಪರಿಣಮಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು