ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರೂಕ್ ಅಬ್ದುಲ್ಲಾಗೆ ವ್ಯಂಗ್ಯದ ತಿರುಗೇಟು: ಏನಂದ್ರು ವಿವೇಕ್ ಅಗ್ನಿಹೋತ್ರಿ?

Last Updated 17 ಮೇ 2022, 12:31 IST
ಅಕ್ಷರ ಗಾತ್ರ

ನವದೆಹಲಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ದೇಶದಲ್ಲಿ ದ್ವೇಷವನ್ನು ಹರಡಿದೆ. ಅದನ್ನು ನಿಷೇಧಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಆಗ್ರಹಿಸಿದ್ದಾರೆ. ಇದಕ್ಕೆ ವ್ಯಂಗ್ಯವಾಗಿ ತಿರುಗೇಟು ನೀಡಿರುವ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ‘ಹೌದು, ನೀವು ಹೇಳಿರುವುದು ಸರಿಯಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಇಲ್ಲದಿದ್ದರೆ ಹಿಂದೂಗಳ ಹತ್ಯಾಕಾಂಡವೇ ನಡೆದಿರುತ್ತಿರಲಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.

‘ಫಾರೂಕ್ ಅಬ್ದುಲ್ಲಾ ಸಾಹೇಬರು ಚೆನ್ನಾಗಿ ಹೇಳಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಇಲ್ಲದಿದ್ದಲ್ಲಿ ಹಿಂದೂಗಳ ಹತ್ಯಾಕಾಂಡವೇ ನಡೆಯುತ್ತಿರಲಿಲ್ಲ. ನಿಮ್ಮ ನಿವಾಸಿಗಳು ರಲೀವ್, ಗಲೀವ್ ಹಾಗೂ ಚಲೀವ್ (ಮತಾಂತರವಾಗಿ, ತೊಲಗಿ ಅಥವಾ ಸಾಯಿರಿ) ಎಂಬ ಘೋಷಣೆಗಳನ್ನು ನನ್ನ ಸಿನಿಮಾದಿಂದ ಕಲಿತರು. ಇಲ್ಲದಿದ್ದರೆ ಆ ಅಮಾಯಕರಿಗೆ ಹೇಗೆ ಮಾತನಾಡಬೇಕೆಂಬುದೂ ತಿಳಿದಿರುತ್ತಿರಲಿಲ್ಲ. ಈ ಸಿನಿಮಾದ ಮೂಲಕವೇ ಪಾಕಿಸ್ತಾನದ ಧ್ವಜವನ್ನೂ ಅಲ್ಲಿ ಹಾರಿಸಲಾಗಿತ್ತು’ ಎಂದು ಟ್ವೀಟ್‌ನಲ್ಲಿ ವಿವೇಕ್ ಅಗ್ನಿಹೋತ್ರಿ ಉಲ್ಲೇಖಿಸಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ಮುಸ್ಲಿಂ ಸಮುದಾಯವನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಫಾರೂಕ್ ಅಬ್ದುಲ್ಲಾ ಸೋಮವಾರ ಹೇಳಿದ್ದರು.

‘ಲೆಫ್ಟಿನೆಂಟ್ ಗವರ್ನರ್ ಅವರಿಗೆ ಆ ಸಿನಿಮಾ (ದಿ ಕಾಶ್ಮೀರ್ ಫೈಲ್ಸ್) ಬಗ್ಗೆಯೂ ಹೇಳಿದ್ದೇನೆ. ಒಬ್ಬ ಮುಸಲ್ಮಾನ ಹಿಂದೂವನ್ನು ಕೊಂದು ರಕ್ತ ಬೆರೆತ ಅಕ್ಕಿಯನ್ನು ತಿನ್ನುವಂತೆ ಆತನ ಹೆಂಡತಿಯನ್ನು ಒತ್ತಾಯಿಸುತ್ತಾನೆ ಎಂಬುದು ನಿಜವಾಗಿರಲು ಸಾಧ್ಯವೇ? ಇದನ್ನು ನೀವು ನಂಬುತ್ತೀರಾ ಎಂದು ನಾನು ಅವರನ್ನು ಕೇಳಿದೆ’ ಎಂದು ಅಬ್ದುಲ್ಲಾ ಹೇಳಿದ್ದರು.

‘ಆ ಸಿನಿಮಾದಲ್ಲಿ ನಮ್ಮನ್ನು ಬಿಂಬಿಸಿರುವ ಬಗ್ಗೆ ನಮ್ಮ ಯುವಕರು ಸಿಟ್ಟಾಗಿದ್ದಾರೆ. ದೇಶದಾದ್ಯಂತ ಮುಸ್ಲಿಮರಿಗೆ ಆಗುತ್ತಿರುವ ಅನ್ಯಾಯಗಳು ನಮ್ಮ ಯುವಕರನ್ನು ಭಾವೋದ್ರೇಕಕ್ಕೆ ಒಳಗಾಗಿಸುತ್ತಿದೆ. ಅಂಥವುಗಳನ್ನು (ಸಿನಿಮಾ) ನಿಲ್ಲಿಸಬೇಕು’ ಎಂದು ಅಬ್ದುಲ್ಲಾ ಆಗ್ರಹಿಸಿದ್ದರು.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮಾರ್ಚ್‌ನಲ್ಲಿ ತೆರೆಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT