ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌, ಬಿಜೆಪಿ ಜೊತೆ ನಂಟು ಗುಟ್ಟಲ್ಲ: ಗೌರಿಯನ್ನು ಬಲ್ಲ ವಕೀಲರ ಹೇಳಿಕೆ

Last Updated 7 ಫೆಬ್ರುವರಿ 2023, 16:13 IST
ಅಕ್ಷರ ಗಾತ್ರ

ಚೆನ್ನೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಹಾಗೂ ಬಿಜೆಪಿಯೊಂದಿಗೆ ತಮಗಿದ್ದ ಸಂಬಂಧವನ್ನು ಹೇಳಿಕೊಳ್ಳಲು ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಎಂದೂ ಹಿಂಜರಿದವರಲ್ಲ ಎಂದು ಗೌರಿ ಅವರನ್ನು ಹತ್ತಿರದಿಂದ ಬಲ್ಲ ವಕೀಲರೊಬ್ಬರು ಹೇಳಿದ್ದಾರೆ.

ಧಾರ್ಮಿಕ ಮತಾಂತರದ ಕುರಿತು ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್’ ಸೇರಿದಂತೆ ಬಲಪಂಥೀಯ ಚಿಂತನೆಯಳ್ಳ ಪತ್ರಿಕೆಗಳಿಗೆ ಹಲವು ಲೇಖನಗಳನ್ನೂ ಬರೆದಿದ್ದಾರೆ. ಜೊತೆಗೆ ಗೌರಿ ಅವರು ಮಾಡಿರುವ ಹಲವು ದ್ವೇಷ ಭಾಷಣಗಳನ್ನು ಯೂಟ್ಯೂಬ್‌ ತೆಗೆದುಹಾಕಿದೆ.

ಮದ್ರಾಸ್‌ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಹುದ್ದೆಗೆ ಗೌರಿ ಅವರ ಹೆಸರನ್ನು ಕೊಲಿಜಿಯಂ ಶಿಫಾರಸು ಮಾಡುವವರೆಗೂ, ಗೌರಿ ಅವರ ಕುರಿತು ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಗೌರಿ ಅವರು ಈಗ ಮದ್ರಾಸ್‌ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಗಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಗೌರಿ ಅವರು, ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ತಕ್ಕಳೈ ಗ್ರಾಮದವರು. ಮಧ್ಯಮ ವರ್ಗದ ಕುಟುಂಬದಲ್ಲಿ 1973ರ ಮೇ 21ರಂದು ಜನಿಸಿದ ಅವರು, ತಮ್ಮ ಕುಟುಂಬದಲ್ಲಿ ಕಾನೂನು ಪದವಿ ಪಡೆದ ಮೊದಲಿಗರು. ಮಧುರೈ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ‍ಪಡೆದುಕೊಂಡರು. ಇಲ್ಲಿಂದಲೇ ಆರ್‌ಎಸ್‌ಎಸ್‌ನೊಂದಿಗೆ ಅವರ ನಂಟು ಪ್ರಾರಂಭವಾಯಿತು.

ಪ್ರಧಾನಿ ಮೋದಿ ಅವರು ಬಿಜೆಪಿ ಕಾರ್ಯಕರ್ತರಿಗೆ ತಮ್ಮ ಟ್ವಿಟರ್‌ ಖಾತೆಯ ಹೆಸರಿನ ಜೊತೆಗೆ ‘ಚೌಕೀದಾರ್‌’ ಎಂದು ಬರೆದುಕೊಳ್ಳುವಂತೆ 2019ರಲ್ಲಿ ಕರೆ ನೀಡಿದ್ದರು. ಗೌರಿ ಅವರು ಕೂಡ ತಮ್ಮ ಟ್ವಿಟರ್‌ ಖಾತೆಯ ಹೆಸರಿನ ಜೊತೆಗೆ ‘ಚೌಕೀದಾರ್’ ಎಂದು ಬರೆದುಕೊಂಡಿದ್ದರು.

ಬಿಜೆಪಿ ಮಹಿಳಾ ಮೋರ್ಚದ ಪ್ರಧಾನ ಕಾರ್ಯದರ್ಶಿಯಾಗಿಯೂ ಗೌರಿ ಕೆಲಸ ಮಾಡಿದ್ದಾರೆ. 2020ರ ಜೂನ್‌ನಲ್ಲಿ ಮಧುರೈ ಪೀಠದಲ್ಲಿ ಹೆಚ್ಚುವರಿ ಸಾಲಿಸಿಟರಲ್‌ ಜನರಲ್‌ ಆಗಿ ನೇಮಕಗೊಂಡ ಬಳಿಕ ಗೌರಿ ತಮ್ಮ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

‘ಬಲವಂತದ ಮತಾಂತರವು ಸಾಮಾಜಿಕ ಸಾಮರಸ್ಯವನ್ನು ಹಾಳುಗೆಡುವುತ್ತಿದೆ’ ಎಂಬ ಶೀರ್ಷಿಕೆಯಡಿ 2012ರ ಅ. 1ರಂದು ಗೌರಿ ಅವರು ‘ಆರ್ಗನೈಸರ್‌’ಗೆ ಲೇಖನವನ್ನು ಬರೆದಿದ್ದರು. ‘ಕನ್ಯಾಕುಮಾರಿಯ ಜನಸಂಖ್ಯಾ ಚಿತ್ರಣದಲ್ಲಿ ಆದ ಬದಲಾವಣೆಯು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿತು. ಇದರಿಂದಾಗಿ ಎಲ್ಲ ಪಕ್ಷದವರು ಚರ್ಚ್‌ಗಳಿಗೆ ಶರಣಾದರು’ ಎಂದು ಗೌರಿ ಅವರು ತಮ್ಮ ಲೇಖನದಲ್ಲಿ ಪ್ರತಿಪಾದಿಸಿದ್ದರು.

ಇಸ್ಲಾಂನ ಹಸಿರು ಭಯೋತ್ಪಾದನೆ: ಗೌರಿ ಅವರ ಚಿಂತನೆ

‘ರಾಷ್ಟ್ರೀಯ ಭದ್ರತೆ ಹಾಗೂ ಶಾಂತಿಗೆ ಯಾವುದು ಹೆಚ್ಚು ಬೆದರಿಕೆ ಒಡ್ಡಿದೆ? ಜಿಹಾದ್‌ ಅಥವಾ ಕ್ರೈಸ್ತ ಮಿಷನರಿ?’ ಎಂಬ ಶೀರ್ಷಿಕೆಯ ಸಂದರ್ಶನವೊಂದರಲ್ಲಿ ಗೌರಿ ಅವರು, ‘ಇಸ್ಲಾಂ ಹಸಿರು ಭಯೋತ್ಪಾದನೆ ಮಾಡಿದರೆ, ಕ್ರೈಸ್ತರು ಶ್ವೇತ ಭಯೋತ್ಪಾದನೆ ಮಾಡುತ್ತಿದ್ದಾರೆ’ ಎಂದು ಉತ್ತರಿಸಿದ್ದರು. ಕೆಲವು ವಕೀಲರು ಕೊಲಿಜಿಯಂಗೆ ಬರೆದ ಪತ್ರದಲ್ಲಿ ಇದನ್ನು ಉಲ್ಲೇಖಿಸಿದ್ದಾರೆ.

‘ಕ್ರೈಸ್ತ ಮಿಷನರಿಗಳಿಂದ ಭಾರತದಲ್ಲಿ ಆಗುತ್ತಿರುವ ಸಾಂಸ್ಕೃತಿಕ ನರಮೇಧ’ ಎನ್ನುವ ಶೀರ್ಷಿಕೆಯ ಸಂದರ್ಶನದಲ್ಲಿ, ‘ಕ್ರೈಸ್ತ ಹಾಡುಗಳಿಗೆ ಭರತನಾಟ್ಯ ಮಾಡಬಾರದು’ ಎಂದು ಉತ್ತರಿಸಿದ್ದರು ಎಂದೂ ಹೇಳಲಾಗಿದೆ.

‘ಗೌರಿ ಅವರ ಪ್ರತಿಗಾಮಿ ಚಿಂತನೆಗಳು ಮೂಲಭೂತ ಸಾಂವಿಧಾನಿಕ ಮೌಲ್ಯಗಳಿಗೆ ಮಾರಕವಾಗಿವೆ. ಗೌರಿ ಅವರಲ್ಲಿ ಆಳವಾಗಿ ಬೇರೂರಿರುವ ಮತಾಂಧತೆಯಿಂದಾಗಿ ಅವರಿಗೆ ಹೆಚ್ಚುವರಿ ನ್ಯಾಯಮೂರ್ತಿ ಹುದ್ದೆಗೆ ಏರುವ ಅರ್ಹತೆ ಇಲ್ಲ’ ಎಂದೂ ವಕೀಲರು ಅಭಿಪ್ರಾಯಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT