ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಪಡೆದವರ ಪೈಕಿ ಕೆಲವರಲ್ಲಿ ಮಾತ್ರ ಕೋವಿಡ್ ದೃಢ: ಕೇಂದ್ರ ಸರ್ಕಾರ

Last Updated 21 ಏಪ್ರಿಲ್ 2021, 16:10 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ವಿರುದ್ಧದ ಲಸಿಕೆ ಪಡೆದ 1,000 ಜನರ ಪೈಕಿ 2 ರಿಂದ 4 ಜನರಲ್ಲಿ ಮಾತ್ರ ಕೋವಿಡ್‌–19 ಕಾಣಿಸಿಕೊಂಡಿದೆ. ಹೀಗಾಗಿ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ಅತ್ಯಂತ ಕಡಿಮೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ.

‘12.7 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಈ ಪೈಕಿ 21,000 ಜನರಲ್ಲಿ ಕೋವಿಡ್‌–19 ದೃಢಪಟ್ಟಿದೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮಹಾ ನಿರ್ದೇಶಕ ಬಲರಾಂ ಭಾರ್ಗವ ತಿಳಿಸಿದ್ದಾರೆ.

‘ಲಸಿಕೆ ಪಡೆದ ನಂತರವೂ ಸೋಂಕಿಗೆ ಒಳಗಾದವರ ಸಂಖ್ಯೆ ಅತ್ಯಂತ ಕಡಿಮೆ. ಹೀಗಾಗಿ ರೂಪಾಂತರಗೊಂಡಿರುವ ಕೊರೊನಾ ವೈರಸ್‌ನಿಂದಾಗಿ ಸೋಂಕು ತೀವ್ರವಾಗಿ ಪ್ರಸರಣವಾಗುತ್ತಿರುವ ಸಾಧ್ಯತೆ ಇದೆ’ ಎಂದೂ ಹೇಳಿದರು.

‘ಲಸಿಕೆ ಪಡೆದ ನಂತರವೂ ಕೋವಿಡ್‌–19 ಕಾಣಿಸಿಕೊಂಡಿರುವವರಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿಯೇ ಹೆಚ್ಚು. ಈ ವರ್ಗ ಹೆಚ್ಚು ಅಪಾಯಕ್ಕೆ ಒಡ್ಡಿಕೊಳ್ಳುತ್ತಿರುವುದು ಇದಕ್ಕೆ ಕಾರಣವಿರಬಹುದು’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘93.56 ಲಕ್ಷ ಜನರಿಗೆ ಕೋವ್ಯಾಕ್ಸಿನ್‌ನ ಮೊದಲ ಡೋಸ್‌ ನೀಡಲಾಯಿತು. ಈ ಪೈಕಿ 4,208 (ಶೇ 0.04) ಜನರಲ್ಲಿ ಕೋವಿಡ್‌–19 ದೃಢಪಟ್ಟಿತು. ಇದೇ ಲಸಿಕೆಯ ಎರಡನೇ ಡೋಸ್‌ ಪಡೆದವರ ಸಂಖ್ಯೆ 17.37 ಲಕ್ಷ. ಇವರ ಪೈಕಿ 695 ಜನರಲ್ಲಿ (ಶೇ 0.04) ಸೋಂಕು ಕಾಣಿಸಿಕೊಂಡಿತು ಎಂದು ಅವರು ಅಂಕಿ–ಅಂಶಗಳೊಂದಿಗೆ ವಿವರಿಸಿದರು.

‘10.03 ಕೋಟಿ ಜನರಿಗೆ ಕೋವಿಶೀಲ್ಡ್‌ ಲಸಿಕೆಯ ಮೊದಲ ಡೋಸ್‌ ನೀಡಲಾಗಿದೆ. ಈ ಪೈಕಿ 17,145 ಜನರಲ್ಲಿ (ಶೇ 0.02) ಕೋವಿಡ್‌–19 ಕಂಡು ಬಂದಿದೆ. 1.57 ಕೋಟಿ ಜನರಿಗೆ ಎರಡನೇ ಡೋಸ್‌ ನೀಡಲಾಗಿದ್ದು, ಇವರಲ್ಲಿ 5,014 ಜನರಲ್ಲಿ (ಶೇ 0.03) ಕೋವಿಡ್‌ ದೃಢಪಟ್ಟಿರುವುದು ವರದಿಯಾಗಿದೆ’ ಎಂದೂ ಭಾರ್ಗವ ವಿವರಿಸಿದರು.

‘ಲಸಿಕೆ ಪಡೆದ ನಂತರವೂ ವ್ಯಕ್ತಿಯಲ್ಲಿ ಕೋವಿಡ್‌ ದೃಢಪಟ್ಟರೆ, ಸೋಂಕು ತೀವ್ರ ಸ್ವರೂಪದ್ದಾಗಿರುವುದಿಲ್ಲ. ಹೀಗಾಗಿ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT