ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸ್ ದುಬೆ ಎನ್‌ಕೌಂಟರ್‌: ಅರ್ಜಿಗಳ ವಿಚಾರಣೆ ಕೊನೆಗೊಳಿಸಿದ ಸುಪ್ರೀಂ ಕೋರ್ಟ್

Last Updated 22 ಜುಲೈ 2022, 10:52 IST
ಅಕ್ಷರ ಗಾತ್ರ

ನವದೆಹಲಿ: ಪಾತಕಿ ವಿಕಾಸ್‌ ದುಬೆ ಪೊಲೀಸ್ ಎನ್‌ಕೌಂಟರ್‌ ಪ್ರಕರಣದ ತನಿಖಾ ಆಯೋಗವನ್ನು ಪುನರ್ ರಚಿಸಬೇಕು ಹಾಗೂ ಪರಿಹಾರ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕೊನೆಗೊಳಿಸಿದೆ. ಜತೆಗೆ, ತನಿಖಾ ಆಯೋಗದ ಶಿಫಾರಸಿನಂತೆ ನಡೆದುಕೊಳ್ಳಲು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಬಿ.ಎಸ್. ಚೌಹಾಣ್ ನೇತೃತ್ವದ ತನಿಖಾ ಆಯೋಗ ಸಿದ್ಧಪಡಿಸಿದ್ದ ವರದಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಬೇಕು. ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಬೇಕು ಎಂದೂ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠವು ಸರ್ಕಾರಕ್ಕೆ ಸೂಚಿಸಿದೆ.

‘ದುಬೆ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನೀಡಿರುವ ಹೇಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಲು ಬಲವಾದ ಕಾರಣಗಳಿಲ್ಲ. ಎಲ್ಲ ಸಾಕ್ಷ್ಯಗಳು ಪೋಲೀಸರ ಹೇಳಿಕೆಯನ್ನೇ ಬೆಂಬಲಿಸುತ್ತವೆ. ಎನ್‌ಕೌಂಟರ್ ಕುರಿತು ಪೋಲಿಸ್ ನೀಡಿರುವ ಹೇಳಿಕೆಯನ್ನು ಚರ್ಚಿಸುವುದಕ್ಕೆ ಸಾರ್ವಜನಿಕರಾಗಲಿ ಮತ್ತು ಮಾಧ್ಯಮಗಳಾಗಲಿ ಯಾರೂ ಮುಂದೆ ಬರಲಿಲ್ಲ. ಈ ಘಟನೆಯನ್ನು ನಿರಾಕರಿಸುವಂತಹ ಯಾವ ಪುರಾವೆಗಳ ಸಲ್ಲಿಕೆಯಾಗಿಲ್ಲ’ ಎಂದು ಬಿ.ಎಸ್. ಚೌಹಾಣ್ ನೇತೃತ್ವದ ತನಿಖಾ ಆಯೋಗ ವರದಿಯಲ್ಲಿ ತಿಳಿಸಿತ್ತು.

ಈ ವಿಚಾರಕ್ಕೆ ಸಂಬಂಧಿಸಿ, ಅರ್ಜಿದಾರರಲ್ಲೊಬ್ಬರಾಗಿರುವ ವಕೀಲ ಘನಶ್ಯಾಂ ಉಪಾಧ್ಯಾಯ ಅವರು ತನಿಖಾ ಆಯೋಗದ ಪುನರ್ ರಚನೆಯಾಗಬೇಕೆಂದು ಕೋರಿದ್ದರು.

ತನಿಖಾ ಆಯೋಗವನ್ನು ರದ್ದುಪಡಿಸಬೇಕೆಂಬ ಮನವಿಯನ್ನು 2020ರ ಆಗಸ್ಟ್ 19ರಂದು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

2020ರಲ್ಲಿ ನಡೆದಿದ್ದ ಎನ್‌ಕೌಂಟರ್‌

2020ರ ಜುಲೈ 2 ಮತ್ತು 3ರ ನಡು ರಾತ್ರಿ ಕಾನ್ಪುರ ಜಿಲ್ಲೆಯ ಬಿಕ್ರು ಹಳ್ಳಿಯಲ್ಲಿರುವ ದುಬೆ ಅವರ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಡಿಎಸ್‌ಪಿ ಸೇರಿದಂತೆ ಎಂಟು ಮಂದಿ ಪೊಲೀಸ್ ಸಿಬ್ಬಂದಿ ಸಾವಿಗೀಡಾಗಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಕಾಸ್ ದುಬೆಯನ್ನು ಬಂಧಿಸಿ, ಉಜ್ಜಯಿನಿಯಿಂದ ಕಾನ್ಪುರಕ್ಕೆ ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದಾಗ, ಆ ವಾಹನ ಅಪಘಾತಕ್ಕೀಡಾಗಿತ್ತು. ಇದೇ ವೇಳೆ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಎನ್‌ಕೌಂಟರ್‌ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT