ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾದಿ ಅವಹೇಳನ: ನಿಲ್ಲದ ಪ್ರತಿಭಟನೆ

ಬಂಗಾಳದಲ್ಲಿ ರೈಲಿನ ಮೇಲೆ ಕಲ್ಲು ತೂರಾಟ l ರಾಂಚಿಯಲ್ಲಿ ನಿಷೇಧಾಜ್ಞೆ ವಿಸ್ತರಣೆ l ಅಸ್ಸಾಂನ ಕೆಲವೆಡೆ ಕಟ್ಟೆಚ್ಚರ
Last Updated 12 ಜೂನ್ 2022, 19:45 IST
ಅಕ್ಷರ ಗಾತ್ರ

ರಾಂಚಿ/ಹೌರಾ/ಗುವಾಹಟಿ:ಪ್ರವಾದಿ ಮಹಮ್ಮದ್‌ ಅವರ ಬಗ್ಗೆ ‘ಅವಹೇಳನಕಾರಿ’ ಹೇಳಿಕೆ ನೀಡಿದ ಬಿಜೆಪಿಯ ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರ ಬಂಧನಕ್ಕೆ ಆಗ್ರಹಿಸಿ ದೇಶದ ವಿವಿಧ ಕಡೆ ಸತತ ಮೂರನೇ ದಿನವೂ ಪ್ರತಿಭಟನೆ ಮುಂದುವರಿಯಿತು.ಪಶ್ಚಿಮ ಬಂಗಾಳದಲ್ಲಿ ರೈಲಿನ ಮೇಲೆ ಕಲ್ಲು ತೂರಾಟ ನಡೆಯಿತು. ಅಸ್ಸಾಂನ ಎರಡು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ರಾಂಚಿಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಿ, ನಿಷೇಧಾಜ್ಞೆವಿಸ್ತರಿಸಲಾಗಿದೆ.

ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯಲ್ಲಿ ಉದ್ರಿಕ್ತರ ಗುಂಪು ಬೆಥುಯಾಡಹರಿ ರೈಲು ನಿಲ್ದಾಣಕ್ಕೆ ನುಗ್ಗಿ, ರೈಲಿನ ಮೇಲೆ ದಾಳಿ ಮಾಡಿ ಹಾನಿಗೊಳಿಸಿತು. ಭಾನುವಾರ ಸಂಜೆ ಸಾವಿರಾರು ಜನರು ರಸ್ತೆತಡೆ ನಡೆಸುತ್ತಿದ್ದರು. ಪೊಲೀಸರು ಬೆನ್ನಟ್ಟಿದಾಗ, ಕೆಲವು ಜನರ ಗುಂಪು ರೈಲು ನಿಲ್ದಾಣಕ್ಕೆ ನುಗ್ಗಿ ರೈಲಿನ ಮೇಲೆ ಕಲ್ಲುತೂರಾಟ ನಡೆಸಿತು. ರೈಲು ಸಂಚಾರ ಕೆಲ ಸಮಯ ಸ್ಥಗಿತಗೊಂಡಿತ್ತು.

ಅಸ್ಸಾಂನ ಕಛಾರ್ ಹಾಗೂ ಕರೀಮ್‌ಗಂಜ್ ಜಿಲ್ಲೆಗಳಲ್ಲಿ ಭಾನುವಾರ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಮೆರವಣಿಗೆ ಅಥವಾ ರ್‍ಯಾಲಿಗೆ ನಿಷೇಧ ಹೇರಲಾಗಿತ್ತು. ‘ಕೆಲವು ದಿನಗಳಿಂದ ಈ ಎರಡು ಜಿಲ್ಲೆಗಳಲ್ಲಿ ಪ್ರತಿಭಟನೆ ಹೆಸರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಸೇರುತ್ತಿದ್ದಾರೆ. ಸಮಾಜಘಾತುಕ ಶಕ್ತಿಗಳು ಈ ಸಮಯದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಸಾಧ್ಯತೆಯಿರುವುದರಿಂದ ಜನರು ಸಮಾವೇಶಗೊಳ್ಳುವುದನ್ನು ನಿರ್ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಶುಕ್ರವಾರದ ಪ್ರಾರ್ಥನೆ ಬಳಿಕ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳದ ಹೌರಾದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಆದರೂ, ಹಿಂಸಾಪೀಡಿತ ಪ್ರದೇಶಕ್ಕೆ ತೆರಳಲು ಮುಂದಾದ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರನ್ನು ಪೊಲೀಸರು ತಡೆದಿದ್ದಾರೆ. ತಾವು ಹೌರಾಗೆ ತೆರಳುವ ಉದ್ದೇಶ ಹೊಂದಿರಲಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ. ಈ ಕಾರಣಕ್ಕೆ ಅವರು ಪೊಲೀಸರ ಜೊತೆ ವಾಗ್ವಾದ ನಡೆಸಿದರು.

ಶುಕ್ರವಾರ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ರಾಂಚಿಯಲ್ಲಿ ಭಾನುವಾರವೂ ಬಿಗುವಿನ ವಾತಾವರಣ ಇತ್ತು. ನಗರದಲ್ಲಿ ಪೊಲೀಸ್ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಹಿಂಸೆಯಲ್ಲಿ ತೊಡಗಿದ್ದ ಸಾವಿರಾರು ಜನರ ವಿರುದ್ಧ 25 ಎಫ್‌ಐಆರ್ ದಾಖಲಾಗಿವೆ. ನಗರದಲ್ಲಿ 33 ಗಂಟೆಗಳ ಬಳಿಕ ಇಂಟರ್‌ನೆಟ್ ಸೇವೆ ಪುನರಾರಂಭಿಸಲಾಗಿದೆ.

ಎಲ್ಲೆಲ್ಲಿ ಏನೇನಾಯ್ತು..?

*ನೂಪುರ್ ಶರ್ಮಾ ಅವರು ಹೇಳಿಕೆ ದಾಖಲಿಸಲು ಸೋಮವಾರ ಹಾಜರಾಗುವಂತೆ ಮಹಾರಾಷ್ಟ್ರದ ಭಿವಂಡಿ ಪೊಲೀಸರು ಸಮನ್ಸ್ ನೀಡಿದ್ದಾರೆ. ನವೀನ್ ಜಿಂದಾಲ್‌ ಅವರಿಗೆ ಇದೇ 15ರಂದು ಹಾಜರಾಗಲು ಸೂಚಿಸಲಾಗಿದೆ

*ರಾಂಚಿಯಲ್ಲಿ ಶುಕ್ರವಾರ ನಡೆದ ಹಿಂಸಾತ್ಮಕ ಪ್ರತಿಭಟನೆ ವೇಳೆ ಗುಂಡೇಟಿನಿಂದ ಮೃತಪಟ್ಟ ಇಬ್ಬರು ವ್ಯಕ್ತಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಅವರ ಕುಟುಂಬದವರು ಭಾನುವಾರ ಹೇಳಿದ್ದಾರೆ

*ಪ್ರತಿಭಟನೆ ಹಾಗೂ ಹಿಂಸಾಚಾರ ಘಟನೆಗಳ ಸಂಬಂಧಉತ್ತರ ಪ್ರದೇಶದ 8 ಜಿಲ್ಲೆಗಳಲ್ಲಿ ಒಟ್ಟು 316 ಜನರನ್ನು ಪೊಲೀಸರು ಬಂಧಿಸಿದ್ದಾರೆ. 13 ಪ್ರಕರಣಗಳು ದಾಖಲಾಗಿವೆ

*ನೂಪುರ್ ಶರ್ಮಾ ಅವರನ್ನು ಶ್ಲಾಘಿಸಿ, ಪ್ರವಾದಿ ಮಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಬರಹ ಪೋಸ್ಟ್ ಮಾಡಿದ ಆರೋಪದ ಮೇಲೆ ಮಹಾರಾಷ್ಟ್ರದ ಭಿವಂಡಿ ನಗರದ 19 ವರ್ಷದ ಮುಸ್ಲಿಂ ಯುವಕನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ

*ನೂಪುರ್ ಶರ್ಮಾ ವಿರುದ್ಧ ಅಸಭ್ಯ ಪೋಸ್ಟ್ ಹಾಕಿದ ಉತ್ತರ ಪ್ರದೇಶದ ರೇವತಿ ಪಟ್ಟಣದ ನಿವಾಸಿ ಯಾಕೂಬ್ ಅನ್ಸಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ

*ನೂಪುರ್ ಶರ್ಮಾ ಹಾಗೂ ಇತರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಕೀಲ ಮಹಮ್ಮದ್ ಅಶ್ರಫ್ ಭಟ್ ಅವರು ಶ್ರೀನಗರದ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ; ವಕೀಲ ಅಬು ಸುಹೇಲ್ ಎಂಬುವರು ನೂಪುರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪಶ್ಚಿಮ ಬಂಗಾಳದ ಕೊಂತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

*ಕಳೆದ ವಾರ ದೆಹಲಿಯ ಜಾಮಾ ಮಸೀದಿ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ ಶಾಂತಿ ಕದಡಲು ಯತ್ನಿಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ

*ಪ್ರವಾದಿ ಮಹಮ್ಮದ್ ಬಗೆಗಿನ ಹೇಳಿಕೆ ಖಂಡಿಸಿ ಜಮ್ಮುವಿನಲ್ಲಿ ಭಾನುವಾರ ಶಾಂತಿಯುತ ಪ್ರತಿಭಟನೆ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT