ಸೋಮವಾರ, ಅಕ್ಟೋಬರ್ 26, 2020
27 °C
ಗುಜರಾತ್‌ಗೆ ತೆರಳಿದ ನೌಕೆ

ಐಎನ್‌ಎಸ್‌ ವಿರಾಟ್‌ಗೆ ಮುಂಬೈನಲ್ಲಿ ಭಾವಪೂರ್ಣ ವಿದಾಯ: ಗುಜರಾತ್‌ನಲ್ಲಿ ಗುಜರಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತೀಯ ನೌಕಾಪಡೆಯಲ್ಲಿ ಸುದೀರ್ಘ 30 ವರ್ಷಗಳ ಸೇವೆ ಸಲ್ಲಿಸಿದ್ದ ಐಎನ್‌ಎಸ್‌ ವಿರಾಟ್‌ ಇನ್ನು ಗುಜರಿಗೆ ಸೇರಲಿದೆ. ಶನಿವಾರ ಗುಜರಾತ್‌ನ ಅಲಾಂಗ್‌ಗೆ ಐಎನ್‌ಎಸ್‌ ವಿರಾಟ್‌ ಕೊಂಡೊಯ್ಯಲಾಯಿತು.

ಈ ಬೃಹತ್‌ ನೌಕೆಯನ್ನು ಕಳಚಿ, ಗುಜರಿಯಾಗಿಸುವ ವ್ಯವಸ್ಥೆ ಅಲಾಂಗ್‌ನಲ್ಲಿದ್ದು, ಇಂತಹ ಸೌಲಭ್ಯ ಇರುವ ಜಗತ್ತಿನ ಬೃಹತ್‌ ಹಡಗುಕಟ್ಟೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ.

ಶನಿವಾರ ಮುಂಬೈನ ಗೇಟ್‌ ವೇ ಆಫ್‌ ಇಂಡಿಯಾದಲ್ಲಿ ಐಎನ್‌ಎಸ್‌ ವಿರಾಟ್‌ಗೆ ಭಾವನಾತ್ಮಕವಾಗಿ ಬೀಳ್ಕೊಡುಗೆ ನೀಡಲಾಯಿತು. ನೌಕಾಪಡೆಯ ಅಧಿಕಾರಿಗಳು ಮತ್ತು ಮಾಜಿ ಯೋಧರು ಈ ವಿದಾಯದ ಸಮಾರಂಭಕ್ಕೆ ಸಾಕ್ಷಿಯಾದರು.

ಐಎನ್‌ಎಸ್‌ ವಿರಾಟ್‌ ಜಗತ್ತಿನಲ್ಲೇ ದೀರ್ಘಾವಧಿಯ ಸೇವೆ ಸಲ್ಲಿಸಿದ ಯುದ್ಧ ನೌಕೆ. ಭಾರತದ ನೌಕಾಪಡೆ ಸೇರ್ಪಡೆಯಾಗುವ ಮೊದಲು 1959ರಿಂದ 1986ರ ವರೆಗೆ ಬ್ರಿಟನ್‌ನ ‘ರಾಯಲ್‌ ನೇವಿ’ಯಲ್ಲಿ ಅದು ಸೇವೆ ಸಲ್ಲಿಸಿತ್ತು. 1986ರಲ್ಲಿ ಭಾರತೀಯ ನೌಕಾಪಡೆಗೆ 65 ದಶಲಕ್ಷ ಡಾಲರ್‌ಗೆ ಮಾರಾಟವಾಗಿದ್ದ ವಿರಾಟ್‌, 1987ರಿಂದ ಸೇವೆ ಆರಂಭಿಸಿತ್ತು. 2017ರಲ್ಲಿ ನಿವೃತ್ತಿ ಹೊಂದಿತ್ತು. ಹೆಚ್ಚು ಕಡಿಮೆ 60 ವರ್ಷಗಳ ಕಾಲ ವಿರಾಟ್‌ ಬ್ರಿಟನ್‌ ಮತ್ತು ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದೆ. ಅಲ್ಲದೆ, ಹಲವು ಮಹತ್ತರ ಕಾರ್ಯಾಚರಣೆಯಲ್ಲಿ, ಯುದ್ಧಗಳಲ್ಲೂ ಭಾಗವಹಿಸಿದೆ.

ಇದನ್ನೂ ಓದಿ: ಗುಜರಿ ಸೇರಲಿದೆ ‘ಐಎನ್‌ಎಸ್‌ ವಿರಾಟ್‌’

ಈ ಯುದ್ಧನೌಕೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸುವ ಯತ್ನಗಳು ವಿಫಲಗೊಂಡ ನಂತರ, ಅದನ್ನು ಹರಾಜು ಹಾಕಲು ತೀರ್ಮಾನಿಸಲಾಯಿತು. ‘ಮೆಟಲ್ ಸ್ಕ್ರ್ಯಾಪ್ ಟ್ರೇಡ್ ಕಾರ್ಪೊರೇಷನ್ ಲಿಮಿಟೆಡ್’ ನಡೆಸಿದ ಹರಾಜಿನಲ್ಲಿ ಶ್ರೀರಾಮ್‌ ಗ್ರೂಪ್‌  ಸಂಸ್ಥೆ  ₹38 ಕೋಟಿಗೆ ಖರೀದಿಸಿದೆ. ಟಗ್‌ ಬೋಟ್‌ಗಳ ಮೂಲಕ ಈ ನೌಕೆಯನ್ನು ಅಲಾಂಗ್‌ಗೆ ಕೊಂಡೊಯ್ಯಲಾಗುತ್ತಿದ್ದು, ಎರಡು ದಿನಗಳನ್ನು ತೆಗೆದುಕೊಳ್ಳಲಿದೆ.

ಈ ನೌಕೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಮಾಡಲು ವಿಫಲವಾದ ಸರ್ಕಾರದ ಧೋರಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ. ದೇಶದ ನೌಕಾಪಡೆಯ ಶ್ರೀಮಂತಿಕೆ ಮತ್ತು ವೈಭವವನ್ನು ಪರಿಚಯಿಸಲು ಈ ನೌಕೆಯನ್ನು ಸಂರಕ್ಷಿಸಿಡಬೇಕಾಗಿತ್ತು ಎಂದು ಹಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು