ಶನಿವಾರ, ಸೆಪ್ಟೆಂಬರ್ 18, 2021
30 °C

ಭೇಟಿ ಯಶಸ್ವಿ, ಎರಡು ತಿಂಗಳಿಗೊಮ್ಮೆ ದೆಹಲಿಗೆ ಬರುವೆ: ಕುತೂಹಲ ಮೂಡಿಸಿದ ದೀದಿ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೆಹಲಿ:  ‘ದೆಹಲಿ ಭೇಟಿ ಯಶಸ್ವಿಯಾಗಿದೆ, ಇನ್ನುಮುಂದೆ ಎರಡು ತಿಂಗಳಿಗೊಮ್ಮೆ ದೆಹಲಿಗೆ ಬರುವೆ’

ಪಶ್ಚಿಮ ಬಂಗಾಳದಲ್ಲಿ ಭಾರಿ ಬಹುಮತ ಗಳಿಸಿ ಮತ್ತೊಂದು ಅವಧಿಯ ಸರ್ಕಾರ ರಚಿಸಿದ ನಂತರ ಇದೇ ಮೊದಲ ಬಾರಿಗೆ ದೆಹಲಿ ಯಾತ್ರೆ ಕೈಗೊಂಡಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಶುಕ್ರವಾರ ರಾತ್ರಿ ರಾಷ್ಟ್ರ ರಾಜಧಾನಿಯಿಂದ ನಿರ್ಗಮಿಸುವ ವೇಳೆ ಆಡಿದ ಮಾತುಗಳಿವು. ಈ ಮೂಲಕ ಅವರು ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ್ದಾರೆ. 

ಪಶ್ಚಿಮ ಬಂಗಾಳಕ್ಕೆ ತೆರಳುತಿದ್ದ ಮಮತಾ ಬ್ಯಾನರ್ಜಿ, ಸೋದರಳಿಯ ಅಭಿಷೇಕ್‌ ಬ್ಯಾನರ್ಜಿ ಅವರ ದೆಹಲಿ ನಿವಾಸದಿಂದ ಹೊರ ಬಂದು ಮಾಧ್ಯಮಗಳ ಜೊತೆಗೆ ಮಾತನಾಡಿದರು. ‘ನನ್ನ ಭೇಟಿ ಯಶಸ್ವಿಯಾಗಿದೆ. ರಾಜಕೀಯ ಕಾರಣಗಳಿಗಾಗಿ ಬಹಳಷ್ಟು ಸಹೋದ್ಯೋಗಿಗಳನ್ನು ಭೇಟಿ ಮಾಡಿದೆ. ನಾವು ರಾಜಕೀಯ ಉದ್ದೇಶಕ್ಕಾಗಿ ಭೇಟಿಯಾಗಿದ್ದೆವು. ಪ್ರಜಾಪ್ರಭುತ್ವ ಮುಂದುವರಿಯಬೇಕು. 'ಪ್ರಜಾಪ್ರಭುತ್ವ ಉಳಿಸಿ, ದೇಶ ಉಳಿಸಿ’ ಎಂಬುದು ನಮ್ಮ ಘೋಷವಾಕ್ಯ. ನಾನು ಎರಡು ತಿಂಗಳಿಗೊಮ್ಮೆ ಇಲ್ಲಿಗೆ ಬರುತ್ತೇನೆ’ ಎಂದು ಹೇಳಿದರು. 

ರೈತರೊಂದಿಗೆ ತಾವು ನಿಲ್ಲುವುದಾಗಿಯೂ ಅವರು ಇದೇ ವೇಳೆ ತಿಳಿಸಿದರು. 

‘ವಿರೋಧ ಪಕ್ಷಗಳು ಒಂದಾಗುವುದಕ್ಕಿಂತಲೂ ಉತ್ತವಾದದ್ದು ಯಾವುದೂ ಇರಲಾರದು. ಕೋವಿಡ್ ನಿಯಮಾವಳಿಯ ಕಾರಣದಿಂದಾಗಿ ನಾನು ಎಲ್ಲ ನಾಯಕರನ್ನೂ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಆದರೂ, ಭೇಟಿಯ ಫಲಿತಾಂಶ ಉತ್ತಮವಾಗಿದೆ. ನಾವು ಒಟ್ಟಾಗಿ ಕೆಲಸ ಮಾಡೋಣ’ ಎಂದು ಟಿಎಂಸಿ ವರಿಷ್ಠರೂ ಆದ ಮಮತಾ ಹೇಳಿದರು. 

ದೆಹಲಿ ಭೇಟಿ ವೇಳೆ ಮಮತಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಮುಖಂಡರಾದ ಆನಂದ್ ಶರ್ಮಾ, ಕಮಲ್ ನಾಥ್, ಅಭಿಷೇಕ್‌ ಸಿಂಘ್ವಿ, ಡಿಎಂಕೆಯ ಕನಿಮೋಳಿ ಅವರನ್ನು ಭೇಟಿ ಮಾಡಿದ್ದಾರೆ. ಈ ಮೂಲಕ 2024ರ ಚುನಾವಣೆಗೆ ವಿರೋಧ ಪಕ್ಷಗಳ ಮೈತ್ರಿಕೂಟ ಕಟ್ಟುವ ಊಹಾಪೋಹಗಳಿಗೆ ಇಂಬು ನೀಡಿದ್ದಾರೆ. 

ದೆಹಲಿಯಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬ್ಯಾನರ್ಜಿ, ‘ವಿರೋಧ ಪಕ್ಷಗಳ ಒಗ್ಗಟ್ಟು ತಾನಾಗಿಯೇ ಮೂಡುತ್ತದೆ,’ ಎಂದಿದ್ದರು. 2024ಕ್ಕೆ ವಿರೋಧ ಪಕ್ಷಗಳ ನೇತೃತ್ವ ವಹಿಸುವಿರಾ ಎಂಬ ಪ್ರಶ್ನೆಗಳನ್ನು ಅವರು ಇದೇ ವೇಳೆ ತಳ್ಳಿಹಾಕಿದ್ದರು. 

ವಿರೋಧ ಪಕ್ಷಗಳು ಒಂದಾಗಬೇಕಾದ ಅನಿವಾರ್ಯತೆ ಇದೆ ಎಂದೂ ಮಮತಾ ಪ್ರತಿಪಾದಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು